ದಸರಾ ಹಬ್ಬ: ನಾನು, ನೀವು ಮತ್ತು ನಮ್ಮೂರು

ಸುಮಾರು ನಾಲ್ಕು ವರುಷಗಳ ನಂತರ ಊರಲ್ಲಿ ದಸರೆ ಆಚರಿಸುವ ಸಂಬ್ರಮದಲ್ಲಿದ್ದೆ, ಸತತ ಮೂರು ದಿನಗಳ ರಜೆ, ಮತ್ತು ನನ್ನ ಬಾಸ್ ಕೊಡುತ್ತೆನೆಂದು ಹೇಳಿದ್ದ ಮತ್ತೊಂದು ದಿನದ ರಜ ಕಾರಣವಾಗಿತ್ತು. ಇವತ್ತು ರಾತ್ರಿಗೆ ಬಸ್ಸಿನಲ್ಲಿ ಸೀಟು ಕಾದಿರಿಸಿದ್ದೂ ಆಗಿತ್ತು. ಊರಿಗೆ ಹೋದವನು ಹಾಗೆಯೇ ಬಂದರಾದಿತೇ ಅವಳನ್ನು ಭೇಟ್ಟಿಯಾಗುವ ಆಸೆ ಮನಸ್ಸಿನಲ್ಲಿ ಮಂಡಿಗೆ ತಿಂದಿದ್ದು ಆಗಿತ್ತು.

ವಿಜಯದಶಮಿಯಂದು ಬೆಳಿಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ, ಬನ್ನಿ ಮಂಟಪಕ್ಕೆ ಹೋಗಿ ಪೂಜಿಸಿ “ಬಂಗಾರ” ಮನೆಗೊಯ್ಯುದು, ಮನೆಯಲ್ಲಿ ಹಬ್ಬದೂಟ ಗೋದಿ ಹುಗ್ಗಿ, ಹೋಳಿಗೆ, ಕರಗಡಬು ಇತ್ಯಾದಿ… ಛೇ..ಛೇ ಎನೆಲ್ಲಾ ಪ್ಲಾನ್ ಮಾಡಿದ್ದೆ, ಕೋನೆಯ ಕ್ಷಣದಲ್ಲಿ ಎಲ್ಲಾ ಠುಸ್sss…

ಕೋನೆಯ ಕ್ಷಣದಲ್ಲಿ ಬಂದ ಕೆಲಸವೊಂದು ನನ್ನೂರಿನ ಪ್ರಯಾಣವನ್ನು ಮುಂದಿನ ವಾರಕ್ಕೆ ಮೂಂದುಡುವಲ್ಲಿ ಸಫಲವಾಗಿದೆ, ನಾನು ಕರ್ತವ್ಯದ ಕರೆಗೆ ಬೆಲೆಕೊಟ್ಟು (?) “ಕರ್ಮಣ್ಯೆ ವಾಧಿಕಾರಸ್ಥೇ ಮಾ ಫಲೇಶು ಕದಾಚನ” ಎನ್ನುತ್ತಾ ಕರ್ತವ್ಯದ ಕಡೆ ಮುಖ ಮಾಡಿ ಕುಳಿತಿದ್ದೆನೆ. ಹೋಸದಾಗಿ ಊರಿಗೆ ಹೋಗುವ ಸಂಭ್ರಮ ಮತ್ತು ನಂತರ ಆದ ದುಃಖದ ಮಡುವಿನಲ್ಲಿ ಎನೂ ಹೋಸದು ಬರೆದಿಲ್ಲ. ಹೀಗಾಗಿ ಹೋದ ವರುಷ ದಸರೆಯಲ್ಲಿ ಬರೆದ ಲೇಖನ ನಿಮಗಾಗಿ (ನೀವು ಕಳೆದ ವರ್ಷವೇ ಓದಿದ್ದರೂ, ಓದಿರದಿದ್ದರೂ, ಈಗ ಓದಲಾರೆನೆಂದರೂ…ಯಾಕೆಂದರೆ ಕರ್ಮಣ್ಯೆ…)

ಬನ್ನಿ ತಗೊಂಡು ಬಂಗಾರದಂಗ ಇರೂಣು: ದಸರೆಯಲ್ಲಿ ಊರ ನೆನಪು

ಮತ್ತೊಂದು ವಿಜಯದಶಮಿ ಊರಿಂದ ದೂರ ಅಚರಿಸಬೇಕಾಗಿದೆ, ಸುಮಾರು ೩-೪ ವರ್ಷಗಳಾಯಿತು ದಸರೆಗೆ ಊರಿಗೆ ಹೋಗದೆ. ದಸರಾ ಹಬ್ಬ ಕರ್ನಾಟಕದ ನಾಡಹಬ್ಬವಾಗಿದ್ದರೂ ಆಚರಣೆಯಲ್ಲಿ ಪ್ರದೇಶ ವ್ಯತ್ಯಾಸ ಕಾಣಬಹುದು.

ಉತ್ತರ ಕರ್ನಾಟಕದ ದಸರೆಯ ಆಚರಣೆಯಲ್ಲಿ “ಬನ್ನಿ”ಗೆ ತನ್ನದೆ ಹಿರಿದಾದ ಅರ್ಥವಿದೆ, ದಸರೆಯಲ್ಲಿ “ಬನ್ನಿ” ಕೇವಲ ಪತ್ರೆಯಲ್ಲ, ಅದು “ಬಂಗಾರ” ಹೀಗಾಗಿ ದಸರೆಯ ಹಬ್ಬ ನಮಗಲ್ಲಿ “ಬನ್ನಿ ಹಬ್ಬ”.

“ಬನ್ನಿ ತಗೊಂಡು ಬಂಗಾರದಂಗ ಇರೂಣು”, “ಬಂಗಾರ ತಗೊಂಡು ಬಂಗಾರದಂಗ ಇರೂಣು” ಬರಿ ಮಾತುಗಳಲ್ಲ, ಶತ್ರುಗಳು ಎದುರಾದರೂ ಆವತ್ತು ನಕ್ಕೊತ “ಬನ್ನಿ ತಗೊಂಡು ಬಂಗಾರದಂಗ ಇರೂಣು”, ಇದರಿಂದಾಗಿ ಒಡೆದ, ಮುರುಟಿದ ಮನಸ್ಸುಗಳು ಒಂದಾದ ಸಾಕ್ಷ್ಯಗಳು ಅನೇಕ, ಒಡೆದ ಮನಸ್ಸುಗಳನ್ನು ಒಂದಾಗಿಸುವ, ಮುರಿದ ಸಂಭಂದಗಳನ್ನು ಬೇರೆಸುವ ಈ ಹಬ್ಬ ಒಂದು ರೀತಿಯಲ್ಲಿ “ವಿಜಯದಶಮಿ”ಯೇ ಸರಿ, ಎಕೆಂದರೆ ಕ್ಷಮೆ ಕೇಳಿದವನು ಮತ್ತು ಕ್ಷಮಿಸಿದವನು ಇಬ್ಬರೂ ಗೆದ್ದ ದಿನ, ಹಾಗೆಯೇ ಹೋಸ ಗೆಳೆತನ ಮತ್ತು ಸಂಭಂದಕ್ಕೆ ಮೊದಲದಿನ.

ನವರಾತ್ರಿಯ ಮೊದಲ ದಿನದಿನದಿಂದಲೆ ಪ್ರತಿದಿನ ಬೆಳೆಗ್ಗೆ ಬನ್ನಿ ಮಂಟಪ(ಬನ್ನಿ ಗಿಡ)ಕ್ಕೆ ಹೋಗಿ ಪೂಜಿಸಿ, ಮಂಟಪ ಸುತ್ತು ಹಾಕಿ ಬರುತ್ತಾರೆ, ಮನೆಗಳಲ್ಲಿ ನವಧಾನ್ಯಗಳ ಸಸಿ ನೆಟ್ಟು, ಬಿಂದಿಗೆಯಲ್ಲಿ ನೀರು ತುಂಬಿ ಪೂಜಿಸುತ್ತಾರೆ, ಇದಕ್ಕೆ ಘಟ್ಟ ಹಾಕುವುದು ಎನ್ನುತ್ತಾರೆ, ಈ ಒಂಬತ್ತು ದಿನಗಳು ಪ್ರತಿದಿನವೂ ದೇವಿ ಪಾರಾಯಣ.

ಆಯುಧ ಪೂಜೆ ನನಗೆ ಮೊದಲಿನಿಂದಲೂ ಇಷ್ಟದ ದಿನ ಎಕೆಂದರೆ, ಆವತ್ತು ರೈತರು ತಮ್ಮ ನೇಗಿಲು, ಎತ್ತು, ಚಕ್ಕಡಿ, ಹಾರಿ, ಗುದ್ದಲಿ, ಕುಡುಗೋಲು ಪೂಜಿಸಿದರೆ, ವ್ಯಾಪಾರಸ್ಥರು ತಮ್ಮ ತಕ್ಕಡಿ, ತೂಕದಕಲ್ಲು ಪೂಜಿಸುತ್ತಾರೆ, ಹಾಗೆಯೇ ಮಹಿಳೆಯರು ಮನೆಯಲ್ಲಿರುವ ಕೈ ಹಾರಿ, ಒಳ್ಳು, ಒನಕೆ, ಕುಡುಗೋಲು, ಈಳಿಗೆ ಮನೆ ಪೂಜಿಸುತ್ತಾರೆ, ತಾಯಂದಿರು ಅವುಗಳ ಜೊತೆಗೆಲ್ಲ ನಮ್ಮ ಪಾಟಿ-ಪುಸ್ತಕಗಳನ್ನು ಇಡುತ್ತಿದ್ದರು, (ನನಗೇಕೆ ಖುಶಿಯೆಂದರೆ ಅವಗಳನ್ನೊದುವುದರಿಂದ ಒಂದು ದಿನ ಮುಕ್ತಿ ಸಿಗುತ್ತಿತ್ತಲ್ಲ ಅದಕ್ಕೆ). ನಮ್ಮ ಕಡೆ ಇದಕ್ಕೆ ‘ಖಂಡೆ ಪೂಜೆ’ ಎಂತಲೂ ಕರೆಯುತ್ತಾರೆ, ಇದರೊಂದಿಗೆ ನಂಟಿರುವ ಇನ್ನೊಂದು ನೆನಪೆಂದರೆ ತುಂಬಾ ಸಣ್ಣವರಿದ್ದಾಗ ಬಹುಶ: ಬಾಲವಾಡಿ ಅಥವಾ ೧ನೇ ಅಥವಾ ೨ನೇಯತ್ತಾ ಇದ್ದಾಗ ಪಾಟಿಯ ಮೇಲೆ ಸರಸ್ವತಿಯ ಚಿತ್ರ ಬರೆಯಿಸಿಕೊಂಡು ಶಾಲೆಗೆ ಒಯ್ದು ಅಲ್ಲಿ ಸರಸ್ವತಿ ಪೂಜೆಗೆ ನಮ್ಮ ಪಾಟಿಗಳನ್ನು ಸಾಲಾಗಿ ಗೋಡೆಗೆ ಒರಗಿಸಿ ಪೂಜಿಸುತ್ತಿದ್ದುದು, ನಂತರದ ದಿನಗಳಲ್ಲಿ ಪ್ರೈಮರಿಯಲ್ಲಿದ್ದಾಗ ಸರಸ್ವತಿ ಪೂಜೆಗೆ ಶಾಲೆಯಲ್ಲಿ ಹೆಂಗೆಳೆಯರು ತಂದುಕೊಟ್ಟ ಸೀರೆಗಳಿಂದ ಮಂಟಪ ಕಟ್ಟಿದ್ದು, ಊರ ಹೋರಗಿನ ತೋಟಗಳಿಂದ ಪೂಜೆಗೆ ಹೂವು, ಹಣ್ಣು, ಬಾಳೆಗಿಡ, ಕಬ್ಬಿನ ಗಿಡಗಳನ್ನು ತೋಟದ ಮಾಲಿಕರನ್ನು ಕೇಳಿ, ಕೊಡದಿದ್ದಾಗ ಕದ್ದು ತಂದದ್ದು ಹೀಗೆ ಆಯುಧ ಪೂಜೆಯ ಅನೇಕ ನೆನಪುಗಳು ನನ್ನ ಪ್ರೈಮರಿ ದಿನಗಳದ್ದು, ಹಾಯಸ್ಕೂಲಿಗೆ ಬಂದ ಮೇಲಿಂದ ಆಯುಧಪೂಜೆ ಕೇವಲ ಮನೆಗೆ ಸೀಮಿತವಾಯ್ತು.

ಮರುದಿನ ವಿಜಯದಶಮಿ, ಬೆಳಿಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ, ಬನ್ನಿ ಮಂಟಪಕ್ಕೆ ಹೋಗಿ ಪೂಜಿಸಿ “ಬಂಗಾರ” ಮನೆಗೊಯ್ಯುವುದು, ಆ ದಿನ ಮನೆಯಲ್ಲಿ ಹಬ್ಬದೂಟ ಗೋದಿ ಹುಗ್ಗಿ, ಹೋಳಿಗೆ, ಕರಗಡಬು ಇತ್ಯಾದಿ… (ಅssssss…ಬ್), ಸಂಜೆಗೆ ಮೊದಲು ಊರದೇವರಿಗೆ ಬನ್ನಿ ಮುಡಿಸಿ, ಮನೆಯಲ್ಲಿ ತಂದೆ-ತಾಯಿ-ಹಿರಿಯರಿಗೆಲ್ಲ ಬನ್ನಿ-ಬಂಗಾರ ಕೊಟ್ಟು “ಬಂಗಾರ ತಗೊಂಡು ಬಂಗಾರದಂಗ ಇರೂಣು” ಅನ್ನುವ ಗಿಳಿವಿಂಡು ಕಾರ್ಯಕ್ರಮ ಶುರು. ಗುಂಪುಗಳಲ್ಲಿ ಗೆಳೆಯರೆಲ್ಲ ಮನೆ-ಮನೆಗೆ ಭೇಟಿ ನಿಡುತ್ತಾ  ಬಂಗಾರ ತಗೊ ಕಾಕಾ, ಚಿಗವ್ವ, ದೊಡ್ಡಪ್ಪ, ಮಾಮಾ, ಅಕ್ಕಾ, ತಂಗಿ, ತಮ್ಮಣ್ಣಾ, ಅಜ್ಜಾ, ಅನ್ನುತ್ತಾ, ‘ಜಲ್ದಿ ಹಿಡಿಬೇ ಯಮ್ಮಾ ಗಟ್ಟಿ ಬಂಗಾರ’ ಎನ್ನುತ್ತಾ ಹಿರಿಯರಿಗೆಲ್ಲ ಅಡ್ಡ ಬಿಳುತ್ತಾ, ಆಶಿರ್ವಾದ ಕೇಳಿದ್ದೆ ಕೇಳಿದ್ದು.

ಆ ಹಿರಿಯರ ಆಶಿರ್ವಾದವೇ ಇರಬೇಕು ನಮ್ಮನ್ನೆಲ್ಲ ಇಷ್ಟು ತಣ್ಣಗಿಟ್ಟಿದ್ದು. ಅಂದ ಹಾಗೆ ತಗೋರಿ “ಬನ್ನಿ-ಬಂಗಾರ ತಗೊಂಡು ಬಂಗಾರದಂಗ ಇರೂಣು”

4 Responses to “ದಸರಾ ಹಬ್ಬ: ನಾನು, ನೀವು ಮತ್ತು ನಮ್ಮೂರು”


  1. 1 ಸುನಾಥ September 25, 2009 at 7:55 pm

    ಶೆಟ್ಟರ,
    ಮೊದಲನೆಯದಾಗಿ ನಿಮಗೆ ಸಮಾಧಾನ ಹೇಳಬೇಕಾಗೇದ. ಆಕಾಶದಾಗ ಈಗ ಮೋಡ ಕಂಡರೇನಾತು, ಮಳಿ ಆಗಿ ಹೋದ ಮ್ಯಾಲೆ ಮುಗಲು ಮತ್ತ ಸ್ವಚ್ಛ ಆಗ್ತದ. ಎರಡನೆಯದಾಗಿ ಬಂಗಾರದ ಸಲುವಾಗಿ ಎಷ್ಟರ ಎಡತಾಕೋವ್ರು ನೀವು? ಲಗೂನೆ ನಿಮ್ಮ ಮನೀಗ ತಗೊಂಡs ಬಂದ ಬಿಡರಿ.

  2. 2 Prabhuraj September 26, 2009 at 6:27 pm

    ನಮ್ಮಾರ ದಸರಾ ಹಬ್ಬ ನೆನಪ ಮಾಡಿದ್ರಿ ಸರ್, ನನಗೂ ವೈಯಕ್ತಿಕ ಕೆಲ್ಸ ಆಗಿ ಹೋಗಾಕ ಆಗಿಲ್ಲ… ಭಾಳ್ ಚಲೊ ಇತ್ತ ಲೇಖನ…
    ಬನ್ನಿ-ಬಂಗಾರ ತಗೊಂಡು ಬಂಗಾರದಂಗ ಇರೂಣ್ರಿ..

  3. 3 ಶೆಟ್ಟರು (Shettaru) September 29, 2009 at 12:19 pm

    ಕಾಕಾ,

    ನೀವ್ಹೇಳಿದಂಗ ಲಗೋಣೆ ಬಂಗಾರ ತರೂ ವ್ಯವಸ್ಥಾ ಮಾಡಬೇಕಾಗ್ಯಾದ, ವಿಜಯದಶಮಿಯ ಶುಭಾಷಯಗಳು ನಿಮಗ.

    ಪ್ರಭುರಾಜರೆ,

    ತಮಗೆ ಸ್ವಾಗತ, ತಮಗೆ ಮತ್ತು ತಮ್ಮಾಕೆಗೆ ವಿಜಯದಶಮಿಯ ಶುಭಾಷಯಗಳು.

    -ಶೆಟ್ಟರು

  4. 4 ಸಣ್ಣ ಶೆಟ್ರು.... September 29, 2009 at 4:25 pm

    ನನ್ನ ಅಣ್ಣನಿಗೆ ಬಂಗಾರ ಡಿಸೆಂಬರ್ ತಿಂಗಳಲ್ಲಿ ಸಿಗುತ್ತೆ…!!! ಅಲ್ಲಿ ವರೆಗೂ ಕಾಯೋ ಎಣ್ಣ…!!


Leave a Reply




a

Blog Stats

  • 8,095 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು