Archive for the 'Uncategorized' Category

ಬದುಕು ಮತ್ತು ಪ್ರೀತಿ

ಬದುಕು ಮತ್ತು ಪ್ರೀತಿರೈಲು ನಿಲ್ದಾನಗಳೆಂಬ
ಮಹಾನಗರಗಳ ಪಾಪಕೂಪದ
ಜನ್ಮಸ್ಥಾನದಲ್ಲಿ,
ನಮ್ಮ ಮೇಲೆ ನಮಗೆ
ಅಯ್ಯೋ ಅನ್ನಿಸುವ ಭಿಕ್ಷುಕರೆಂಬ
ಸಾಕ್ಷಾತ್ ನರಕದರ್ಶನ
ದ ನಡುವೆಯೂ
ಜೀನ್ಸು ಪ್ಯಾಂಟು ತೋಟ್ಟ
ಸ್ವಲ್ಪ ಚಿಕ್ಕದೆ ಅಂಗಿ ಉಟ್ಟ
ತರುಣಿಯನ್ನು ದಟ್ಟ
ಜನಗಳ ನಡುವೆ ತಟ್ಟನೆ
ಗುರುತಿಸುವ ಕಣ್ಣುಗಳು,
ನಮ್ಮ ಜೀವನ ಪ್ರೀತಿ
ಮತ್ತು ಬದುಕಿನ ರೀತಿ.

ಕೆಳಗೆ ಜಗ್ಗಿದಷ್ಟು ಮತ್ತೇ ಮೇಲೆಳುವ
ಅವಳ ಅಂಗಿಯಂತೆ ನಮ್ಮ “ಬದುಕು ಮತ್ತು ಪ್ರೀತಿ”

ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ – ಏಪ್ರಿಲ್ ೨೩, ೨೦೦೯

wbcd_kanನಾಳೆ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ (ಇದನ್ನು ಅಂತರಾಷ್ಟ್ರೀಯ ಪುಸ್ತಕ ದಿನ ಎಂದೂ ಕರೆಯುತ್ತಾರೆ). ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (UNESCO) 1995ರಲ್ಲಿ ಮೊದಲ ಬಾರಿಗೆ ಓದುವಿಕೆ (Reading), ಪ್ರಕಾಶನ (Publisher) ಮತ್ತು ಕೃತಿಸ್ವಾಮ್ಯ (CopyRight) ದ ಬಗ್ಗೆ ಅರಿವು ಮತ್ತು ಪ್ರಚಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿತು. ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುನೇಸ್ಕೋ ಯುವಜನತೆಯಲ್ಲಿ ಪುಸ್ತಕ ಪ್ರೇಮ, ಓದಿನ ಖುಷಿ (ಖುಷಿಗಿಂತ ಗಮ್ಮತ್ತು..) ಹೆಚ್ಚಿಸುವ ಮತ್ತು ಉತ್ತಮ ಲೇಖಕನ್ನು ಗೌರವಿಸುವ ಹಂಬಲ್ ಹೊಂದಿದೆ. ನೂರಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ವಿಶ್ವಾದ್ಯಂತ ಅನೇಕಾನೇಕ ಪುಸ್ತಕ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು, ಗ್ರಂಥಾಲಯಗಳು, ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳು, ಸಾಂಶ್ಕೃತಿಕ ಸಂಘಟನೆಗಳು ಮತ್ತು ಸಾಹಿತ್ಯಿಕ/ ಸಾಹಿತಿಗಳ ವೇದಿಕೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕ ಮತ್ತು ಓದುವಿಕೆಯ ಮಹತ್ವ ಸಾರಲಿವೆ.

ಈ ದಿನ ಆಂಗ್ಲ ಸಾಹಿತ್ಯದ ಮಹಾನ್ ಸಾಹಿತಿ ವಿಲ್ಲಿಯಮ್ ಷೇಕ್ಸಪೀಯರನ ಜನ್ಮದಿನ, ಈ ದಿನವನ್ನು “ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ” ಆಚರಿಸುವುದರ ಮೂಲಕ ವಿಶ್ವದ ಎಲ್ಲ ಮಹಾನ್ ಕೃತಿಗಳಿಗೆ ಮತ್ತು ಕೃತಿಕಾರರಿಗೆ ಗೌರವ ಸಮರ್ಪನೆ ಮಾಡಲಾಗುತ್ತದೆ ಮತ್ತು ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳನ್ನು ನೆನಪಿಸಿಕೊಳ್ಳಲಾಗುವುದು.

“Not all readers are leaders, but all leaders are readers.”
- Harry S. Truman

ಹೆಚ್ಚಿನ ಮಾಹೀತಿಗೆ: ಯುನೇಸ್ಕೋ ಅಂತರ್ಜಾಲ ಪುಟ

ಉತ್ತರ ಕರ್ನಾಟಕ ಅಭಿವೃದ್ದಿ ಕುಂಠಿತ: ಕಾರಣ ನಾನು ಮತ್ತು…

ಉತ್ತರ ಕರ್ನಾಟಕ

ಮುಂಬಯಿಯಿಂದ ಊರಿಗೆ ಹೋರಟಾಗ, ಬಸ್ಸಿನಲ್ಲಿ ಎಂಥಹ ಘಾಡ ನಿದ್ರೆಯಲ್ಲೂ, ಭರೊ ಅನ್ನುವ ಘಾಡ ಅಂಧಕಾರದಲ್ಲು ಬಸ್ಸು ಕರ್ನಾಟಕ ಪ್ರವೇಶಿಸಿದ್ದು ಗೋತ್ತಾಗುತ್ತದೆ, ಅದು ಹೇಗೆ ಅಂತಿರೇನು? ಅದೇನೋ ಅಂತಾರಲ್ಲ ಮಣ್ಣಿನ ವಾಸನೆ, ಆ ಗಾಳಿ … ಉಂಹೂ… ಹಾಗೇನು ಇಲ್ಲ, ಮತ್ತೆ ಅದು ಹೇಗೆ ಘಾಡ ನಿದ್ರೆಯಲ್ಲೂ ಬಸ್ಸು ಕರ್ನಾಟಕ ಪ್ರವೇಶಿಸಿದ್ದು ತಿಳಿಯುವುದು?

ಘಾಡ ನಿದ್ರೆಯಲ್ಲಿ “ಕಾಡ ರಸ್ತೆ”ಗೆ ಇಳಿದು ಬಸ್ಸಿನೊಳಗೆ ನಾವು ಪುಟಿಪುಟಿದು ಬಿಳುತ್ತಿದ್ದರೆ ಅದೇ ಕರ್ನಾಟಕ.

ಕರ್ನಾಟಕದ ಹೋರಗೆ ನಾರ್ಥಿಗೆ ಹೋಗುತ್ತಿದ್ದರೆ “ಕರ್ನಾಟಕ”ವೆಂದರೆ ಬರಿ “ಬ್ಯಾಂಗಲೋರ್”, ಅವರಿಗೆ ಬೆಳಗಾವಿ ಗೋತ್ತಿಲ್ಲ, ಹುಬ್ಬಳ್ಳಿ ಗೋತ್ತಿಲ್ಲ, ಮಂಗಳೂರು ಗೋತ್ತಿಲ್ಲ, ಬಳ್ಳಾರಿ ಗೋತ್ತಿಲ್ಲ, ಬದಾಮಿ ಗೋತ್ತಿಲ್ಲ, ಜೋಗ ಗೋತ್ತಿಲ್ಲ, ಮಡಿಕೇರಿ ಕೊಡಗು ಜಿಲ್ಲಾ ಕೆಂದ್ರ ಎಂಬುದು ಗೋತ್ತಿಲ್ಲ, ಶೋಲೆಯ ರಾಮಘಡ ಇದೇ ರಾಮನಗರ ಎಂಬುದು ಗೋತ್ತಿಲ್ಲ, ಅವರಿಗೆ ಗೋತ್ತಿರೋದು ಬರೀ ಬ್ಯಾಂಗಲೋರ್, ಅದಕ್ಕೆ ಸ್ವಲ್ಪ ಸಮೀಪದಲ್ಲಿರುವುದರಿಂದ ಮತ್ತು ಒಳ್ಳೆಯ ಮಾರ್ಕೆಟಿಂಗ ಇರುವುದರಿಂದ ಮೈಸೂರು ಸ್ವಲ್ಪ ಮಟ್ಟಿಗೆ ಗೋತ್ತಿದೆ, ಹೀಗಾಗಿ ಹೋರರಾಜ್ಯದವರಿಗೆ “ಕರ್ನಾಟಕ”ವೆಂದರೆ ಬರಿ “ಬ್ಯಾಂಗಲೋರ್”, ಸೋ ಬ್ಯಾಂಗಲೋರಲ್ಲಿ ಕರ್ನಾಟಕವಿದೆ ಎಂದರೂ ನಂಬುತ್ತಾರೆ, ಎಷ್ಟೋ ಜನರಿಗೆ ಹಾಗನಿಸಿದ್ದು ಇದೆ.

ಹೋಗಲಿ ಬಿಡಿ, ಹೋರ ರಾಜ್ಯದವರು ಎನು ಬೇಕಾದರೂ ಅಂದುಕೊಳ್ಳಲಿ, ಆದರೇ ನಮ್ಮನ್ನು ಆಳುವವರು, ನಮ್ಮ ರಾಜಕಾರಣಿಗಳು, ಅಧಿಕಾರಶಾಹಿಗಳು ಹಾಗೆ ಅಂದು ಕೊಂಡರೆ ಹೇಗೆ? ಸಾಮಿ ನಮ್ಮೂರುಗಳು ಕರ್ನಾಟಕದಾಲ್ಲಿಲ್ಲವೇ ಹೇಗೆ ಎಂಬುದೆ ತಿಳಿಯುತ್ತಿಲ್ಲ, ಅದರಲ್ಲು ಉತ್ತರ ಕರ್ನಾಟಕವೆಂದರೆ ನಮ್ಮ ಸರ್ಕಾರಗಳಿಗೆ ಮೊದಲಿನಿಂದಲು ಒಂದು ತರಹದ ಉದಾಸಿನ, ಅದಕ್ಕೆ ಸರ್ಕಾರಕ್ಕೆ ಸಮವಾಗಿ ನಮ್ಮ ಪ್ರತಿನಿಧಿಗಳೂ ಕಾರಣ, ಅವರೆಲ್ಲರಿಗಿಂಥ ಹೆಚ್ಚಾಗಿ ಅವರನ್ನು ಐದು-ಹತ್ತು ಸಾರಿ ಆರಿಸಿ ಕಳುಹಿಸಿದ ನಾವೂ ಮತ್ತು ನಮ್ಮ ಅಪ್ಪ-ಅಜ್ಜಂದಿರೆಲ್ಲಾ ಕಾರಣ. ಉತ್ತರಕರ್ನಾಟಕ ಮೊದಲಿನಿಂದಲೂ “ಉತ್ತರ”ನಂತಹ ನಾಯಕರನ್ನೆ ಪಡೆಯಿತು, ಎಲ್ಲೊ ಒಬ್ಬ ಕೆ.ಎಚ್. ಪಾಟೀಲರು, ಎಸ್.ಅರ್. ಕಂಠಿ, ಪಿ.ಎಮ್.ನಾಡಗೌಡ, ವಿರೆಂದ್ರ ಪಾಟೀಲ್, ಬೊಮ್ಮಾಯಿಯಂಥಹ ನಾಯಕರನ್ನು ಪಡೆದರೂ, ಇವರಿಗೆ ಉತ್ತಮ ಬೆಂಬಲದ ಕೋರತೆಯಿಂದಾಗಿ, ದಯವಿಟ್ಟು ಕ್ಷಮಿಸಿ, “ನಾಯಿ ಮೊಲೆಯ ಹಾಲಾದರು”. ಇನ್ನು ನಮ್ಮ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಹೇಳುವುದಕ್ಕೆ ಶಬ್ದಗಳೆ ಬೇಕಿಲ್ಲ. ಇನ್ನ್ನು ಕಾವೇರಿ ನೀರಿಗಾಗಿ ತಮ್ಮ ಜೀವವನ್ನೆ ಕೊಡುವ ಹಾಗೆ ಮಾಡುವ ಈ ನಮ್ಮ ರಾಜಕಾರಣಿಗಳು ಕೃಷ್ಣೆ, ಡೋಣಿ, ಮಲಪ್ರಭಾ, ಘಟಪ್ರಭಾ ನದಿಗಳು ಕರ್ನಾಟಕದಲ್ಲಿ ಹರಿಯುತ್ತಾರೆ ಎಂಬುದು ನೆನಪಿಲ್ಲ, ಕಾವೇರಿಯಷ್ಟು ಜನರನ್ನು ಶ್ರೀಮಂತಗೋಳಿಸದಿದ್ದರು ಇವೇ ನದಿಗಳೇ ಬಿಸಿಲಿನಲ್ಲಿ ಬೆಂದು ಬರಡಾಗಿರುವ ನೆಲದಲ್ಲಿ ಬೇವರು ಸುರಿಸಿ ಬೆಂದ ರೈತನ ಭೂಮಿಗೆ ನೀರು ಹರಿಸುವುದು, ಆ ರೈತನ ಹೊಟ್ಟೆಗೆ ಹಿಟ್ಟು ನಿಡುವುದು, ಬರಿ ಹೋಟ್ಟೆಗೆ, ಜೇಬಿಗೇನಾದರು ನೀಡಲು ಈ ನದಿಗಳಿಗೂ ಸಾಧ್ಯವಾಗಿಲ್ಲ. ಕೃಷ್ಣೆ, ಮಲಪ್ರಭೆ ಯೋಜನೆಗಳಿಗಾಗಿ ಇವತ್ತು ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳಿಂದ ವಿರೋಧವಿದೆ, ಆದರೆ ಅದಕ್ಕೆ ನಮ್ಮ ಭಾಗದ ಸಚಿವರೆ ಮಾತನಾಡಬೇಕು, ಮುಖ್ಯಮಂತ್ರಿಗಳಿಂದ ಒಂದು ಪತ್ರಿಕಾ ಹೇಳಿಕೆಯು ನಸಿಬಿಲ್ಲ, ನಮ್ಮ ವಿರೋಧ ಪಕ್ಷದ ನಾಯಕರಿಗೂ ಪ್ರತಿಯೊಂದರಲ್ಲು ರಾಜಕಿಯ ಲಾಭವಿರಬೇಕು ಮತ್ತು ಸರಕಾರವನ್ನು ವಿರೋಧಿಸುವ ಸಲುವಾಗಿಯಾದರು ಅವರು ಸರಕಾರದ ಪ್ರತಿ ಹೆಜ್ಜೆಯನ್ನು ವಿರೋಧಿಸಲೇಬೇಕು, ಜನರಿಗೆ ಲಾಭವಾದರೇನು, ಬಿಟ್ಟರೇನು.

