ನಿನ್ನದೇ ನೆನಪು…

 

ಸೂರ್ಯಾಸ್ತದ ವೇಳೆ,
ಮುಗಿಲಿಗೆ ಕೆಂಪನೆ ರಂಗು
ನನಗೆ ನಿನ್ನ ನೆನಪಿನ ಗುಂಗು

ಮೂಡಣದಲಿ ಮೂಡಿ
ಪಡುವಣದಲಿ ಮುಳುಗುವವನು ಅವನು,
ಎದೆಯೋಳಗಡೆ ಮೂಡಿ
ಕಣ್ಣಂಚಲಿ ಜಾರುವವಳು ನೀನು

ನಿನಗೂ, ಆ ಸೂರ್ಯನಿಗೂ ಏನಿದು ಹೋಲಿಕೆ?
ನೀವಿಬ್ಬರು ಹಾಗೆಯೇ, ಒಂದೆಡೆ ಮುಳುಗಿ
ಇನ್ನೊಂದೆಡೆ ಏಳುವವರು ನೀವು.

ಅವನಾದರೋ ನಾಳೆ ಮತ್ತೆ ಬರುವನೆಂಬ ನಂಬಿಕೆ,
ನೀನೋ, ನನಗೆ ಮತ್ತೆ ಸಿಗದಿರೋ ಹತಾಶೆ.

Advertisements

ಬಾಗಲಕೋಟೆ ಹೋಳಿ: ಹೀಗೆ ಸವಿ ಸವಿ ನೆನಪು…

 

ಇವತ್ತು ಹೋಳಿ ಹುಣ್ಣಿವೆ, ಊರಲ್ಲಿಲ್ಲ, ಹೋಳಿಗೆ ಮಾಡುವವರಿಲ್ಲ ಹೀಗಾಗಿ ಹೊಯ್ಯಕ್ಕೊಳ್ಳುದು ಇಲ್ಲ ಯಾಕಂದ್ರ ಹೋಯ್ಕೊಂಡ ಬಾಯಿಗೆ ಹೋಳಿಗೆ ತುಪ್ಪ ಬೇಕಲ್ಲ. ನನ್ನೂರು ಬಾಗಲಕೋಟೆ, ಹೋಳಿಯ ತನ್ನದೇ ಆದ ವಿಶಿಷ್ಥ ಸಂಪ್ರದಾಯ, ಆಚರಣೆಗೆ ಪ್ರಸಿದ್ದ. ಬಾಗಲಕೋಟೆ ಹೋಳಿ ಹುಣ್ಣಿವೆ ಅಂದ್ರ ಅದರ ಖದರೇ ಬೇರೆ, ಹಲಗಿ ಮೇಳ, ತುರಾಯಿ ಹಲಗಿ, ನಿಶಾನಿ, ಸೋಗಿನ ಬಂಡಿ, ಬಣ್ಣದ ಗಾಡಿ ಮೇಲಾಗಿ ಮೂರು ದಿನಗಳ ಭರ್ಜರಿ ಬಣ್ಣ ಎರಚಾಟ. ಕೇಳಬ್ಯಾಡ್ರಿ ಆ ಹುರುಪು- ಹುಮ್ಮಸ್ಸು, ಅದರ ಗಮ್ಮತ್ತು.ಹುಣ್ಣಿವಿ ಇನ್ನೂ ಹದಿನೈದ ದಿನ ಐತಿ ಅಂದ್ರ ಸಾಕು, ಅಟ್ಟದ ಮ್ಯಾಲೆ ವರ್ಷಪೂರ್ತಿ ರೇಸ್ಟ ತೊಗೊಂಡ ಹಲಗಿ ಹೋರಗ ಬರ್ತಾವು, ಅದರ ನಾದ ಊರಿನ ಮೂಲೆ ಮೂಲೆಯಿಂದ ದ್ವನಿಸ್ತದ. ಪ್ರತಿ ರಾತ್ರಿ ಊರಿನ ನಾಲ್ಕೈದು ಜಾಗಾದಾಗ ಹಲಗಿ ಮ್ಯಾಳ ಎರ್ಪಡಿಸ್ತಾರ. ಹಲಗಿ ಮ್ಯಾಳ ಅಂದ್ರ ಹಲಗಿ ಮತ್ತ ಸನಾದಿ (ಶಹನಾಯಿ) ಜುಗಲಬಂದಿ. ಅದರ ಜೋತೆಗೆ ಕಣಿ, ಜುಮರಿ, ದಮ್ ಗಳ ಹಿಮ್ಮೇಳ ಇತ್ತಿಚಿಗೆ ಜಾಂಜ್, ಡ್ರಮ್ ಗಳು ಸಿಗ್ತಾವ.ಹಳೆಯ ಬಾಗಲಕೋಟೆ ನಗರದಲ್ಲಿ ೫ ಪ್ರಮುಖ ವಿಭಾಗಗಳು – ಕಿಲ್ಲಾ, ಜೈನಪೇಟ, ಹಳೆಪೇಟ, ಹೋಸಪೇಟ, ವೆಂಕಟಪೇಟ, ಪ್ರತಿ ದಿನ ಒಂದೊಂದು ಪೇಟೆಯ ಸೋಗು, ಬಣ್ಣದ ಗಾಡಿ (ಮೊದಲು ೫ ದಿನಗಳ ಬಣ್ಣ ಈಗ ಮೂರು ದಿನದದ್ದಾಗಿದೆ), ಪ್ರತಿ ಪೇಟೆಗೂ ಒಂದೊಂದು “ನಿಶಾನಿ” (ದ್ವಜ), ತುರಾಯಿ ಹಲಗಿ (ದೊಡ್ಡ ಹಲಗಿ ಅದಕ್ಕೊಂದು ತುರಾಯಿ, ಒಂದರ್ಥದಲ್ಲಿ ಪೇಟೆಯ ರಾಜಾ ಹಲಗಿ). ಹುಣ್ಣಿಮೆಯ ದಿನ ಊರಿನ ಖಾತೆದಾರರ ಮನೆಯಿಂದ ಬೆಂಕಿ ತಂದು (ಶತಮಾನಗಳಿಂದ ಅವರ ಮನೆಯಿಂದಲೆ ಬೆಂಕಿ ತರುವುದು ಸಂಪ್ರದಾಯ), ಮೊದಲು ಕಿಲ್ಲಾದ ಕಾಮದಹನದಿಂದ ಸಾಂಪ್ರದಾಯಿಕ ಬಾಗಲಕೋಟೆ ಹೋಳಿ ಪ್ರಾರಂಭ. ಅದೇ ಬೆಂಕಿಯಿಂದ ಊರಿನ ಎಲ್ಲ ಪ್ರಮುಖ ಸ್ಥಳಗಳ ಕಾಮದಹನ ಮುಗಿಸುವ ಹೊತ್ತಿಗೆ ಚುಮುಚುಮು ಬೆಳಕು. ಆಗ ಪ್ರಾರಂಭ ಸೋಗಿನ ಬಂಡಿಗಳ ನಗರ ಪ್ರದಕ್ಷಿಣೆ, ಮೊದಲ ದಿನ ಕಿಲ್ಲಾದ ಸರದಿ ಬಸವಣ್ಣ, ರಾಮ್-ಲಕ್ಷ್ಮಣ-ಹನಮಂತ, ಮಹಾಭಾರತದ ಅನೇಕ ಪಾತ್ರಗಳಿಂದ ಹಿಡಿದು ಗಾಂಧಿ, ಅಂಬೆಡ್ಕರ ಇತ್ಯಾದಿಗಳ ಪ್ರತಿಕೃತಿಗಳನ್ನು ಕಾಣಬಹುದು, ಪ್ರತಿ ವರ್ಷ ಕಾಣುವ ವೇಶಗಳೆಂದರೆ ಬಸವಣ್ಣ, ಅಲ್ಲಮಪ್ರಭು, ಕಿತ್ತೂರ ಚೆನ್ನಮ್ಮ, ಶಿವಾಜಿ ಇತ್ಯಾದಿ (ಸೋಗಿನ ಬಂಡಿಗಳನ್ನು ೫ ದಿನಗಳ ಕಾಲ ಒಂದೊಂದು ಪೇಟೆಯವರು ಒಂದೊಂದು ದಿನದಂತೆ ಈಗಲೂ ಕಾಣಬಹುದು). ಸ್ವಲ್ಪ ಬಿಸಿಲೇರಿ ೯ – ೧೦ ಗಂಟೆಗೆ ಬಣ್ಣ ಪ್ರಾರಂಭ.“ಕಾಮಣ್ಣನ ಮಕ್ಳು,ಕಳ್ಳಸೂ.. ಮಕ್ಳು…ಎನೇನು ಕದ್ದರು, ಕಳ್ಳು ಕಟಗಿ ಕದ್ದರು” ಎಂದು ಅರಚುತ್ತಾ ಜೊತಗೆ ಹಲಗೆಯ ಪಕ್ಕವಾದ್ಯ,ಲಬೊ ಲಬೊ ಅಂತಾ ಹೊಯ್ಕೊಳ್ಳವ ಹಿನ್ನಲೆ ಗಾಯನ ಒಂದು ಲೋಕವೇ ಸೄಷ್ಟಿಸಿಬಿಡುತ್ತದೆ. ಮೂರು ದಿನಗಳ ಉತ್ಸವವಿದು, ಗಂಡು-ಹೆಣ್ಣು, ಮಕ್ಕಳು-ಯುವಕರು-ಮುದುಕರು ಎನ್ನದೆ ಮೂರು ದಿನಗಳ ಕಾಲ ಬಣ್ಣಗಳ ಇಂದ್ರನಗರಿಯನ್ನೆ ಧರೆಗಿಳಿಸುತ್ತದೆ. ಯುವಕರನ್ನಂತೂ ಹಿಡಿಯುವವರೆ ಇಲ್ಲ ಮೂರು ದಿನಗಳ ಕಾಲ ಇವರದ್ದೆ ರಾಜ್ಯಭಾರ, ವರ್ಷದ ಎಲ್ಲಾ ದಿನಗಳಲ್ಲಿ “ಮಂಗ್ಯಾತನಕ್ಕೆ” ಮತ್ತು “ಹುಡಗಾಟಕ್ಕೆ” ನಿಷೇದವಿದ್ದರೂ ಹೋಳಿಯ ಸಮಯದಲ್ಲಿ ಪೂರ್ಣ ವಿನಾಯತಿ. ಕಾಲೇಜು ಹುಡುಗರಂತೂ ಬಣ್ಣ ಬಳಿದುಕೊಂಡು ಸುಂದರ ಹುಡುಗಿಯರ ಮನೆಗಳ ಹತ್ತಿರ ಲೇಡಿಜ್ ಹಾಸ್ಟೆಲಗಳ ಮುಂದೆ ಗಲಾಟೆ ಮಾಡಿದ್ದೇ ಮಾಡಿದ್ದು. ಇನ್ನೂ ಹುಡುಗಿಯರು, ಮಕ್ಕಳು ಮನೆಗಳ ಮುಂದೆ ಅಕ್ಕಪಕ್ಕದವರಿಗೆ ಬಣ್ಣ ಹಚ್ಚಿ ತಾವು ಕಡಿಮೆಯಿಲ್ಲದಂತೆ ಗಲಾಟೆ ಎಬ್ಬಿಸುತ್ತಾರೆ. ಇವರನ್ನು ನೋಡಿ ನಗುತ್ತಾ ಕುಳಿತಿರುವ ನಿವೃತ್ತರು ತಮ್ಮ ಯೌವನದ ದಿನಗಳನ್ನು ಮೇಲಕು ಹಾಕುತ್ತಾ ಗಲ್ಲಕ್ಕೆ, ಹಣೆಗೆ ಸಂಪ್ರದಾಯವೊ ಬಣ್ಣ ಹಚ್ಚಿಸಿಕೊಳ್ಳುತ್ತಾರೆ. ಆಯಕಟ್ಟಿನ ಜಾಗಗಳಲ್ಲಿ ಡಕ್- ಸೌಂಡ ಸಿಸ್ಟಮ್ ಹಚ್ಚಿ ಕುಣಿದದ್ದೆ ಕುಣಿದದ್ದು.

ಸಾಯಂಕಾಲ ಪ್ರಾರಂಭ ಬಣ್ಣದ ಬಂಡಿಗಳ ಭಾರಾಟೆ, ಆವತ್ತಿನ ಬಣ್ಣದ ಗಾಡಿ ಓಣಿಯವರು ಊರಿನ ಮಿಕ್ಕ ಓಣಿಗಳಿಗೆ ಬಂಡಿ (ಎತ್ತಿನ ಗಾಡಿ)ಗಳಲ್ಲಿ, ಟ್ರಾಕ್ಟರಗಳಲ್ಲಿ ಡ್ರಮಗಳನ್ನು ಬಣ್ಣದ ನೀರು ತುಂಬಿಸಿಕೊಂಡು ಹೋಗುತ್ತಾರೆ. ದಾರಿಗಳಲ್ಲಿ ಆಯಾ ಓಣಿಯವರೂ ಕೂಡಾ ಮನೆಗಳ ಮುಂದೆ, ಮಾಳಿಗೆಗಳಲ್ಲಿ ಬಣ್ಣದ ನೀರಿನ ಡ್ರಮಗಳನ್ನು ತುಂಬಿಸಿಟ್ಟುಕೊಂಡು ಅವರನ್ನು ಸ್ವಾಗತಿಸುತ್ತಾರೆ. ಅವರು ಇವರಿಗೆ, ಇವರು ಅವರಿಗೆ ಬಣ್ಣದ ಎರಚಾಟವಾಡುತ್ತಾರೆ ಅದು ಯಾವ ಯುದ್ಧಕ್ಕೂ ಕಡಿಮೆಯಿರುವುದಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ಬಣ್ಣ ಎರಚಾಡುತ್ತ, ಹೊಳಿಯ ಶುಭಾಷಯ ತಿಳಿಸುತ್ತಾ ಬಣ್ಣದ ಗಾಡಿಯವರು ಮುಂದೆ ಸಾಗುತ್ತಾರೆ. ಇದು ಮೂರು ದಿನಗಳೂ ನೆಡೆಯುತ್ತದೆ. ಕೋನೆಯ ದಿನವಂತೂ ಇದರ ಭರಾಟೆ ಮುಗಿಲು ಮುಟ್ಟುತ್ತದೆ. ಕೆಲವರಂತೂ ಅಲ್ಲಿಯೆ ಶಾಂಪೂ ಒಯ್ದು ತಲೆತೊಳೆದುಕೊಳ್ಳುತ್ತಾರೆ. ಬಣ್ಣದ ನೀರಿನ ಎರಚಾಟದಲ್ಲಿ ಕೆಲವೊಮ್ಮೆ ಕಣ್ಣುಗಳಿಗೆ ಹಾನಿಯಾಗುವ ಸಂಭವವು ಇರುತ್ತದೆ ( ಅಷ್ಟೊಂದು ಜೋರಾಗೆ ಎರಚಡುತ್ತಾರೆ). ಕೋನೆಯದಿನ ಕೆಲವೊಮ್ಮೆ ಮನೆಗೆ ಬರಿಮೈಯಲ್ಲಿ ಹೋಗುವ ಸಂಭವವೂ ಬರುತ್ತದೆ, ಗೆಳೆಯರು ಒಬ್ಬರದ್ದೊಬ್ಬರ ಬಟ್ಟೆ ಹರಿಯುತ್ತಾರೆ (ಪೂರ್ತಿಯಾಗಲ್ಲ ಮಾನ ಮುಚ್ಚುವಷ್ಟನ್ನು ಉಳಿಸುತ್ತಾರೆ). ಅವತ್ತು ಎಲ್ಲರೂ ಗೆಳೆಯರೆ. ಒಮ್ಮೆ ಬಣ್ಣದ ಗಾಡಿಗಳು ಮುಕ್ತಾಯದ ಗಡಿ ಮುಟ್ಟಿದಾಗ ಮುಗಿಲು ಮುಟ್ಟುವಂತೆ ಲಬೋ.. ಲಬೋ.. ಕೂಗು ಮುಗಿಲು ಮುಟ್ಟುತ್ತದೆ.

ಇತ್ತಿಚಿಗೆ ಎಲ್ಲ ಊರುಗಳಂತೆ ಬಾಗಲಕೋಟೆಯಲ್ಲು ಹಬ್ಬಗಳು ಮತ್ತು ಅವುಗಳ ಆಚರಣೆ ಕಡಿಮೆಯಾಗುತ್ತಿದೆ. ಊರಿನ ಹೆಚ್ಚಿನ ಯುವಕರು ಬದುಕಿನ ದಾರಿಗಾಗಿ ಬೆಂಗಳುರು ಸೇರಿರುವುದೆ ಕಾರಣವಾಗಿದೆ. ಆದರೆ ನಾವು ಕೆಲವು ಗೆಳೆಯರು ಈ ಸಾರಿ ಹೋಳಿಗೆ ಊರಲ್ಲಿ ಸೆರುವುದಾಗಿ ಅಂದುಕೊಂಡಿದ್ದೇವೆ. ಊರನ್ನೇನೊ ಕೃಷ್ಣೆಗೆ ಅರ್ಪಿಸಿದ್ದಾಗಿದೆ*, ಪದ್ಧತಿಗಳನ್ನಾದರು ಊಳಿಸಿಕೊಳ್ಳೋಣ ಎಂಬ ಅನಿಸಿಕೆ ನಮ್ಮದು, ನೀವೇನಂತಿರಿ?

* ಬಾಗಲಕೋಟೆ ಅಲಮಟ್ಟಿ ಹಿನ್ನೀರಿನಲ್ಲಿ ಭಾಗಶಃ ಮುಳಗಿ, ಅಲ್ಲಿಯೇ ಐದು ಕಿ.ಮಿ. ದೂರದಲ್ಲಿ “ನವನಗರ”ವಾಗಿದೆ.

ಉತ್ತರ ಕರ್ನಾಟಕದ ಹೋಳಿ ಆಚರಣೆಯ ಬಗ್ಗೆ ಇನ್ನೊಂದು ಲೇಖನ ಸಂತೋಷ ಪಾಟೀಲರ “ಅಮೃತ ಸಿಂಚನ” ದಲ್ಲಿ.

ಹಾಗೆ ಸುಮ್ಮನೆ…


 ಆನಸೈಟು, ಅಪ್ರೈಜಲ್ಲು, ವೇರಿಯೆಬಲ್ಲು-
ಗಳ ನಡುವೆ ಸಂತೋಷ ಅರಸುತ್ತಿದ್ದೆವೆ.
ಎಷ್ಟೋ ದಿನಗಳಾಯಿತು ಮನಸಾರೆ ನಗದೆ,
ನಗದುಗಳ ನಡುವೆ ನಗಲು ಕಾರಣ ಹುಡುಕುತ್ತಿದ್ದೇವೆ.

ಕಂಡ ಕನಸುಗಳಿಗೆಲ್ಲಾ
ಬಸಿರಾಗುವ ಬಯಕೆ,
ವಿಧಿ ಸುಮ್ಮನೆ ಬಿಟ್ಟಿತೇ
ಅದಕ್ಕೆ ನಮ್ಮನ್ನು ಕೆಡುವುವ ಹವಣಿಕೆ.

ಹೊಟ್ಟೆನೋವು ಮತ್ತು ಲೇಮನ್ ಸೋಡಾ: ಹೀಗೂ ಒಂದು ಪ್ರೇಮಕಥೆ

ಇದು ಕಥಾ ಕಾಲಕ್ಷೇಪ

couple.jpg

“ನೀನು ಬರ್ತೀಯೋ ಇಲ್ವೋ? ಏನೋ ಅನ್ನೋದನ್ನ ನನಗೆ ಹತ್ತೇ ಹತ್ತು ನಿಮಿಷದಲ್ಲಿ ಹೇಳು, ನಾನು ಹೊರಗಡೆ ನಿನಗೋಸ್ಕರ ಕಾಯ್ತಾ ಇರ್ತೀನಿ”, ಎಂದು ಭೂಸುಗೂಡುತ್ತಾ ಹರ್ಷ ಲೈಬ್ರರಿಯಿಂದ ಹೊರಗಡೆ ಬಂದು ಗಿಡದ ನೆರಳಿಗೆ ನಿಂತ.

‘ಏನೋ ಇವಳೊಬ್ಬಳಿಗೆ ಮಾತ್ರ ಇಂಟರ್ನಲ್ ಇರೋ ಹಾಗೆ ಮಾಡ್ತಳೆ, ಬೇರೆಯವರಿಗೇನು ಇಲ್ವಾ’. ಯಾವತ್ತೂ ತನ್ನ ಬೈಕ ಮುಟ್ಟಿಸೋಕೆ ಬಿಡದೆ ಇರೋ ಪಕ್ಯಾ (ಪ್ರಕಾಶ) ಇವತ್ತು ನನ್ಮಗ ಯಾವ ಮೂಡಲ್ಲಿದ್ನೊ, “ಮಾಮಾ, ನನ್ನ ಹುಡಿಗಿನ ಎಲ್ಲಾದ್ರೂ ಸುತ್ತಾಡಿಸ್ಕೊಂಡು ಬರ್ತೀನಿ ಬೈಕ ಕೊಡೋ” ಎಂದ ಕೂಡಲೇ ಕೊಟ್ಟೆ ಬಿಟ್ಟ, ಪೆಟ್ರೋಲ್ ಟ್ಯಾಂಕ ಬೇರೆ ಫೂಲ ತುಂಬಿಸಿದ್ದಾನೆ. ಇವಳು ನೋಡಿದ್ರೆ ‘ಇವತ್ತು ಬ್ಯಾಡಾ, ಮತ್ಯಾವತ್ತರ ಹೋಗೋಣೂ’ ಅನ್ನುತ್ತಿದ್ದಾಳೆ.

ಮೊನ್ನೆ ಇವಳು ಕರೆದು ಕೂಡ್ಲೇ ಆ ಹುಸೆನ್ಯಾ “ಚಿಕನ್” ಮಾಡಿಸಿಕೊಂಡು ಬರವೊನಿದ್ರು, ನನ್ನ ಫೆವರಿಟ್ ಚಿಕನ್ ತಿನ್ನುದು ಬಿಟ್ಟ ಇವಳ ಜೊತೆ ಆ ಕೃಷ್ಣನ ಗುಡಿಗೆ ಹೋದ್ಯಾ, ಅಲ್ಲಿ ಆ ಸುಂಬಳ ಬುರುಕಿ ಸೂಜಿ ಸಿಕ್ಕ ಕೂಡ್ಲೇ, ಆಕಿ ಜೋಡಿ ಬಂದಿದ್ದ ಅವಳ ಅಕ್ಕನ 3 ವರ್ಷದ ಮಗುವಿನ ಜೊತೆ ನನ್ನನ್ನೇ ಮರೆತು ಒಂದು ಗಂಟೆ ಆಟ ಆಡಿದ್ಲು, ಖರೇಣಾ ಒಂದ ಗಂಟೆ, ನಾನು ವಾಚನ್ನೇ ನೊಡ್ಕೋತ ಕೂತಿದ್ದ್ಯ. ಕೊನಿಗಿ ಆ ಸುಂಬಳ ಸೂಜಿ ಆಕಿ ಮನಿಗಿ ಬಾ ಅಂತ ಕರೆದ್ರ ಹೊರಟೆ ಬಿಟ್ಲು, “ನೀನು ರೂಮಿಗೆ ಹೋಗೋ, ನಾನು ಈಕೀ ಮನೆಯಿಂದ ಸೀದಾ ಹಾಸ್ಟೆಲಗೆ ಹೋಗ್ತೀನಿ” ಅಂತ ಹೇಳಿ ಆ ಮಗುವನ್ನೆತ್ತಿಕೊಂಡು ಅದಕ್ಕೆ ಮುತ್ತು ಕೊಡುತ್ತಾ ಹೋದಳು, ನನಗದೆಷ್ಟು ಉರಿತು…. ಚಿಕನ್ ಆದ್ರೂ ಸಿಗುತ್ತೆ ಅಂತ ರೋಮಿಗೆ ಬಂದ್ರೆ ಆ ನನ್ಮಕ್ಳು ಪಕ್ಯಾ, ಶಂಕರ್ಯಾ, ರಾಜ್ಯಾ ಕೂಡಿಕೊಂಡು ಡಬ್ಬಿ ನೆಕ್ಕೋತ ಕುಂತಿದ್ರು. ಅದಕ್ಕೆ ಮೇಲಾಗಿ ಆ ಪಕ್ಯಾ, “ಏನೋ ಮಾಮಾ, ನಿನ್ನ ಸುಮ್ಮಿನ ಎಲ್ಲಿಗ್ಯೋ ಕರ್ಕೊಂದ ಹೊಕ್ಕಿನಿ ಅಂತ ಹೇಳಿ ಇಷ್ಟ ಜಲ್ದಿ ಹೊಳ್ಳಿ ಬಂದ್ಯಲ್ಲೇ” ಅಂತ ನಗ್ತಾ ಕೇಳಿದಾಗ ಮೈಯೆಲ್ಲ ಉರ್ಕೊಂಡು ಬಂದು… ಏನು ಮಾಡಾಕಾಗ್ಡೆ ತಲೆನೋವು ಅಂತ ಮುಸುಕೇಳೆದುಕೊಂಡು ಮಲಗಿದೆ.

ಅಂತಾದ್ರಲ್ಲಿ ಇವತ್ತು ಬೈಕ್ ತಗೊಂಬಂದು, ಹೊರಗಡೆ ಹೋಗೋಣ ಬಾ ಅಂದ್ರೆ ಇವಳೊಬ್ಬಳು. ಹಾಂ.. ಬರ್ತಾಯಿದ್ದಾಳೆ.. ಅವಳ ಹೆಜ್ಜೆ ಸಪ್ಪಳ ಎಲ್ಲಿದ್ರು ಗುರ್ತಿಸಿಬಿಡ್ತೀನಿ.. ಅವನು ಮುಖದ ಮೇಲಿನ ಸಿಟ್ಟು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೆ ಅವಳು ಅವನ ಹತ್ತಿರಕ್ಕೆ ಬಂದು ನಿಂತಳು, “ದೋರೆ ಯಾಕೋ ಸಿಟ್ ಮಾಡ್ಕೋತಿಯ, ಇವತ್ತೊಂದಿನ ಬೇಡ್ವೋ, ಪ್ಲೀಜ್..” ಎಂದಳು. ಅದಕ್ಕವನು “ಎಲ್ಲ ನೀನು ಅಂದಕೊಂಡಂಗೆ ನಡಿಬೇಕಾ… ನೀನು ಕರೆದಾಗಲೆಲ್ಲ ನಾನು ಬಂದಿಲ್ಲಾ? ನೀನು ಹೇಳಿದ ಹಾಗೆಲ್ಲಾ ಕೇಳಿಲ್ಲಾ? ಇವತ್ತು ನನ್ನದೊಂದು ಸಣ್ಣ ಆಸೇನು ನೆಡೆಸೋದಿಲ್ವ?” ಅಂದನು.

