ಕಳೆದುಹೋದವನ ಮಳೆಯಲ್ಲಿ ನೆನೆದು…

ಆ ಮಳೆಯಲ್ಲವಳು..

ಗೆಳೆಯಾ,

ಮಳೆಗಾಲ ಮತ್ತೆ ಬಂದಿದೆ. ಹೌದೋ ನೀನು ತುಂಬಾ ನೆನಪಾಗ್ತಾಯಿದಿಯ. ನಿನ್ನನ್ನು ಮರೆಯಬೇಕೆಂದು ಎಷ್ಟೋ ಪ್ರಯತ್ನ ಪಟ್ಟೆ ಆದರೆ ಈ ಮಳೆಯ ಹಾಗೆ ಕ್ಷಣ ಕಾಲ ನಿಂತಂತಾಗಿ, ಮರುಕ್ಷಣ ಧೊ ಎಂದು ಸುರಿಯುತ್ತದೆ. ಹುಟ್ಟಿದಾಗಿನಿಂದ ಮಳೆಯೆಂದರೆ ಪಂಚಪ್ರಾಣ ಕಣೋ ನನಗೆ, ಮಳೆಯಲ್ಲಿ ನೆನೆಯೋದೇ ಬಲು ಖುಷಿ ನನಗೆ. ಆದರೇ ಈಗ ಮಳೆಯೆಂದರೆ ಬೇಜಾರಾಗ್ತಾಯಿದೆ, ಮಳೆ ಮೇಲೆ ಸಿಟ್ಟು ಬರ್ತಾಯಿದೆ. ಮಳೆ ಏಕಾದರೂ ಬರ್ತಾ ಇದೆಯೋ ಅನ್ನಿಸಿಬಿಟ್ಟಿದೆ. ಅದೆಲ್ಲಿತ್ತೋ ಸಿಟ್ಟು, ನಿನ್ನನ್ನು ಮರೆಯಲೇಬೇಕೆಂಬ ಹಟದಿಂದ ಕಿಟಕಿ, ಬಾಗಿಲುಗಳನ್ನು ಜೋರಾಗಿ ಮುಚ್ಚಿ, ಮುಸುಕು ಹಾಕಿಕೊಂಡು ಮಲಗಿದೆ. ನಿನ್ನ ನೆನಪೇ ಮುಸುಕೇಳೆದು ಬಿಟ್ಟಿತು. ಮನಸಾರೆ ಅತ್ತುಬಿಟ್ಟೆ, ನಿನ್ನನ್ನು ಮರೆತು ಬಿಡುವ ವ್ಯರ್ಥ ಪ್ರಯತ್ನದಲ್ಲಿ.

ಇತ್ತಿಚಿಗ್ಯಾಕೋ ತೀರಾ ಒಬ್ಬಂಟಿಯಾಗಿದ್ದೇನೆ ಅನ್ನಿಸಿಬಿಡುತ್ತೆ. ಯಾಕೆ ಕಾಲಿಟ್ಟೆ ನನ್ನ ಬದುಕಿನೊಳಗೆ? ಯಾಕಾದರು ಬಂದೆ? ಸುಮ್ಮನೇ ದಡದಲ್ಲಿ ಕುಳಿತವಳ ಕಾಲಿಗೆ ಅಲೆಯಾಗಿ ಬಡಿದು, ಇಡೀ ಸಮುದ್ರವನ್ನೇ ಪ್ರೀತಿಸುವಂತೆ ಕಾಡಿದೆ. ಹೇಗಿದ್ದೆ ನಾನು?, ಹೇಗೆಲ್ಲಾ ಬದಲಾಯಿಸಿದೆ. ನನ್ನಲ್ಲಿದ್ದ “ನನ್ನನ್ನೇ” ಬದಲಾಯಿಸಿಬಿಟ್ಟೆಯಲ್ಲಾ ಎಂಥವನು ನೀನು? ನನ್ನನ್ನಿಷ್ಟು ಬದಲಿಸಿದ ನೀನು, ನನ್ನನ್ನೊಬ್ಬಳನ್ನೇ ಬಿಟ್ಟು ಹೋದೆಯಲ್ಲ, ಮತ್ತೆ ಯಾರನ್ನು ಬದಲಿಸಲು ಅದೆಲ್ಲಿಗೆ ಹೊರಟು ಹೋದೆ?

ಆದರೇ ನಿನ್ನನ್ನು ದ್ವೇಷಿಸಲು ನನ್ನಿಂದಾಗುತ್ತಿಲ್ಲ. ನಿನ್ನ ಬಗ್ಗೆ ಎಳ್ಳಷ್ಟು ಸಿಟ್ಟಿಲ್ಲ, ನಿನ್ನ ಬಗ್ಗೆ ಯಾವ ತಕರಾರು ಇಲ್ಲ. ನಿನಗೆ ನನ್ನ ಮೇಲಿದ್ದ ಪ್ರೀತಿ ಸುಳ್ಳಲ್ಲ, ಅದು ಸುಳ್ಳೆoದು ಹೇಳಲು ನೀನು ಎಷ್ಟೇ ಪ್ರಯತ್ನಪಟ್ಟರು ನಾನು ನಂಬೊಲ್ಲ. ಒಂದೇ ಸಾರಿ ನನ್ನ ಕಣ್ಣ್ಮುಂದೆ ಬಂದು ಹೇಳು ನೋಡೋಣ ‘ನಿನ್ನ ಪ್ರೀತಿ ಸುಳ್ಳೆoದು” ನಿನ್ನ ಕಣ್ಣುಗಳ್ಯಾವತ್ತು ನನಗೆ ಸುಳ್ಳು ಹೇಳಿಲ್ಲ. ನಿನ್ನ ಮಾತುಗಳಲ್ಲಿದ್ದ ಪ್ರೀತಿಗಿಂತಲೂ ಹೆಚ್ಚಾಗಿ ನಿನ್ನ ‘ಕಣ್ಣು’ಗಳಲ್ಲಿದ್ದ ಪ್ರೀತಿಗೆ ಸೋತವಳು ನಾನು. ನಿನ್ನ ಪ್ರೀತಿಯ ಮೇಲೆ ನಂಬಿಕೆಯಿದೆ. ನಿನಗೆ ನನ್ನ ಮೇಲೆ ಎಷ್ಟೊಂದು ಪ್ರೀತಿಯಿತ್ತು, ಆ ಪ್ರೀತಿಯ ಕೈ ಹಿಡಿದೆ ಅಲ್ಲವಾ ನಾವು “ಕನಸು“ಗಳ ಲೋಕದಲ್ಲಿ ನಡೆದಿದ್ದು.

ಇಂಥ ಮಾತುಗಳಿಗೆ ಈಗ ಬೆಲೆಯಿಲ್ಲ, ಕಾಲ ಮಿಂಚಿ ಹೋಗಿದೆ. ‘ನಮ್ಮವರು’ ಬರುವ ಸಮಯವಾಯ್ತು, ಮಳೆಯಲ್ಲಿ ತೊಯ್ದುಕೊಂಡು ಬರ್ತಾರೆ. ನಿನಗಿಷ್ಟ ಅಂತ ಪಕ್ಕದಮನೆ ಅಂಟಿನ ಕಾಡಿ-ಬೇಡಿ ಕಲಿತ “ಪತ್ರೋಡೆ” ಮಾಡಬೇಕು, ಏಕೆಂದರೆ ಅದು ಇವರಿಗೂ ತುಂಬಾ ಇಷ್ಟ.

7 Responses to “ಕಳೆದುಹೋದವನ ಮಳೆಯಲ್ಲಿ ನೆನೆದು…”


  1. 1 ಶ್ರೀದೇವಿ ಕಳಸದ July 9, 2008 at 6:47 pm

    ನಿನ್ನನ್ನು ಮರೆಯಲೇಬೇಕೆಂಬ ಹಟದಿಂದ ಕಿಟಕಿ, ಬಾಗಿಲುಗಳನ್ನು ಜೋರಾಗಿ ಮುಚ್ಚಿ, ಮುಸುಕು ಹಾಕಿಕೊಂಡು ಮಲಗಿದೆ. ನಿನ್ನ ನೆನಪೇ ಮುಸುಕೇಳೆದು ಬಿಟ್ಟಿತು. ಈ ಸಾಲನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ…

  2. 2 ಶ್ರೀದೇವಿ ಕಳಸದ July 9, 2008 at 6:52 pm

    ನಿನ್ನನ್ನು ಮರೆಯಲೇಬೇಕೆಂಬ ಹಟದಿಂದ ಕಿಟಕಿ, ಬಾಗಿಲುಗಳನ್ನು ಜೋರಾಗಿ ಮುಚ್ಚಿ, ಮುಸುಕು ಹಾಕಿಕೊಂಡು ಮಲಗಿದೆ. ನಿನ್ನ ನೆನಪೇ ಮುಸುಕೇಳೆದು ಬಿಟ್ಟಿತು. ಎಷ್ಟ ಚಂದ ಕಟ್ಟಿಕೊಟ್ಟೀರಿ ಈ ಸಾಲ…

  3. 3 ಶೆಟ್ಟರು (Shettaru) July 10, 2008 at 8:52 am

    ಶ್ರೀದೇವಿಯವರೆ,

    ಧನ್ಯವಾದಗಳು, ನಿಮ್ಮ ಮೆಚ್ಚುಗೆಯ ಸಾಲುಗಳು ಆ “ಸಾಲು”ಗಳನ್ನು ಕಟ್ಟಿ, ಕುಟ್ಟಿದ ಶ್ರಮವನ್ನು ಸಾರ್ಥಕಗೊಳಿಸಿದವು :)

    ಆಗಾಗ ಹೀಗೆ ಬರುತ್ತಿರಿ.

    ಪ್ರೀತಿಯಿರಲಿ
    ಶೆಟ್ಟರು

  4. 4 ಸಂತೋಷಕುಮಾರ July 15, 2008 at 9:27 am

    ಶೆಟ್ಟರೆ,

    ಖರೇ ಹೇಳ್ರಿ ಎನು ನಡಿತು ಅಂತಾ? ಇತ್ತಿಚಿನ ನಿಮ್ಮ ಬರಹಗಳನ್ನು ನೋಡ್ತಾ ಇದ್ರ ಯಾಕೋ ನಿಮ್ಮ ಸ್ಟೋರಿ ಎಡವಟ್ಟಾಗಿದೆ ಅಂತಾ ಅನಿಸಾಕತ್ತೈತಿ. ಭಾಳ ಮನಸ್ಸಿಗೆ ಹಚ್ಚಕೋಬ್ಯಾಡ್ರಿ. :)

    “ನಿನಗಿಷ್ಟ ಅಂತ ಪಕ್ಕದಮನೆ ಅಂಟಿನ ಕಾಡಿ-ಬೇಡಿ ಕಲಿತ “ಪತ್ರೋಡೆ” ಮಾಡಬೇಕು, ಏಕೆಂದರೆ ಅದು ಇವರಿಗೂ ತುಂಬಾ ಇಷ್ಟ” ಸೂಪರ್ ಗುರು. ನಿಮಗಂತೂ ದೇವ್ರಾಣೆಗೂ ಪತ್ರೋಡೆ ಮಾಡಿಕೊಟ್ಟಿರಲ್ಲ, ಪಾಪ ’ಅವರಿಗಾದ್ರೂ’ ಮಾಡಿ ಕೊಡ್ಲಿ ಬಿಡಿ..

  5. 5 sunaath July 19, 2008 at 12:23 pm

    ಶೆಟ್ಟರ,
    ಭಾಳ confuse ಮಾಡಸ್ತೀರಪಾ. ನಿಮ್ಮ ನೆಲಿ ಹತ್ತವಲ್ತು.
    ಹೋಗ್ಲಿ ಬಿಡ್ರಿ, ಪತ್ರೋಡೆ ಸಿಕ್ಕರ ಬಿಡಬ್ಯಾಡ್ರಿ.

  6. 6 Manu July 21, 2008 at 1:23 pm

    thumba chennagidey, hegey baritha eri..

  7. 7 ಶೆಟ್ಟರು (Shettaru) July 25, 2008 at 4:48 pm

    ಸಂತೋಷರ,
    ಇಷ್ಟೇಲ್ಲಾ ಓದಿ ಮತ್ತ ಖರೆ ಹೇಳ್ರಿ ಅಂತಿರಲ್ರಿ..

    ಕಾಕಾ,
    ನನಗ ನೆಲಾ ಸಿಗವಲ್ದು, ಇನ್ನು ನೀವು ನೇಲಿ ಸುದ್ದಿಗೆ ಹೋಗಿರ್ರಿ..

    ಮನು,
    ಟ್ಯಾಂಗ್ಸ್…


Leave a Reply




a

ಕನ್ನಡ ಹನಿಗಳು

Blog Stats

  • 6,231 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.