ಇನ್ನು ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳು ವಿರೋಧಪಕ್ಷದ ನಾಯಕರಿದ್ದಾಗ, ಚುನಾವಣೆಗೆ ಮುನ್ನ ನೆಡೆಸಿದ ಹೋರಾಟಗಳು, ಮಾಡಿದ ಆಶ್ವಾಸನೆಗಳು ಯಾವುದು ನೇನಪಿಲ್ಲ, ಪಾಪ ಅವರಾದರು ಎನು ಮಾಡಿಯಾರು ಅವರ ತಳವೇ ಗಟ್ಟಿಯಿಲ್ಲ, ಅವರಿಗೆ ನೇನಪಿರುವುದು “ಆಪರೇಷನ್ ಕಮಲ”ವೊಂದೆ.

ಇವತ್ತು ಬಾಗಲಕೋಟೆ, ಸರಕಾರಿ ಯೋಜನೆಗಳಿಗಾಗಿ ಸ್ಥಳಾಂತರ ಹೊಂದಿದ ಎಶಿಯಾದ ದೊಡ್ಡ ನಗರ, ಅಲ್ಲಿಗ ನಗರ ಅರ್ಧರ್ಧ ಹಂಚಿಹೋಗಿದೆ, ಅರ್ಧ ನಗರ ಆಲಮಟ್ಟಿ ಹಿನ್ನಿರಿನಲ್ಲಿ ಮುಳುಗಿ ಮೊದಲೆರಡು ಹಂತಗಳ ಬಹುತೇಕ ಜನಗಳು ನವನಗರಕ್ಕೆ ಸ್ಥಳಾಂತರಗೊಂಡಿದ್ದಾರೆ, ನಿಮ್ಮ ಮನೆಗಳಿಗೆ ಹಿನ್ನೀರು ಬಂದು ಮುಟ್ಟದೆ ಇರುವುದರಿಂದ ಮೂರನೆ ಮತ್ತು ಕೋನೆಯ ಹಂತದವರಿಗೆ ನವನಗರದಲ್ಲಿ ಜಾಗವಿಲ್ಲ, ಪರಿಹಾರವಿಲ್ಲ, ಹೀಗಾಗಿ ನಿಂತ ಹೀನ್ನಿರಿನಿಂದ ಕೇವಲ ೧೦೦ ಮೀಟರಗಳ ಅಂತರದಲ್ಲಿ ಇವತ್ತು ಜನ ವಾಸಿಸುತ್ತಿದ್ದಾರೆ, ಅವರ ಮೂರು ವರ್ಷದ ಮಗು ಆ ನಿಂತ ಹೀನ್ನಿರಿನಿಂದ ಹೋರಬರುವ ಹಾವು, ಚೇಳು ಮತ್ತು ಸಿಹಿ ನೀರ ಮೋಸಳೆಗಳ ಜೊತೆಗೆ ತನ್ನ ಪ್ರಾಣದ ಬೆಲೆಯೇ ಗೊತ್ತಿಲ್ಲದೆ ಆಟವಾಡುತ್ತಿದೆ. ಹಾಗೂ ಹೀಗು ನೀರಿನಲ್ಲಿ ಮುಳುಗುವ ಪ್ರದೇಶಗಳೆಂದು ಕಳೆದ ೫ ವರ್ಷಗಳಿಂದ ಈ ಪ್ರದೇಶಗಳಲ್ಲಿ (ಅಷ್ಟೆ ಯಾಕೆ ಪೂರ್ತಿ ಹಳೆಯ ನಗರದಲ್ಲಿ) ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಸುಧಾರಿಕರಣವಾಗಿಲ್ಲ ಹೀಗಾಗಿ ತಗ್ಗುಗಳ ನಡುವೆ ಅಲ್ಲಲ್ಲಿ ಕಾಣಸಿಗುವ ಕುರುಹುಗಳಿಂದಾಗಿ ನಾವು ನಂಬುವ ರಸ್ತೆಯೆಂಬ ನಮ್ಮ ಮೂಲಭೂತ ಸೌಕರ್ಯ, ನಮ್ಮ ಮನೆಯ ಬಚ್ಚಲುಗಳಿಂದ ಯಾವಾಗಲೊ ಹಿಂದೆ ನೀರು ಹರಿದಿತ್ತು ಎಂಬ ನಮ್ಮ ಹೀರಿಯರು ಹೇಳುವ ದೃಷ್ಟಾಂತಗಳಿಂದ ನಾವು ನಂಬುವ ಚರಂಡಿಯೆಂಬ ಇನ್ನೊಂದು ನಮ್ಮ ಮೂಲಭೂತ ಸೌಕರ್ಯ, ಇವಷ್ಟೆ ಈ ಹಳೆಯ ನಗರದಲ್ಲಿ ಕಾಣಸಿಗುವುದು. ಆದರೂ ಈಂಥಹ ಮೂಲಸೌಕರ್ಯಗಳೊಂದಿಗೆ ನಮ್ಮೂರ ಮುಖ್ಯಪೇಟೆ ಇನ್ನು ಹಳೆಯ ಊರಲ್ಲೆ ಊಳಿದಿದೆ, ಎಲ್ಲ ಒಳ್ಳೆಯ (ಹಳೆಯ ಊರಲ್ಲಿರುವುದಕ್ಕಿಂತಲೂ) ಮೂಲಭೂತ ಸೌಕರ್ಯ ಹೊಂದಿದ ನವನಗರದಲ್ಲಿ ಪ್ರತಿಯೊಂದು ಪೇಟೆಯ ಸಾಮಾನುಗಳಿಗಾಗಿ ಇನ್ನು ಹಳೆಯ ನಗರಕ್ಕೆ ಬರಬೇಕು. ಇನ್ನು ಹಳೆಯ ನಗರದ ಮತ್ತೊಂದು ವಿಶೇಷವೆಂದರೆ ಇಲ್ಲ ದ್ವಿಚಕ್ರ ವಾಹನ ಚಾಲಕರು ರಸ್ತೆಯೆಂಬ ತಮ್ಮ ನಂಬಿಕೆಯ ಮೇಲೆ ವಾಹನ ಚಲಾಯಿಸುವಾಗ ಮಂದಿಗಿಂತ “ಹಂದಿ”ಗೆ ಹೆದರಬೇಕಾಗಿದೆ, ಯಾಕೆಂದರೆ ಯಾವಾಗ, ಯಾವ ದಿಕ್ಕಿನಲ್ಲಿ, ಹೇಗೆ ಈ ಹಂದಿಗಳು ಬರುತ್ತಾವೆಯೋ ಗೋತ್ತಿಲ್ಲ.

ಅರೆ ಇಷ್ಟೆಲ್ಲಾ ಪಿಠೀಕೆ ಯಾಕೆಂದರೆ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ವಿರೋಧಪಕ್ಷದ ನಾಯಕರಾಗಿದ್ದಾಗ ಬಾಗಲಕೋಟೆಯ ಪೂರ್ಣ ಸ್ಥಳಾಂತರಕ್ಕಾಗಿ ಜಿಲ್ಲಾಧಿಕಾರಿಗಳ ಆಫಿಸಿನ ಎದುರಿಗೆ ಅಹೋ ರಾತ್ರಿ ಉಪವಾಸ ಸತ್ಯಾಗ್ರಹ ಮಾಡಿದ್ದರು, ಉಪಮುಖ್ಯಮಂತ್ರಿಗಳಾಗುವ ಮುಂಚೆ ಇವರ ನೇತೃತ್ವದಲ್ಲೆ ಎಲ್ಲ ಬಿ.ಜೆ.ಪಿ. ಶಾಸಕರು ಬಾಗಲಕೋಟೆಯಲ್ಲಿ ಸಾಮೂಹಿಕ ಧರಣಿ ಮಾಡಿದ್ದರು.

ಮುಖ್ಯಮಂತ್ರಿಗಳಾಗುತ್ತಲೆ ಮತ್ತದೆ ಹಿಂದಿನ ಮುಖ್ಯಮಂತ್ರಿಗಳ ರೀತಿ ಉತ್ತರಕರ್ನಾಟಕದತ್ತ ಉದಾಸಿನ ಧೋರಣೆ, ಯೋಜನೆಗಳೆಲ್ಲ ಬೆಂಗಳೂರು ಮತ್ತು ಶಿವಮೊಗ್ಗಕ್ಕೆ ಹಂಚಿಕೆ, ಅತಿ ಹೆಚ್ಚು ಬಿ.ಜೆ.ಪಿ. ಶಾಸಕರನ್ನು ಆರಿಸಿ ಕಳುಹಿಸಿದ್ದಕ್ಕೆ ಉತ್ತರ ಕರ್ನಾಟಕಕ್ಕೆ ಆವಾಗವಾಗ ಮೂಗಿಗೆ ತುಪ್ಪ, ಬಾಯಿಗೆ ಮೊಸರು ಮೆತ್ತಿದ್ದು ಬಿಟ್ಟರೆ ಬೇರೆ ಎನೂ ಲಾಭವಿಲ್ಲ, ನಮ್ಮ ಶಾಸಕರು ಸುಮ್ಮನಿರುವುದೆ ತಮ್ಮ ಹೆರಿಯರಿಂದ ಬಂದ ಬಳುವಳಿ ಎನ್ನುವಂತೆ ಸುಮ್ಮನುಳಿದು ಬಿಟ್ಟಿದ್ದಾರೆ, ನಮ್ಮ ಜನರು “ಯಥಾ ರಾಜಾ, ತಥಾ ಪ್ರಜಾ” ಎನ್ನುವಂತೆ ಅವರು ಸುಮ್ಮನೆ ಉಳಿದಿದ್ದಾರೆ. ಯಾಕೆಂದರೆ ಇವರು ಅವರನ್ನು, ಅವರು ಇವರನ್ನು ಬೆರಳು ಮಾಡಿ ತೋರಿಸಿ ಇಲ್ಲಿ ಇಂಡಸ್ಟ್ರಿಗಳಿಲ್ಲ, ಅವರು ಬರುತ್ತಿಲ್ಲ ಎನ್ನುತ್ತಾರೆಯೆ ಹೋರತು, ಔದ್ಯೋಗಿಕರಣಕ್ಕೆ ಬೇಕಾಗು ಮೂಲಸೌಕರ್ಯಗಳಾದ ಉತ್ತಮ ರಸ್ತೆ, ವಿದ್ಯುತ್, ಜಲ ಸೌಲಭ್ಯಗಳನ್ನು ಸುಧಾರಿಸುವ ಬಗ್ಗೆ ಯಾರು ಯೋಚಿಸುತ್ತಿಲ್ಲ, ನೆಲ ಮತ್ತು ಕೆಲಸಗಾರರಿಗೆ ಯಾವುದೆ ಕಮ್ಮಿ ಅಲ್ಲಿಲ್ಲ. ಸಾಕಷ್ಟು ಬರಡು ನೆಲ, ಕೆಲಸವಿಲ್ಲದೆ ಮುಂಬೈ-ಪುಣೆ-ಗೋವಾಗಳಿಗೆ ಗುಳೆ ಹೋಗುವ ಜನವಿರುವ ಭಾಗದಲ್ಲಿ, ಕೇವಲ ಮೂಲಸೌಕರ್ಯದ್ದೆ ಕೋರತೆ ಮತ್ತು ಅದನ್ನು ಸರ್ಕಾರದಿಂದ ಕೇಳಲಾಗದ ನಮ್ಮ ಹೋಣಗೇಡಿತನವೇ ಕಾರಣ.

ನಾನು ಮತ್ತು ನನ್ನಂಥವರು ಪ್ರತಿ ಸಲವೂ ನಮ್ಮೂರ ಬಸ್ಸು ಕರ್ನಾಟಕ ಪ್ರವೇಶಿಸಿದಾಗ ಪುಟಿಪುಟಿದು ಸಂಭ್ರಮಿಸುತ್ತೆವೆ, ನಿದ್ರೆಗಣ್ಣಲ್ಲೆ.

ಇದನ್ನು ಓದಿ ಗೆಳೆಯರು “ಮಗನ ಅಷ್ಟ ತ್ರಾಸಾಗುದಿದ್ದರ ಊರಿಗೇನ ಬರಬ್ಯಾಡ, ಅಲ್ಲೆ ಮುಂಬಯಿದಾಗ ಇರು. ಬರುವಂಗಿದ್ದರ ಸುಮ್ಮನ ಬಂದು ಸುಮ್ಮನ ಮುಚ್ಕೊಂಡು ಊರಿಗೆ ಹೋಗು, ನಿನಗ್ಯಾಕ ಬೇಕೊ ಮಗನ ಊರ ಊಸಾಬರಿ” ಅನ್ನದಿದ್ರ ಅಷ್ಟ ಸಾಕು.

ಜೈ ಕರ್ನಾಟಕ…

ಸ್ವಲ್ಪ ಹಳೆಯದು “ಹೀಗೊಂದು ಸಂಜೆ…”

ಪಾರ್ಕಿನ ಗೇಟಿಗೆ ಸಮೀಪದಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತಿದ್ದ ಅವಳ ತೊಡೆಯ ಮೇಲೆ ಅವನ ಕೈ, ಅವನ ಕೈ ಮೇಲೆ ಅವಳ ಕೈ. ಅವಳ ಬೆರಳುಗಳು ಅವನ ಬೆರಳುಗಳೊಡನೆ ಆಟವಾಡುತ್ತಿದ್ದವು. ಕಳೆದ ಅರ್ಧ ಗಂಟೆಯಿಂದ ಅವರಿಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ. ಬರಿ ಬೆರಳುಗಳೊಂದಿಗೆ ಬೆರಳಾಟ, ಮನದಲ್ಲಿ ಭಾವನೆಗಳ ಹೊಯ್ದಾಟ, ಮನದಲ್ಲಿ ಮೂಡಿದ ಭಾವನೆಗಳು ಮಾತುಗಳಾಗುತಿಲ್ಲ. ಇಬ್ಬರ ಕಣ್ಣು-ಕಣ್ಣುಗಳು ಸಂಧಿಸಿದವು. ಇಬ್ಬರಿಗೂ ಭಾವನೆಗಳ ಪ್ರಾವಾಹದಲ್ಲಿ ತೆಲಿ ಹೋದಂತಾಯಿತು. ಮೊದಲು ಹತೋಟಿಗೆ ಬಂದವಳು ಅವಳೇ, ಅವನ ಕೈಯನೊಮ್ಮೆ ಅದುಮಿ, ಸಮಾಧಾನ ಮಾಡಿಕೊಳ್ಳೆಂದು ಕಣ್ಣಲ್ಲೇ ಹೇಳಿದಳು. ಅವನಿಗಿನ್ನೂ ಕಣ್ಣೀರು ತಡೆದಿಟ್ಟುಕೊಳ್ಳಲಾಗಲಿಲ್ಲ. ಕಣ್ಣೀರ ಹನಿ ಕೆನ್ನೆಯಿಂದಿಳಿದು ಕೈ ಮೇಲೆ ಬಿದ್ದಾಗಲೆ ಅವನಿಗೆ ಗೊತ್ತಾಗಿದ್ದು ತಟ್ಟನೆ ಕಣ್ಣೀರನ್ಣೊರೆಸಿಕೊಂಡು, “ತುಂಬಾ ಕಣ್ಣುನೋವೂ, ಇತ್ತಿಚಿಗೆ ಕಣ್ಣಿಂದ ನೀರು ತನ್ನಿಂದ ತಾನೇ ಹಾಗೆ ಬರುತ್ತವೆ” ಅಂದ ಅವರಿಬ್ಬರ ನಡುವೆ ಸಂಭಾಷಣೆ ಹೀಗೆ ಶುರುವಾಗಿತ್ತು.

ಅವಳು ತನ್ನ ಕಣ್ಣಂಚಿಗೆ ಬಂದು ನಿಂತಿದ್ದ ಕಣ್ಣೀರ ಹನಿಗಳನ್ನು ತನ್ನ ಪುಟ್ಟ ಹಂಸಬಿಳುಪಿನ ಕೈವಸ್ತ್ರದಿಂದ ಹತ್ತಿಕ್ಕಿಕೊಂಡು, ಕಣ್ಣಲ್ಲಿ ಕಸ ಬಿದ್ದಿದೆಯೇನೋ ಎಂಬಂತೆ ಒರೆಸಿಕೊಂಡಳು, “ರಾಕ್ಷಸ ಕಣೋ ನೀನು, ಕೆಲಸಕ್ಕೆ ಅಂತ ಕುಳಿತರೆ ಏಳೋದೇ ಇಲ್ಲ, ಯಾವುದಾದರೂ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಮುಗಿಸಿ ಎಳೋವರೆಗೂ ಕಣ್ಣಿನ ರೆಪ್ಪೆಗಳನ್ನು ಬಡಿಯೋದಿಲ್ಲ. ಇವಾಗಲಾದ್ರೂ ಸರಿಯಾಗಿ ನಿದ್ರೆ ಮಾಡ್ತೀಯೋ ಇಲ್ವೋ, ಗೂಬೆ ಜಾತಿಯೋನೇ”, ಎನ್ನುತ್ತಾ ಎದೆಯಾಳದಿಂದ ಬಾರದ ನಗೆಯನ್ನು ತುಟಿಗೆ ತರುವ ಯತ್ನ ಮಾಡಿದಳು. ಅವನು ಕೂಡ ಅದೇ ಪ್ರಯತ್ನದಲ್ಲಿ, “ನನ್ನ ಕಣ್ಣಿಗೆ ನಂಬರ ಬರದಿದ್ದರು, ನನ್ನ ಸುತ್ತಳತೆ ಸಾಕಷ್ಟು ಬೆಳದಿದೆ, ಅದಕ್ಕೆ ತಕ್ಕಂತೆ ನಿನ್ನ ಕನ್ನಡಕದ ನಂಬರ್ ಏರಿದೆ” ಎಂದ.

ಇಬ್ಬರು ಬಾರದ ನಗೆಯನ್ನು ತುಟಿಗೆ ತರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ, ಕಾಲೇಜಿನಿಂದ ನೇರವಾಗಿ ಪಾರ್ಕಿಗೆ ಬಂದ ಒಂದು ಜೋಡಿ ಅವರ ಪಕ್ಕದಲ್ಲಿಯೇ ಬೈಕ ನಿಲ್ಲಿಸಿ. ಕೈ-ಕೈ ಹಿಡಿದು ಪಾರ್ಕಿನ ಗಿಡ-ಮರಗಳ ನಡುವೆ ಮರೆಯಾದರು. ಅದನ್ನು ಕಂಡ ಅವರಿಬ್ಬರ ಕಣ್ಣುಗಳಲ್ಲಿ ಹೇಳಲಾಗದ ಮಂದಹಾಸವೊಂದು ಮೀನುಗಿ, ಮೂಡಿದಷ್ಟೇ ವೇಗವಾಗಿ ಕರಗಿಹೋಯಿತು. ಇಲ್ಲಿಯವರೆಗೂ ಕೂತಿದ್ದ ಕಲ್ಲು ಬೆಂಚಿನ ಮೇಲೆ ಈಗ ಕುಳಿತುಕೊಳ್ಳಲಾಗದೇ ಚಡಪಡಿಸಿದರು. ಅದು ಇಬ್ಬರಿಗೂ ಅರ್ಥವಾಗಿ ಅಲ್ಲಿಂದೆದ್ದು ಪಾರ್ಕಿನ ಗೆಟನ್ನು ದಾಟಿ ರಸ್ತೆಗೆ ಬಂದರು. ಕಣ್ಣಲ್ಲೇ ನೂರಾರು ಮಾತು ಮಾತನಾಡಿ, ಕಣ್ಣಲ್ಲೇ ವಿದಾಯ ಹೇಳಿ ಅವನು ಎಡಕ್ಕೂ ಮತ್ತು ಅವಳು ಬಲಕ್ಕೂ ತಿರುಗಿ ಹೋರಟರು.

ಹತ್ತು ಹೆಜ್ಜೆ ನೆಡದ ಅವಳು ಅಲ್ಲಿಯೇ ಹಿಂದೆ ತಿರುಗಿ ನಿಂತಳು. ಅವನು ಹಿಂತಿರುಗಿ ನೋಡುವನೇನೋ ಎಂದು ಕಾದಳು. ಅವನು ತನ್ನಷ್ಟಕ್ಕೆ ತಾನೇ ಏನೋ ಮಾತನಾಡುತ್ತಾ ಹಾಗೆ ಹೊರಟಿದ್ದ. ಅವಳು ಸ್ವಲ್ಪ ಹೊತ್ತು ಕಾಯ್ದು, “ಇವತ್ತಿಗೂ ಇವನು ಏನು ಬದಲಾಗೆ ಇಲ್ಲ” ಎಂದುಕೊಳ್ಳುತ್ತಾ ನಿಟ್ಟುಸಿರು ಬಿಟ್ಟಳು.

ಅವನಿಗೆ ಹೋಗುತ್ತಾ ಒಮ್ಮೆ ಹಿಂತಿರುಗಿ ನೋಡಬೇಕೆನಿಸಿತು……ಮತ್ತೊಮ್ಮೆ ಅವಳ ಶಾಂತ ಸರೋವರಕ್ಕೆ ಕಲ್ಲೇಸೆದು ಕದಡುವ ಪ್ರಯತ್ನ ಬೇಡವೆಂದು ತನ್ನ ಮನಸ್ಸಿಗೆ ಬುದ್ಡಿ ಹೇಳುತ್ತಾ, ಒಮ್ಮೆ ಬೈಯುತ್ತಾ, ಮತ್ತೊಮ್ಮೆ ರಮಿಸುತ್ತಾ ಆ ಅಜ್ಜನು ಹಾಗೆಯೇ ಕಾಲೇಳೆಯುತ್ತಾ ಮುನ್ನೇಡದ. ಅಲ್ಲಿಯೇ ನಿಂತಿದ್ದ ಅಜ್ಜಿ ಮತ್ತೊಮ್ಮೆ ತನ್ನ ಹಂಸಬಿಳುಪಿನ ಕೈವಸ್ತ್ರವನ್ನು ಮುಖಕ್ಕೆ ಹತ್ತಿರ ತಂದಳು.

——–
೫೦ರ ಸಂಭ್ರಮಕ್ಕೆ ಹಳೆಯದೆ ಉಡುಗೊರೆ, ಇದು ನನ್ನ ೫೧ನೆಯ ಪೋಸ್ಟ. ಇಲ್ಲಿಯವರೆಗೂ ನನ್ನನ್ನು ಸಹಿಸಿದ್ದಕ್ಕೆ ಎಲ್ಲರಿಗೂ ಅಭಿನಂದನೆಗಳು ಮತ್ತು ಮುಂದೆಯೂ ಹೀಗೆ ಸಹಿಸಿಕೊಳ್ಳುವಿರೆಂದು ನಂಬಿ ನಿಮಗೆಲ್ಲರಿಗೂ ಧನ್ಯವಾದಗಳು.

ಪ್ರೀತಿಯಿರಲಿ

-ಶೆಟ್ಟರು

ಎಂ. ಎಫ್. ಹುಸೇನ್ ಮತ್ತು ಹಿಂದುಗಳ ಮತಾಂಧತೆ?

ಹಾಗೆ ಸುಮ್ಮನೆ…


 ಆನಸೈಟು, ಅಪ್ರೈಜಲ್ಲು, ವೇರಿಯೆಬಲ್ಲು-
ಗಳ ನಡುವೆ ಸಂತೋಷ ಅರಸುತ್ತಿದ್ದೆವೆ.
ಎಷ್ಟೋ ದಿನಗಳಾಯಿತು ಮನಸಾರೆ ನಗದೆ,
ನಗದುಗಳ ನಡುವೆ ನಗಲು ಕಾರಣ ಹುಡುಕುತ್ತಿದ್ದೇವೆ.

ಕಂಡ ಕನಸುಗಳಿಗೆಲ್ಲಾ
ಬಸಿರಾಗುವ ಬಯಕೆ,
ವಿಧಿ ಸುಮ್ಮನೆ ಬಿಟ್ಟಿತೇ
ಅದಕ್ಕೆ ನಮ್ಮನ್ನು ಕೆಡುವುವ ಹವಣಿಕೆ.

ಹೊಟ್ಟೆನೋವು ಮತ್ತು ಲೇಮನ್ ಸೋಡಾ: ಹೀಗೂ ಒಂದು ಪ್ರೇಮಕಥೆ

ಇದು ಕಥಾ ಕಾಲಕ್ಷೇಪ

couple.jpg

“ನೀನು ಬರ್ತೀಯೋ ಇಲ್ವೋ? ಏನೋ ಅನ್ನೋದನ್ನ ನನಗೆ ಹತ್ತೇ ಹತ್ತು ನಿಮಿಷದಲ್ಲಿ ಹೇಳು, ನಾನು ಹೊರಗಡೆ ನಿನಗೋಸ್ಕರ ಕಾಯ್ತಾ ಇರ್ತೀನಿ”, ಎಂದು ಭೂಸುಗೂಡುತ್ತಾ ಹರ್ಷ ಲೈಬ್ರರಿಯಿಂದ ಹೊರಗಡೆ ಬಂದು ಗಿಡದ ನೆರಳಿಗೆ ನಿಂತ.

‘ಏನೋ ಇವಳೊಬ್ಬಳಿಗೆ ಮಾತ್ರ ಇಂಟರ್ನಲ್ ಇರೋ ಹಾಗೆ ಮಾಡ್ತಳೆ, ಬೇರೆಯವರಿಗೇನು ಇಲ್ವಾ’. ಯಾವತ್ತೂ ತನ್ನ ಬೈಕ ಮುಟ್ಟಿಸೋಕೆ ಬಿಡದೆ ಇರೋ ಪಕ್ಯಾ (ಪ್ರಕಾಶ) ಇವತ್ತು ನನ್ಮಗ ಯಾವ ಮೂಡಲ್ಲಿದ್ನೊ, “ಮಾಮಾ, ನನ್ನ ಹುಡಿಗಿನ ಎಲ್ಲಾದ್ರೂ ಸುತ್ತಾಡಿಸ್ಕೊಂಡು ಬರ್ತೀನಿ ಬೈಕ ಕೊಡೋ” ಎಂದ ಕೂಡಲೇ ಕೊಟ್ಟೆ ಬಿಟ್ಟ, ಪೆಟ್ರೋಲ್ ಟ್ಯಾಂಕ ಬೇರೆ ಫೂಲ ತುಂಬಿಸಿದ್ದಾನೆ. ಇವಳು ನೋಡಿದ್ರೆ ‘ಇವತ್ತು ಬ್ಯಾಡಾ, ಮತ್ಯಾವತ್ತರ ಹೋಗೋಣೂ’ ಅನ್ನುತ್ತಿದ್ದಾಳೆ.

ಮೊನ್ನೆ ಇವಳು ಕರೆದು ಕೂಡ್ಲೇ ಆ ಹುಸೆನ್ಯಾ “ಚಿಕನ್” ಮಾಡಿಸಿಕೊಂಡು ಬರವೊನಿದ್ರು, ನನ್ನ ಫೆವರಿಟ್ ಚಿಕನ್ ತಿನ್ನುದು ಬಿಟ್ಟ ಇವಳ ಜೊತೆ ಆ ಕೃಷ್ಣನ ಗುಡಿಗೆ ಹೋದ್ಯಾ, ಅಲ್ಲಿ ಆ ಸುಂಬಳ ಬುರುಕಿ ಸೂಜಿ ಸಿಕ್ಕ ಕೂಡ್ಲೇ, ಆಕಿ ಜೋಡಿ ಬಂದಿದ್ದ ಅವಳ ಅಕ್ಕನ 3 ವರ್ಷದ ಮಗುವಿನ ಜೊತೆ ನನ್ನನ್ನೇ ಮರೆತು ಒಂದು ಗಂಟೆ ಆಟ ಆಡಿದ್ಲು, ಖರೇಣಾ ಒಂದ ಗಂಟೆ, ನಾನು ವಾಚನ್ನೇ ನೊಡ್ಕೋತ ಕೂತಿದ್ದ್ಯ. ಕೊನಿಗಿ ಆ ಸುಂಬಳ ಸೂಜಿ ಆಕಿ ಮನಿಗಿ ಬಾ ಅಂತ ಕರೆದ್ರ ಹೊರಟೆ ಬಿಟ್ಲು, “ನೀನು ರೂಮಿಗೆ ಹೋಗೋ, ನಾನು ಈಕೀ ಮನೆಯಿಂದ ಸೀದಾ ಹಾಸ್ಟೆಲಗೆ ಹೋಗ್ತೀನಿ” ಅಂತ ಹೇಳಿ ಆ ಮಗುವನ್ನೆತ್ತಿಕೊಂಡು ಅದಕ್ಕೆ ಮುತ್ತು ಕೊಡುತ್ತಾ ಹೋದಳು, ನನಗದೆಷ್ಟು ಉರಿತು…. ಚಿಕನ್ ಆದ್ರೂ ಸಿಗುತ್ತೆ ಅಂತ ರೋಮಿಗೆ ಬಂದ್ರೆ ಆ ನನ್ಮಕ್ಳು ಪಕ್ಯಾ, ಶಂಕರ್ಯಾ, ರಾಜ್ಯಾ ಕೂಡಿಕೊಂಡು ಡಬ್ಬಿ ನೆಕ್ಕೋತ ಕುಂತಿದ್ರು. ಅದಕ್ಕೆ ಮೇಲಾಗಿ ಆ ಪಕ್ಯಾ, “ಏನೋ ಮಾಮಾ, ನಿನ್ನ ಸುಮ್ಮಿನ ಎಲ್ಲಿಗ್ಯೋ ಕರ್ಕೊಂದ ಹೊಕ್ಕಿನಿ ಅಂತ ಹೇಳಿ ಇಷ್ಟ ಜಲ್ದಿ ಹೊಳ್ಳಿ ಬಂದ್ಯಲ್ಲೇ” ಅಂತ ನಗ್ತಾ ಕೇಳಿದಾಗ ಮೈಯೆಲ್ಲ ಉರ್ಕೊಂಡು ಬಂದು… ಏನು ಮಾಡಾಕಾಗ್ಡೆ ತಲೆನೋವು ಅಂತ ಮುಸುಕೇಳೆದುಕೊಂಡು ಮಲಗಿದೆ.

ಅಂತಾದ್ರಲ್ಲಿ ಇವತ್ತು ಬೈಕ್ ತಗೊಂಬಂದು, ಹೊರಗಡೆ ಹೋಗೋಣ ಬಾ ಅಂದ್ರೆ ಇವಳೊಬ್ಬಳು. ಹಾಂ.. ಬರ್ತಾಯಿದ್ದಾಳೆ.. ಅವಳ ಹೆಜ್ಜೆ ಸಪ್ಪಳ ಎಲ್ಲಿದ್ರು ಗುರ್ತಿಸಿಬಿಡ್ತೀನಿ.. ಅವನು ಮುಖದ ಮೇಲಿನ ಸಿಟ್ಟು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೆ ಅವಳು ಅವನ ಹತ್ತಿರಕ್ಕೆ ಬಂದು ನಿಂತಳು, “ದೋರೆ ಯಾಕೋ ಸಿಟ್ ಮಾಡ್ಕೋತಿಯ, ಇವತ್ತೊಂದಿನ ಬೇಡ್ವೋ, ಪ್ಲೀಜ್..” ಎಂದಳು. ಅದಕ್ಕವನು “ಎಲ್ಲ ನೀನು ಅಂದಕೊಂಡಂಗೆ ನಡಿಬೇಕಾ… ನೀನು ಕರೆದಾಗಲೆಲ್ಲ ನಾನು ಬಂದಿಲ್ಲಾ? ನೀನು ಹೇಳಿದ ಹಾಗೆಲ್ಲಾ ಕೇಳಿಲ್ಲಾ? ಇವತ್ತು ನನ್ನದೊಂದು ಸಣ್ಣ ಆಸೇನು ನೆಡೆಸೋದಿಲ್ವ?” ಅಂದನು.

“ನಾನ್ಯಾವತ್ತು ನಿನಗೆ ಬೇಡ ಅಂದೀದಿನೋ ನನ್ರಾಜಾ, ಇವತ್ತೊಂದಿನ ಬೇಡ್ವೋ, ಪ್ಲೀಜ್ ತುಂಬಾ ಹೊಟ್ಟೆ ನೋವು” ಎಂದವಳು ಪಿಸುಗುಟ್ಟಿದಳು.

“ಊಟಾ ಮಾಡಿ, ಹಂಗ ಒದ್ಕೊತ ವಂದ ಕಡೆ ಕುಂತರ ಅಜೀರ್ಣ ಆಗಿ ಇನ್ನೇನಾಗ್ತದ, ನಡಿ ಹೊರಗ ಒಂದ ರೌಂಡ ಬೈಕ ಮ್ಯಾಲೆ ಹೋಗಿ ಬರುಣ, ಹಂಗ ಒಂದೊಂದು ಸೋಡಾ ಕುಡ್ದ ಬರುಣು, ಹೊಟ್ಟೆ ನೋವು ಕಡಿಮಿ ಅಕ್ಕೈತಿ ಬಾ” ಅಂದ. ಅದಕ್ಕವಳು ಹಣೆ ಚಚ್ಚಿಕೊಳ್ಳುತ್ತಾ ” ಆ ತರಾ ಹೊಟ್ಟೆನೋವು ಅಲ್ವೋ, ಇವತ್ತೇ ಲ್ಯಾಸ್ಟ ಡೇ, ನಾಳೆ ನೀನು ಹೇಳಿದ ಕಡೆ ಹೋಗೋಣ” ಎಂದಳು.

“ನಿಂದೇನೆ ಸ್ಪೆಷಲ್ ಅದು, ಹೊಟ್ಟೆನೋವಿಗೂ ಡೇಟ್ಸ್ ಕೊಟ್ಟಿಯೆನ? ಇವತ್ತ ಲ್ಯಾಸ್ಟ ಡೇ ಅಂತ. ನೀನಗ ನಂಜೋತಿ ಬರಾಕ ಮನಸಿಲ್ಲ ಅದಕ್ಕ ನೀ ಹಿಂಗ ಹೇಳಾಕತ್ತಿ, ನಾನು ಮುಂದ ಹೋಗಿ ಆ ಕ್ಯಾಂಟಿನ ಹತ್ರ ನಿಂತಿರ್ತೀನಿ ನೀನಗ ನನ್ನ ಮ್ಯಾಲೆ ಓಂಚೂರರ ಪ್ರೀತಿ ಇದ್ರ ಬರ್ತೀ, ಇಲ್ಲ ಅಂದ್ರ ನಿನಗ ನನ್ನ ಮ್ಯಾಲೆ ಪ್ರೀತಿನ ಇಲ್ಲ ಅಂತ ತಿಳ್ಕೊಂಡೂ ಇನ್ಮ್ಯಾಲೆ ನಿನ್ನ ತಂಟೆಗ ಬರುದಿಲ್ಲ” ಎಂದು ಹೇಳಿ ಬೈಕ್ ಹತ್ತಿಬಿಟ್ಟು ಸೀದಾ ಹೊರಟೆ ಬಿಟ್ಟ.

ಲೈಬ್ರರಿಯ ಒಳಗಡೆ ಹೋದ ಅವಳು ತನ್ನೆಲ್ಲ ಪುಸ್ತಕಗಳನ್ನು ಎತ್ತಿಟ್ಟುಕೊಂಡು ಸೀದಾ ಕ್ಯಾಂಟೀನಿನ ಬಳಿ ಬಂದಳು. ಅವನಿನ್ನೂ ಮುಖದ ಮೇಲೆ ಸಿಟ್ಟಿಟ್ಟುಕೊಂಡೆ ಕುಳಿತಿದ್ದ. ಬಂದವಳೇ ಸೀದಾ ಅವನ ಹಿಂದೆ ಕುಳಿತುಕೊಂಡು ಅವನ ಬೆನ್ನಿಗೆ ಒಂದು ಗುದ್ದು ಕೊಟ್ಟು, “ನಡಿ ಎಲ್ಲಿಗೆ ಕರಕೊಂಡು ಹೋಗ್ತೀಯೋ ಹೋಗು” ಎಂದಳು.

ಬೈಕನ್ನು ಸ್ಟಾರ್ಟ್ ಮಾಡಿದ ಅವನು “ಅಮ್ಮೌವ್ರೆನೋ ಹೊಟ್ಟೆನೋವು ಅಂತಿದ್ರಿ, ಲೇಮನ್ ಸೋಡಾ ಕುಡಿಯುನೇನು?” ಎಂದ.

ಅವಳು ಅವನ ತಲೆಗೊಂದು ಏಟು ಹಾಕಿ, “ಅದು ಆ ತರಾ ಹೊಟ್ಟೆನೋವಲ್ವೋ ಕೋತಿ, ಪೀರಿಯಡ್ಸು. ಇವತ್ತೇ ಕೊನೇ ದಿನ” ಎಂದಳು. ಅವನು ಅವಳನ್ನೊಮ್ಮೆ ಬೈಕನ ಕನ್ನಡಿಯಲ್ಲಿ ಅವಳನ್ನು ನೋಡಿ, ನಾಚಿ ಮುಗುಳ್ನಗೆ ಬೀರಿದ. ಅವಳು ಅವನನ್ನು ಗಟ್ಟಿಯಾಗಿ ತಬ್ಬಿ, “ದೋರೆ ಇಗ್ಲೇ ಹೀಗಾದ್ರೆ, ಮದುವೆಯಾದ ಮೇಲೆ ಈ ಮೂರು ದಿನ ಹೇಗೋ?” ಎಂದಳು. ಅವನು ಬೈಕಿನ ಕಿವಿ ಜೋರಾಗಿ ತಿರುವಿ ವೇಗವನ್ನು ಹೆಚ್ಚಿಸಿದ. ;)

“ಗಝಲ್” ಎಂಬ ಮನಸಿನ ಗೋಜಲು

ಗೆಳತಿ
ನನ್ನೆದೆಯ ಬೆಂಕಿ ಸುಡುತ್ತಿದೆ, ಗೆಳತಿ
ನೀನಿಲ್ಲದೆ ಕಂಡು ಮನಸ್ಸೇಕೊ ಮಂಕಾಗಿದೆ.
ನೀನಗೇನೋ ಹಠವಿದೆ, ನಾ ನಿನ್ನ ಮರೆಯಬೇಕಿದೆ
ಮನಸಿಗೇನು ಹೇಳಲಿ, ಅದಕ್ಕೆ ನೀನೇ ಬೇಕಿದೆ.
ನಿನ್ನ ಕಂಡು ನನ್ನ ಮನ ನನ್ನೇ ಮರೆತಿದೆ
ಪ್ರತಿ ಕನ್ನಡಿಯಲ್ಲೂ ನಿನ್ನದೆ ಬಿಂಬ ಅರಳಿದೆ.
ಬೆಳಕಿನ ಕಿರಣಗಳು ಕಣ್ಣು ಕುಕ್ಕುತ್ತವೆ
ರಾತ್ರಿಯ ಕತ್ತಲು ಭಾರಿ ಗೆಳೆಯರಾಗಿವೆ.
ಇದು ನೀ ಕೊಟ್ಟ ಕಾಣಿಕೆಯೇ ಇರಬೇಕು
ನನ್ನ ನಾ ಮಾತನಾಡಿಸಲು ಹೆದರಬೇಕು.

ಪದ್ಮಶ್ರೀ. ಕೆ.ಎಸ್.ನಿಸಾರ್ ಅಹಮದ್

nisar.jpg

ಮಕರ ಸಂಕ್ರಾಂತಿ ಶುಭಾಶಯಗಳು

sankranti1.jpg


a

Blog Stats

  • 7,973 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು