
ಬೆಳಿಗ್ಗೆಯಿಂದ ಯಾಕೋ ಅವನ ಮನಸ್ಸು ಗೊಂದಲದ ಗೂಡಾಗಿದೆ, ತನಗೆ ಎನೋ ಅಗಿದೆ ಆತಂಕ ಅವನಿಗೆ ಕ್ಷಣ ಕಣಕ್ಕೂ ಹೆಚ್ಚಾಗುತ್ತಿದೆ, ಎನೋ ಆಗಿದೆ ಎಂಬ ಆತಂಕಕ್ಕಿಂತ ಅದನ್ನು ಯಾರಿಗೆ ಹೇಳಬೇಕೆಂಬ ಗೊಂದಲವೇ ಅವನನ್ನು ಆವರಿಸಿದೆ. ಇದನ್ನು ಯಾರಿಗೆ ಹೇಳಲಿ? ಎನೆಂದು ಹೇಳಲಿ? ಹೇಗೆ ಹೇಳಲಿ?…
ಅವನು ಬಲು ಚೂಟಿ ಹುಡುಗ, ಯಾವ ಕ್ಷಣಕ್ಕೂ ಸುಮ್ಮನೆ ಕುಳಿತುಕೊಳ್ಳುವನೇ ಅಲ್ಲ. ಆದರೆ ಇತ್ತಿಚಿಗೆ ಕೆಲವು ದಿನಗಳಿಂದ ಮಂಕಾಗಿರುತ್ತಾನೆ, ಎನೋ ಯೋಚಿಸುತ್ತಾನೆ, ಮನೆಯಲ್ಲಿ ಎಲ್ಲರ ಮೇಲು ಗುರ್ರೆನ್ನುತ್ತಾನೆ, ಮನೆಯ ನೆರಳಲ್ಲಿ ಸುಮ್ಮನೆ ಮಲಗಿರುವ ನಾಯಿಗೆ ವಿನಾಕಾರಣ ಕಲ್ಲೆಸೆಯುತ್ತಾನೆ. ಅವನ ಮನಸ್ಸಿನಲ್ಲಿ ಎನೊ ಕಾಡ್ತಾಯಿದೆ, ಅದು ಹೊರಗೆ ಬರದೆ ಇವನನ್ನು ಕಾಡಿಸುತ್ತಿದೆ.
ಇತ್ತಿಚಿಗೆ ಅವನಿಗೆ ಎಲ್ಲಾ ಓಂಥರಾ ಅನಿಸುತ್ತಿದೆ, ಎಲ್ಲೆಲ್ಲೊ ಹೋಸದಾಗಿ ಮೂಡುತ್ತಿರುವ ಕೂದಲು, ಮನಸ್ಸಿನಲ್ಲಿ ಮೂಡುತ್ತಿರೋ ಎನೇನೊ ಹೋಸ ಆಸೆಗಳು, ಮಲಗಿದವನಿಗೆ ಬೆಚ್ಚಿ ಬಿಳುವ ಕನಸುಗಳು, ನಿದ್ದೆಗಣ್ಣಲ್ಲಿ ಹೋರಳಾಟ, ಹುಡುಗಿಯರನ್ನು ಕಂಡಾಗ ಗರಿಗೆದರೋ ಆಸೆಗಳು, ಮರುಕ್ಷಣದಲ್ಲಿ ಹುಟ್ಟುವ ಗಾಭರಿ, ರಾತ್ರಿ ಯಾವದೋ ಹೊತ್ತಿನಲ್ಲಿ ಒದ್ದೆಯಾಗುವುದು, ಬೆಳಿಗ್ಗೆ ಎಳುವಾಗ ಅದರಿಂದಾಗುವ ಕಿರಿಕಿರಿ ಎಲ್ಲವೂ ಹೋಸದವನಿಗೆ.
‘ಅವ್ವನಿಗೆ ಇದರ ಬಗ್ಗೆ ಹೇಳಲಾ?’, ‘ಆವಾಗಲೇ ಯಾಕೋ ಹೇಳಲಿಲ್ಲ’ ಎಂದು ಕೇಳಬಹುದು, ಎಲ್ಲಿ ತೋರಿಸೆಂದರೆ? ಛೇ ಬೇಡ. ಅಪ್ಪನಿಗೆ ಹೇಳಿದರಾಯಿತು ಎಂದುಕೊಂಡ ಮರುಕ್ಷಣವೇ ‘ಎನು ಮಾಡ್ಕೊಂಡಿ ಖರೆ ಹೇಳು, ಎಲ್ಲಿ ಹೋಗಿದ್ದಿ’ ಅನ್ಕೊಂತ ಬೆನ್ನಿಗೆ ಒಂದೆರಡೂ ಬಿಟ್ಟರು ಬಿಟ್ಟನೇ…ಬೇಡಪ್ಪ ಬೇಡ. ಇನ್ನು ಅಕ್ಕನಿಗೆ..ಛೇ ಆಕಿ ಬಾಯಾಗ ಒಂದ ಮಾತು ನಿಲ್ಲುದಿಲ್ಲ ಸೀದಾ ಹೋಗಿ ಅವ್ವಗ ಹೇಳುವಾಕಿನ ಆಕಿ, ಸುಮ್ಮನ ಒಣಾ ಕಿರಿಕಿರಿ, ಅಣ್ಣಗ ಕೇಳಿದ್ರ ಹೆಂಗಂಥ? ಅಂವಗ ಗೊತ್ತಿರಾಕ ಬೇಕು, ಎನೇನೊ ಪುಸ್ತಕಾ ಮುಚ್ಚಿಟ್ಕೊಂಡು ಓತ್ತಾನಂವ. ಆದ್ರ ಅವನ ಕಮಾಯಿಗೋಳ್ನ ಅಪ್ಪಗ ರೀಪೊರ್ಟ ಮಾಡ್ತಿನಂತ ಇದನ್ನ ಮುಂದ ಮಾಡಿ ತನ್ನೂ ಎಲ್ಲ ಕೆಲಸಾ ನನ್ನ ಮ್ಯಾಲೆ ಹಾಕ್ತಾನ, ಅಂವನ ಸುದ್ದಿನ ಬ್ಯಾಡ.
ಇನ್ನು ಉಳಿದವರಂದ್ರ ತಮ್ಮ-ತಂಗಿ, ಅವ್ರಿಬ್ರೂ ಇನ್ನೂ ಸಣ್ಣಾವ್ರು ಅವ್ರಿಗೇನೂ ಗೋತ್ತಿರುದಿಲ್ಲ, ಹಾಂ.. ಹಿಂಗ ಮಾಡಿದ್ರ ಹೆಂಗ, ಸಾಲ್ಯಾಗ ಸರ್ ನ ಕೇಳಿದ್ರ? ಅವ್ರು ನಕ್ಕು ಇಷ್ಟು ಗೋತ್ತಿಲ್ಲನ ದಡ್ಡಾ ಅಂದ್ಕೊಂಡ್ರ, ಛೆ ಬ್ಯಾಡಪಾ. ಗೆಳ್ಯಾರಗೆ ಹೇಳಿದ್ರ ಸುಮ್ಮ ಅವರ ನಗುವಿಗೆ ಮೂಲ ಆಕ್ಕೇನ, ಛೇ ಇದನ್ನ ಯಾರಿಗೆ ಕೇಳಬೇಕು? ಡಾಕ್ಟರಗೇನರ ತೋರಸಬೇಕೇನೊ…
ಹೀಗೆ ದಿನಗಳು ಕಳೆದಂತೆ ಗೆಳೆಯರೊಂದಿಗೆ ಅದರ ಬಗ್ಗೆ ಮಾತನಾಡಿದ, ಗೆಳೆಯರೋ ಇವನಿಗಿಂತ ಹೆಚ್ಚು ಗೊಂದಲದಲ್ಲಿದ್ದರು, ‘ಹೀಗಂತೆ, ಹಾಗಂತೆ,ಅವರಿವರು ಹೇಳಿದ್ದು’, ‘ಅದು ಒಂದು ಹನಿ ಆಗಲು ೧೫ ಹನಿ ರಕ್ತ ಬೇಕು…’, ‘ವಿವೇಕಾನಂದರು ಅದನ್ನೆ ಕುಡಿತಿದ್ದರಂತೆ, ಅದಕ್ಕೆ ಅವರ ಮುಖದಲ್ಲಿ ಆ ತೇಜಸ್ಸು…’, ‘ಎ ಹೋಗ್ಲೋ ಅದಕ್ಕೆ ಅವರು ಬೇಗ ಸತ್ತಿದ್ದು…’, ‘ಅದು ಹೋದ್ರೆ ವೀಕ್ ಆಗ್ತಾರಂತೆ, ಮೂಂದೆ ತುಂಬಾ ಪ್ರಾಬ್ಲಮ್…’, ‘ಎಷ್ಟು ದೊಡ್ಡದಿರುತ್ತೊ ಅಷ್ಟು ಓಳ್ಳೆದೋ…”, ‘ಹುಡಿಗಿಯರನ್ನ ಪ್ರೀತಿಸಬೇಕು..’, ‘ಈ ಪ್ರೀತಿ, ಪ್ರೇಮ ಎಲ್ಲಾ ಸುಳ್ಳು…’, ಬ್ರಹ್ಮಚರ್ಯ ಪಾಲಿಸಬೇಕು, ಕಂಟ್ರೋಲ್ ಮಾಡ್ಕೊಬೇಕು..’, ‘ಉಪ್ಪು-ಖಾರ ಕಡಿಮೆ ಮಾಡಬೇಕು, ಉಳ್ಳಾಗಡ್ಡಿ (ಇರುಳ್ಳಿ), ಬಳ್ಳೊಳ್ಳಿ ತಿನ್ಲೇಬಾರ್ದು’ ಅಂತೆಲ್ಲಾ ಅವನು ಕೇಳಿದ್ದು, ಕೇಳಿಲ್ಲದ್ದು ಎಲ್ಲಾ ಹೇಳಿ ಅವನನ್ನು ಇನ್ನೂ ಗೊಂದಲಕ್ಕೆ ನೂಕಿದರು, ಕೇಲವರು ಎಂಥವೊ ಪುಸ್ತಕಗಳನ್ನು ಕೊಟ್ಟು ಅವನ ಗೊಂದಲಗಳನ್ನು ಹೆಚ್ಚಿಸುವುದರಲ್ಲಿ ತಮ್ಮ ಕಾಣಿಕೆಗಳನ್ನು ಸಲ್ಲಿಸಿದರು. ಆವತ್ತಿನಿಂದ ಇವತ್ತಿನವರೆಗೂ ಆ ಗೊಂದಲಗಳಲ್ಲೆ ಬೆಳದ, ಆ ಗೊಂದಲಗಳಲ್ಲೆ ಕಲಿತ-ನೌಕರಿ ಹಿಡಿದ, ಒಟ್ಟಿನಲ್ಲಿ ದೊಡ್ಡವನಾದ, ಹಾಗೆಯೇ ಗೊಂದಲಗಳು ಬೆಳೆದವು. ಹೀಗೆ ಗೊಂದಲಗಳ ಸುಳಿಗೆ ಸಿಕ್ಕಿಕೊಂಡ ಅವನಿಗೆ ಮುಂದಿನ ವಾರವೆ ಮದುವೆ. ಎನೋ.. ಹೇಗೋ.. ಅವನಿಗೆ ಒಂದೂ ತಿಳಿತ್ತಿಲ್ಲ, ಈಗಲೂ ಯಾರಿಗೆ ಕೇಳಬೇಕು ಎಂಬ ಚಿಂತೆಯಲ್ಲಿಯೇ ಹೋಸ ಕನಸುಗಳನ್ನು ಹೋಸೆಯುತ್ತಿದ್ದಾನೆ.
Recent Comments