
ಮುಂಬಯಿ ತನ್ನದೆ ಕಾಸ್ಮೊಪಾಲಿಟಿನ್ ಮನಸ್ಥಿತಿಗೆ, ವೇಗದ ಜೀವನಕ್ಕೆ ಹೆಸರುವಾಸಿ, ಇಂದು ಆ ಮನಸ್ಥಿತಿಗೆ ಭೀತಿ ಮತ್ತು ವೇಗಕ್ಕೆ ತಡೆ ಬಿದ್ದಿದೆ. ಅಲ್ಲಿನ ವಲಸಿಗ ಪರಭಾಷಿಕರು ಈಗ ಮತ್ತೊಂದು ಆತಂಕ ಎದುರಿಸುತ್ತಿದ್ದಾರೆ. ಕನಸುಗಳ ನಗರಿ ಮತ್ತೊಮ್ಮೆ ಭಾಷಿಕ ಸಮಸ್ಯೆಗಳ ಬೆಂಕಿಗೆ ಸಿಲುಕಿದೆ. ಎಲ್ಲಿಂದಲೋ ಹೊಟ್ಟೆಪಾಡು ಅರಸಿ ಬಂದವರು, ಹೊಟ್ಟೆ ತುಂಬತೊಡಗಿದಂತೆ ಸ್ಥಳೀಯರೆಡೆಗೆ ತೋರಿದ ನಿರ್ಲಕ್ಷ್ಯ ಈಗ ಅವರನ್ನು ತಿರುಗಿ ಬೀಳುವಂತೆ ಮಾಡಿದೆ.
ಹಾಗೆ ನೋಡಿದರೆ ಮುಂಬಯಿಯಲ್ಲಿ ಈ ರೀತಿ ನೆಡೆಯುತ್ತಿರುವುದು ಇದೇ ಮೊದಲಲ್ಲ. ೧೯೬೦ರಲ್ಲಿ ಶಿವಸೇನೆಯ ಸ್ಥಾಪಕರಾದ ಬಾಳಾಸಾಹೇಬ ಠಾಕ್ರೆ ಇದೇ ರೀತಿಯಲ್ಲಿ ದಕ್ಷಿಣ ಭಾರತಿಯರ ಮೇಲೆ ಯುದ್ಧ ಘೋಷಿಸಿದ್ದರು. ಅದರೆ ಆಗ ಇದ್ದ ಕಾರಣಗಳು ಮತ್ತು ಪರಿಸ್ಥಿತಿಗಳೇ ಬೇರೆ. ಮುಂಬಯಿಯ ಆಗಿನ ಎಲ್ಲ ಖಾಸಗಿ, ಅರೆ-ಖಾಸಗಿ ಉದ್ಯಮಗಳಲ್ಲಿ ದಕ್ಷಿಣ ಭಾರತದ ಉದ್ಯೋಗಿಗಳು ಹೆಚ್ಚುತ್ತಿರುವ ಸಂಖ್ಯೆಗೆ ಹೆದರಿದ, ಅವಕಾಶ ವಂಚಿತ ಮರಾಠಿಗರ ಮುಖವಾಣಿಯಾಗಿ ಅಂದು ಠಾಕರೆ ಘೋಷಿಸಿದ್ದು “ಪುಂಗಿ ಬಜಾವೋ, ಲುಂಗಿ ಭಗಾವೋ” (ಪುಂಗಿ ಊದಿರಿ, ಲುಂಗಿ ಓಡಿಸಿರಿ). ಅಂದು ಮರಾಠಿಗರು ದಕ್ಷಿಣ ಭಾರತಿಯರ ಮೇಲೆ ಮುರಿದುಕೊಂಡು ಬಿದ್ದಿದ್ದರು.
ನಲವತ್ತೆಂಟು ವರ್ಷಗಳ ಹಿಂದೆ ನಡೆದ ಈ ಘಟನೆಯಲ್ಲಿ ಎರಡೂ ಗುಂಪಿನ ನಡುವೆ ಹಲ್ಲೆಗಳು, ಕೊಲೆಗಳು ನೆಡೆದಿದ್ದವು. ಆ ವೇಳೆಗಾಗಲೇ ಮುಂಬಯಿಯಲ್ಲಿ ತಳವೂರಿದ್ದ ದಕ್ಷಿಣ ಭಾರತೀಯರು ನಂತರದ ದಿನಗಳಲ್ಲಿ ಮನೆಯ ಹೊರಗಡೆ ತಮ್ಮ ಭಾಷೆಗಳನ್ನು ಬಳಸಲು ಹೆದರಲಾರಂಭಿಸಿದ್ದರು. ಈ ಘಟನೆಗಳನ್ನು ಬಲವಾಗಿಟ್ಟುಕೊಂಡು ೧೯೬೬ರಲ್ಲಿ ಹುಟ್ಟಿದ್ದು ಶಿವಸೇನೆ. ಅಂದು ಬಾಳಾ ಠಾಕರೆ ದಕ್ಷಿಣ ಭಾರತೀಯರ ಮೇಲೆ ಪ್ರಯೋಗಿಸಿದ ಅಸ್ತ್ರವನ್ನೇ ಇಂದು ರಾಜ್ ಠಾಕರೆ ಉತ್ತರ ಭಾರತೀಯರ ಮೇಲೆ ತೇಲಿಸಿದ್ದಾರೆ. ಈವತ್ತು ಮುಂಬಯಿಯಲ್ಲಿ ನೆಡೆಯುತ್ತಿರುವ ಘಟನೆಗಳಿಗೆ ರಾಜಕೀಯ ಕಾರಣಗಳಿರಬಹುದು. ಆದರೆ ಇದಕ್ಕೆ ಬಲಿಯಾಗುತ್ತಿರುವುದು ‘ಆಮ್ ಆದ್ಮಿ’ ಎಂಬ ಸಾಮಾನ್ಯ ನಾಗರಿಕ.
ಈ ಲೇಖನ “ಕೆಂಡಸಂಪಿಗೆ.ಕಾಂ” ನಲ್ಲಿ ದಿನದ ಸುದ್ದಿ (೦೯/೦೨/೨೦೦೮) ವಿಭಾಗದಲ್ಲಿ ಪ್ರಕಟವಾಗಿದೆ. ಪ್ರಕಟಿಸಿದ ಸಂಪಾದಕರಿಗೆ ಧನ್ಯವಾದಗಳು.

0 Responses to “ಮುಂಬಯಿ ಕಥೆ-ವ್ಯಥೆ”