

“ಮಾಮಾ ಸುಮ್ಮಿ ಹಿಂಗ್ಯಾಕ್ ಮಾಡಿದ್ಲು, ಹೇಳೊ ಮಾಮಾ” ಎಂದನ್ನುತ್ತಾ ಗ್ಲಾಸಿನಲ್ಲಿ ಇಗಷ್ಟೆ ಹಾಕಿದ್ದ ಹಸಿ ಕಹಿ ದ್ರವವನ್ನು ಹಾಗೆಯೇ ಪೂರ್ತಿಯಾಗಿ ಎತ್ತಿದ ವಸಂತ ಮತ್ತೆ ಬಿಕ್ಕಲಾರಂಭಿಸಿದ. ಆಗಷ್ಟೆ ನಿಲ್ಲಿಸಿದ್ದ ಅಳು ಮತ್ತೆ ತಾರಕಕ್ಕೆರಿಸಿದ. ಇವನ ಇವತ್ತಿನ ಈ ಪರಿಸ್ಥಿತಿಗೆ ನಾನೇ ಅಲ್ಲವೇ ಕಾರಣ ಎಂದೆನಿಸಿತು.
ನಾನು ಮತ್ತು ವಸಂತ ಚೆಡ್ಡಿ ಗೆಳೆಯರೇನು ಅಲ್ಲ. ನಾವಿಬ್ಬರು ಬೆಟ್ಟಿಯಾಗಿದ್ದು ಡಿಗ್ರಿ ಮೊದಲ ವರ್ಷದಲ್ಲಿ. ಕಂತು-ಕಂತುಗಳಲ್ಲಿ ಪಾಸಾಗಿ ಬಿ.ಎಸ್ಸಿ.ಗೆ ಬಂದಿದ್ದ ನನಗೆ ಅರ್ಜೆಂಟಾಗಿ ಯಾರಾದರೂ ಹೋಸ ಗೆಳೆಯರು, ಅದರಲ್ಲೂ ನನಗೆ ಪ್ರ್ಯಾಕ್ಟಿಕಲ್ಲು-ಅಸ್ಸೈನುಮೆಂಟುಗಳಲ್ಲಿ ಹೇಲ್ಪ ಮಾಡುವವರು, ಬೇಕಿತ್ತು. ರಾಯಚೂರಿನಿಂದ ಬಂದಿದ್ದ ವಸಂತನಿಗೂ ಯಾರು ಗೆಳೆಯರಿದ್ದಿಲ್ಲ ಹೀಗಾಗಿ ನಾನು ಕೈ ಚಾಚಿದ ಗೆಳೆತನವನ್ನು ಕೈ ಹಿಡಿದ.
ನಮ್ಮಿಬ್ಬರ ಗುಣಗಳು ಒಂದಕ್ಕೊಂದು ಹೊಂದುತ್ತಲೇ ಇರಲಿಲ್ಲ, ಅವನು ಕಲಿಯಲು ದಿನಾ ಕ್ಲಾಸಿಗೆ ಹೋದರೆ ನಾನು ದಿನಾಲೂ ಅಲೆಯಲು ಬೇಜಾರಾಗಿ ಯಾವಾಗಲೊ ಒಂದು ಸಾರಿ ಕ್ಲಾಸಿಗೆ ಹೋಗುತ್ತಿದ್ದೆ. ಅವನು ಹುಡುಗಿಯರನ್ನು ಕಂಡರೆ ಮೂರು ಮಾರು ದೂರ, ನನ್ನನ್ನು ಕಂಡರೆ ಹುಡುಗಿಯರೆ ಮೂರು ಮಾರು ದೂರ. ಆದರೂ ಆ ವಿಶ್ವಾಮಿತ್ರನ ಖಾಸಮ್-ಖಾಸ ತಮ್ಮನಂತಿದ್ದ ವಸಂತನ ಅಸ್ಸೈನಮೆಂಟು, ಪ್ರ್ಯಾಕ್ಟಿಕಲ್ಲ ನೋಟ್ಸಗಳಿಗಾಗಿ ಹುಡುಗಿಯರು ನನಗೆ ಹತ್ತಿರವಾಗಬೇಕಾಯ್ತು. ಅವನಿಗೆ ತಿಳಿಯದಂತೆ ಅವನ ನೋಟ್ಸುಗಳನ್ನು ಹುಡುಗಿಯರಿಗೆ ಕೊಡುತ್ತ ಅವರೊಡನೆ ಸಿನೇಮಾ, ಹೋಟೆಲು, ಆಯಸ್ಕ್ರೀಮ್ ಪಾರ್ಲರ್ ಎಂದೆಲ್ಲ ಹೋಗತೊಡಗಿದೆ.
ಹಾಗೂ-ಹೀಗೂ ಡಿಗ್ರಿ ಮುಗಿಸಿ, ಯುನೀವರ್ಸಿಟಿ ಮೆಟ್ಟಿಲು ಹತ್ತಿದೆ. ಪ್ರತಿಭೆಯಿಂದಾಗಿ ವಸಂತನಿಗೂ, ನಮ್ಮಜ್ಜ ಯಾವಾಗಲೋ ಪಟ್ಟ ಕಷ್ಟಕ್ಕಾಗಿ ಇವತ್ತು ನನಗೆ ಕೊಟ್ಟ ಕೋಟಾದಲ್ಲಿ ಇಬ್ಬರಿಗೂ ಒಂದೇ ಸಬ್ಜೆಕ್ಟಿನಲ್ಲಿ ಪಿ.ಜಿ. ದೊರೆಯಿತು. ಹಾಸ್ಟೆಲಿನಲ್ಲಿ ರೂಮ್ ಕೂಡಾ ಒಂದೇ ಸಿಕ್ಕಿತು. ಹಾಗೆಯೇ ಹೋಸ ಊರು, ಹೋಸ ಕಾಲೇಜು, ಹೋಸ ಗೆಳೆಯರು, ಹೋಸ ಹುಡುಗಿಯರು ಎಂದೆಲ್ಲಾ ನಾನು ನನ್ನದೆ ಹಾದಿಯಲ್ಲಿ ಸಾಗುತ್ತಿದ್ದಾಗ. ಒಂದು ದಿನ ಒಮ್ಮಿಂದೊಮ್ಮಲೆ ವಸಂತ, “ನಾನು ಸುಮ್ಮಿನ್ನ ಲವ್ ಮಾಡಾಕತ್ತಿನಿ” ಎಂದು ಘೋಷಿಸಿದ.
ನಮ್ಮೂರಿನ ಕಾಲೇಜಿನಲ್ಲಿ ಹಾಳೂರಿಗೆ ಉಳಿದವನೇ ಗೌಡ ಎಂಬತ್ತಿದ್ದ ವಸಂತ, ಇಲ್ಲಿ ಅವನಿಗಿಂತ ಬುದ್ದಿವಂತರನ್ನು ಎದುರಿಸಬೇಕಿತ್ತು. ಅದಕ್ಕೆ ತಕ್ಕಂತೆ ಪ್ರಯತ್ನ ಪಡುತ್ತ ಮೊದಲ ಸೆಮೇಸ್ಟರನಲ್ಲಿ ಎಲ್ಲರನ್ನೂ ಹಿಂದೆ ಹಾಕಿದ, ಆದರೆ ಒಂದು ಹುಡುಗಿಯನ್ನು ಬಿಟ್ಟು ಅವಳೆ ಈ “ಸುಮತಿ”. ಅವತ್ತಿನಿಂದ ಅವಳನ್ನು ಇನ್ನಿಲ್ಲದಂತೆ ದ್ವೇಷಿಸತೋಡಗಿದ. ಇವರಿಬ್ಬರ ಪೈಪೋಟಿ ಎಲ್ಲಿಯವರೆಗೂ ಮುಂದುವರೆಯಿತಂದರೆ ಕೆಲವೊಮ್ಮೆ ಕ್ಲಾಸಿನ ಪಿರೀಯಡನಲ್ಲಿ ಪ್ರಾರಂಭವಾಗುವ ಚರ್ಚೆಗಳು ಕೇವಲ ಇವರಿಬ್ಬರ ಅಹಂಕಾರಕ್ಕೆ, ಕೋಪಕ್ಕೆ, ಜಾಣ್ಮೆ ಪ್ರದರ್ಶನಕ್ಕೆ ವೇದಿಕೆಗಳಾಗತೊಡಗಿದವು, ಲೈಬ್ರರಿಯಲ್ಲಿ ಪುಸ್ತಕಕ್ಕಾಗಿ ಪೈಪೋಟಿ, ಸಾಯಂಕಾಲ ಕ್ಲಾಸುಗಳೆಲ್ಲ ಮುಗಿದ್ ಮೇಲೆ ತುಂಬಾ ಹೊತ್ತಿನವರೆಗೂ ಪ್ರ್ಯಾಕ್ಟಿಕಲ್ ಮಾಡುವುದಕ್ಕೆ ಪೈಪೋಟಿ. ಇವರ ಸಂಘರ್ಷಗಳು ಹೀಗೆ ನೆಡೆಯುತ್ತಿರಬೇಕಾದರೆ ಒಂದು ದಿನ ರಾತ್ರಿ ಎಂಟುವರೆಯಾದರೂ ಲ್ಯಾಬಿನಲ್ಲೆ ಇದ್ದಾರೆ, ಆಗ ಕರೆಂಟ್ ಹೋಗಿದೆ. ಕತ್ತಲಲ್ಲಿ ಹೆದರಿದವಳನ್ನು ವಸಂತ ಹಾಸ್ಟೇಲಿನವರೆಗೂ ಬಿಟ್ಟು ಬಂದ ವಸಂತ ಮತ್ತೆ ತನಗೆ ತಾ ಸಿಗದಂತೆ ಕಳೆದು ಹೋದ.
ಅವರಿಬ್ಬರ ಒಡನಾಟ ಹೆಚ್ಚಿತು, ಹಾಗೆಯೇ ಅವರಿಬ್ಬರೆ ಲೈಬ್ರರಿ, ಡೆಪಾರ್ಟಮೆಂಟ, ಕ್ಯಾಂಟಿನು ಎಂದೆಲ್ಲಾ ಹೋಗತೊಡಗಿದರು, ಎಲ್ಲರೂ ಅದನ್ನು ಕ್ಯಾಂಪಸ್ಸಲ್ಲಿ ಕಾಮನ್ ಅಂದುಕೊಂಡು ಹೆಚ್ಚು ಗಮನ ನೀಡಲಿಲ್ಲ. ಆದರೆ ಅದರಿಂದ ನಿಜವಾಗಿಯೂ ಕಂಗಾಲಾದವನು ನಾನು!!!.ನನಗೆ ಅಸ್ಸೈನಮೆಂಟ ಬರೆಯಲು ಹೆಲ್ಪ ಮಾಡುವುದಿರಲಿ, ನೋಟ್ಸ್ ಕೊಡುವುದಿರಲಿ ಅವನು ರೂಮಿನಲ್ಲಿ ನನಗೆ ಸಿಗುವುದೆ ಅಪರೂಪವಾಯಿತು. ಅಷ್ಟರಲ್ಲೆ ಎರಡನೆಯ ಸೆಮೇಸ್ಟರನ ಪರೀಕ್ಷೆಗಳು ಎದುರಾದವು. ಯಥಾಪ್ರಕಾರ ಅವರಿಬ್ಬರೂ ಮೊದಲೆರಡು ಸ್ಥಾನ ಗಳಿಸಿದ್ದರೆ, ನಾನು ಡಿಸ್ಟಿಂಕ್ಷನ್ನೊಂದಿಗೆ ವಾಷೌಟ್ ಆದೆ. ಮನಸ್ಸು ನಾನು ಫೇಲಾಗೊದಿಕ್ಕೆ ‘ಅವಳೇ’ ಕಾರಣ ಎಂದಿತು.
ಕ್ಯಾರಿ ಓವರ್ ಸಿಸ್ಟಮ್ ಇದ್ದುದರಿಂದ ೩ನೇ ಸೆಮೇಸ್ಟರಿಗೆ ಅಡ್ಮಿಷನ್ನೇನೊ ಸಿಕ್ಕಿತು, ಫೇಲಾಗಿದ್ದರಿಂದ ಹಾಸ್ಟೇಲಿನಲ್ಲಿ ರೂಮ್ ದೊರಕಲಿಲ್ಲ; ಹೋರಗೆ ರೂಮ್ ಮಾಡಬೇಕಾಯ್ತು. ಹೋರಗೆ ರೂಮ್ ಮಾಡಿದ ನಂತರವೂ ದಿನಾ ಗೆಳೆಯರೊಂದಿಗೆ ಪಾರ್ಟಿ-ಕುಡಿತ ಎಂದೆಲ್ಲಾ ರಾತ್ರಿ ಹಾಸ್ಟೇಲಿನ ಗೆಳೆಯರ ರೊಮ್ ಗಳಲ್ಲಿ ಇರತೊಡಗಿದ್ದೆ. ಇದೆಲ್ಲ ಗೋತ್ತಾಗಿ ವಸಂತ ಒಂದೆರಡು ಬಾರಿ ಸಿಕ್ಕು ಬುದ್ದಿ ಹೇಳುತ್ತಿದ್ದ, ನಾನೂ ಪ್ರತಿ ಹುಂ ಗುಟ್ಟುತ್ತಿದ್ದೆ, ಮತ್ತೆ ಅದೆ ದಿನ ರಾತ್ರಿ ಕುಡಿದಾಗೆ ಅವನಿಗೆ ಸಿಕ್ಕು ಕಣ್ಣು ತಪ್ಪಿಸುತ್ತಿದ್ದೆ. ಹೀಗೆ ಒಂದು ದಿನ ಅವನಿಗೆನನ್ನಿಸಿತೋ ತನ್ನೆಲ್ಲ ಸಾಮಾನುಗಳನ್ನು ಎತ್ತಿಕೊಂಡು ನನ್ನ ರೂಮಿಗೆ ಬಂದು ವಾಸಿಸತೊಡಗಿದ. ನಾನೂ ದುಡ್ಡಿಲ್ಲವೆಂದೊ, ಅವನ ಹೇದರಿಕೆಗೋ ದಿನಾ ಸಂಜೆ ಡಿಪಾರ್ಟಮೆಂಟಿನಿಂದ ರೂಮಿಗೆ ಬರತೊಡಗಿದೆ. ಅವನು ಮತ್ತೆ ಹಿಂದಿನ ಹಾಗೆ ನನಗೆ ಅಸೈನುಮೆಂತುಗಳಲ್ಲಿ ಹೇಲ್ಪ ಮಾಡತೊಡಗಿದ. ಆದರೆ ಡಿಪಾರ್ಟಮೆಂಟಿನಲ್ಲಿ, ಲೈಬ್ರರಿಯಲ್ಲಿ ನನಗೆ ಸಿಗುತ್ತಿರಲಿಲ್ಲ ಯಾವಾಗಲೂ ಸುಮತಿಯೊಂದಿಗೆ ಇರುತ್ತಿದ್ದ. ಅವಳನ್ನು ನೋಡಲು, ಮಾತನಾಡಿಸಲು ನನಗಾಗುತ್ತಿರಲಿಲ್ಲ.
ಅವಳು ಆಗಾಗ ರೂಮಿಗೆ ಬರಹತ್ತಿದಳು, ಅವಳು ಬರುತ್ತಿದ್ದಂತೆಯೇ ನಾನು ಎದ್ದು ಹೋರನೆಡೆಯುತ್ತಿದ್ದೆ, ಕೆಲವೊಮ್ಮೆ ಇಲ್ಲೆ ಕೆಲಸವಿದೆ ಎಂದು ಕಾರಣ ಕೊಟ್ಟು ಹೋರನೆಡೆಯುತ್ತಿದ್ದೆ. ಅವಳು ಮರಳಿ ಹೋದ ಸುಳಿವು ಸಿಕ್ಕೊಡನೆ ರೂಮಿಗೆ ವಾಪಾಸು ಬರುತ್ತಿದ್ದೆ, ನಾನು ಹೀಗೆ ಬಂದಾಗಲೆಲ್ಲ ವಸಂತ “ಅವಳೆಷ್ಟು ನೊಂದಳು ಗೊತ್ತಾ ನೀನು ಹಾಗೆ ಎದ್ದು ಹೋದಾಗ” ಎನ್ನುತ್ತಿದ್ದ ಆವಾಗೆಲ್ಲ ನಾನು ಪ್ಯಾಲಿ ನಗೆ ನಗುತ್ತಿದ್ದೆ.
ಆಮೇಲಾಮೇಲೆ ಅವಳು ಬರುವುದು, ನಾನು ಎದ್ದು ಹೋಗುವುದು ಪದ್ಧತಿಯಾಯ್ತು. ಅವರಿಬ್ಬರು ಕೆಲವೊಮ್ಮೆ ಚರ್ಚೆಗಿಳಿದರೆ ಸಮಯದ ಪರಿವೆ ಅವರಿಗಿರುತ್ತಿರಲಿಲ್ಲ, ಆವಾಗೆಲ್ಲ ನಾನು ಪಕ್ಕದ ರೂಮುಗಳಿಗೆ ಹೋಗಿ ಕುಳಿತುಕೊಳ್ಳುತ್ತಿದ್ದೆ, ಅವರು ಸಮಯ ನೋಡಿ ಯಾಕೆಂದು ಕೇಳಿದಾಗಲೆಲ್ಲ, “ಸುಮತಿ ಬಂದಾಳ” ಎಂದು ಹೇಳಿ ಕಣ್ಣು ಹೋಡೆದು ಹುಸಿ ನಗೆ ನಗುತ್ತಿದ್ದೆ. ಅದು ಅವರಿಂದ ಇನ್ನೊಬ್ಬರಿಗೆ, ಇನ್ನೊಬ್ಬರಿಂದ ಮತ್ತೊಬ್ಬರಿಗೆ ತಿಳಿದು ಹೋಗಿ, ಡಿಪಾರ್ಟಮೆಂಟಿನಲ್ಲಿ ಎಲ್ಲ ಹುಡುಗರು ‘ಹಿಂಗಿಂಗ ಅಂತಲ್ಲಾ?’ ಎಂದು ಕೇಳಿದಾಗೆಲ್ಲ ಮತ್ತೊಂದು ಹುಸಿ ನಗೆ ನಗುತ್ತಿದ್ದೆ. ಹುಡುಗರಿಂದ ಹುಡುಗಿಯರಿಗೂ, ಅವರಿಂದ ಇಡಿ ಹುಡುಗಿಯರ ಹಾಸ್ಟೇಲಿಗೂ ಸುದ್ದಿ ತಿಳಿಯಲು ಹೆಚ್ಚು ಹೋತ್ತು ಹಿಡಿಯಲಿಲ್ಲ. ಮೊದಲೆ ಸುಮತಿಯ ಸೌಂದರ್ಯ ಮತ್ತು ಬುದ್ದಿವಂತಿಕೆಯ ರೇರ್ ಕಾಂಬಿನೇಷನಗೆ ಕುರುಬುತ್ತಿದ್ದ ಕೇಲವು ಹುಡುಗಿಯರು ಅದಕ್ಕೆ ರೆಕ್ಕೆ, ಪುಕ್ಕ ಕಟ್ಟಿ ದಿನಕ್ಕೊಂದು ಕಥೆ ಹುಟ್ಟಿಸಲಾರಂಭಿಸಿದರು. ಅವರಿಬ್ಬರಿಗೂ ತಿಳಿಯದಂಥೆ ನಾನೂ ಬೆಂಕಿಗೆ ತುಪ್ಪ ಸುರಿದು, ಗಾಳಿ ಬೀಸಲಾರಂಭಿಸಿದೆ. ಅವನ್ನೆಲ್ಲ ವಸಂತನೇ ನನಗೆ ಹೇಳಿದ್ದಾಗಿ ಎಲ್ಲರ ಕಿವಿಯಲ್ಲೂ ಉದಿದೆ.
ಅದೊಂದು ದಿನ ಬೆಳಿಗ್ಗೆಯೇ ಸುಮತಿ ರೂಮಿಗೆ ಬಂದಳು, ಯಥಾಪ್ರಕಾರ ನಾನು ಎದ್ದು ಹೋರಟೆ. ನಾನು ಮರಳಿ ರೂಮಿಗೆ ಬಂದಾಗ ವಸಂತ ರೂಮಿನ ತುಂಬೆಲ್ಲಾ ತನ್ನ ನೋಟ್ಸು-ಪುಸ್ತಕಗಳನ್ನು ಹರಿದು ಬೀಸಾಡಿ ಅಳುತ್ತ ಮೂಲೆಯಲ್ಲಿ ಕುಳಿತಿದ್ದ. ನನ್ನನ್ನು ನೋಡಿದವನೆ “ಮಾಮಾ ಸುಮ್ಮಿ ಹಿಂಗ್ಯಾಕ್ ಮಾಡಿದ್ಲು” ಎನ್ನುತ್ತಾ ಅವಳು ಹರಿದು ಹಿಂದಿರುಗಿಸಿ ಹೋಗಿದ್ದ ಗ್ರೀಟಿಂಗ್ಸ ಕಾರ್ಡಿನ ಚೂರುಗಳನ್ನು ಜೋಡಿಸಲಾರಂಭಿಸಿದ.
ಅವನ ಆ ಪರಿಸ್ಥಿತಿ ಕಂಡು ಮನಸ್ಸಿಗೆ ನೊವಾಯಿತು, ನಾನು ಮಾಡಿದ್ದು ತಪ್ಪು, ಅವನಿಗೆ ನನ್ನ ತಪ್ಪುಗಳನ್ನೆಲ್ಲ ಹೇಳಬಯಸಿದ್ದೆ ಆದರೆ ಹೇಳಲಿಲ್ಲ, ಇವತ್ತಿಗೂ ಹೇಳಿಲ್ಲ.
ಅವನ ಪ್ರಶ್ನೆಗಿನ್ನೂ ಉತ್ತರವೇ ಸಿಕ್ಕಿಲ್ಲ, ಮತ್ತೊಮ್ಮೆ ಗ್ಲಾಸಿನಲ್ಲಿ ಇಗಷ್ಟೆ ಹಾಕಿದ್ದ ಹಸಿ ಕಹಿ ದ್ರವವನ್ನು ಹಾಗೆಯೇ ಪೂರ್ತಿಯಾಗಿ ಎತ್ತಿದ ವಸಂತ ಮತ್ತೆ “ಮಾಮಾ ಸುಮ್ಮಿ ಹಿಂಗ್ಯಾಕ್ ಮಾಡಿದ್ಲು, ಹೇಳೊ ಮಾಮಾ” ಎಂದು ಕೇಳತೋಡಗಿದ. ಅವನಿಗೇನು ಹೇಳಬೇಕೆಂದು ತಿಳಿಯದೆ ಖಾಲಿಯಾದ ಅವನ ಗ್ಲಾಸನ್ನು ಮತ್ತೆ ತುಂಬಿಸಿದೆ.
Recent Comments