“ನಾನ್ಯಾವತ್ತು ನಿನಗೆ ಬೇಡ ಅಂದೀದಿನೋ ನನ್ರಾಜಾ, ಇವತ್ತೊಂದಿನ ಬೇಡ್ವೋ, ಪ್ಲೀಜ್ ತುಂಬಾ ಹೊಟ್ಟೆ ನೋವು” ಎಂದವಳು ಪಿಸುಗುಟ್ಟಿದಳು.

“ಊಟಾ ಮಾಡಿ, ಹಂಗ ಒದ್ಕೊತ ವಂದ ಕಡೆ ಕುಂತರ ಅಜೀರ್ಣ ಆಗಿ ಇನ್ನೇನಾಗ್ತದ, ನಡಿ ಹೊರಗ ಒಂದ ರೌಂಡ ಬೈಕ ಮ್ಯಾಲೆ ಹೋಗಿ ಬರುಣ, ಹಂಗ ಒಂದೊಂದು ಸೋಡಾ ಕುಡ್ದ ಬರುಣು, ಹೊಟ್ಟೆ ನೋವು ಕಡಿಮಿ ಅಕ್ಕೈತಿ ಬಾ” ಅಂದ. ಅದಕ್ಕವಳು ಹಣೆ ಚಚ್ಚಿಕೊಳ್ಳುತ್ತಾ ” ಆ ತರಾ ಹೊಟ್ಟೆನೋವು ಅಲ್ವೋ, ಇವತ್ತೇ ಲ್ಯಾಸ್ಟ ಡೇ, ನಾಳೆ ನೀನು ಹೇಳಿದ ಕಡೆ ಹೋಗೋಣ” ಎಂದಳು.

“ನಿಂದೇನೆ ಸ್ಪೆಷಲ್ ಅದು, ಹೊಟ್ಟೆನೋವಿಗೂ ಡೇಟ್ಸ್ ಕೊಟ್ಟಿಯೆನ? ಇವತ್ತ ಲ್ಯಾಸ್ಟ ಡೇ ಅಂತ. ನೀನಗ ನಂಜೋತಿ ಬರಾಕ ಮನಸಿಲ್ಲ ಅದಕ್ಕ ನೀ ಹಿಂಗ ಹೇಳಾಕತ್ತಿ, ನಾನು ಮುಂದ ಹೋಗಿ ಆ ಕ್ಯಾಂಟಿನ ಹತ್ರ ನಿಂತಿರ್ತೀನಿ ನೀನಗ ನನ್ನ ಮ್ಯಾಲೆ ಓಂಚೂರರ ಪ್ರೀತಿ ಇದ್ರ ಬರ್ತೀ, ಇಲ್ಲ ಅಂದ್ರ ನಿನಗ ನನ್ನ ಮ್ಯಾಲೆ ಪ್ರೀತಿನ ಇಲ್ಲ ಅಂತ ತಿಳ್ಕೊಂಡೂ ಇನ್ಮ್ಯಾಲೆ ನಿನ್ನ ತಂಟೆಗ ಬರುದಿಲ್ಲ” ಎಂದು ಹೇಳಿ ಬೈಕ್ ಹತ್ತಿಬಿಟ್ಟು ಸೀದಾ ಹೊರಟೆ ಬಿಟ್ಟ.

ಲೈಬ್ರರಿಯ ಒಳಗಡೆ ಹೋದ ಅವಳು ತನ್ನೆಲ್ಲ ಪುಸ್ತಕಗಳನ್ನು ಎತ್ತಿಟ್ಟುಕೊಂಡು ಸೀದಾ ಕ್ಯಾಂಟೀನಿನ ಬಳಿ ಬಂದಳು. ಅವನಿನ್ನೂ ಮುಖದ ಮೇಲೆ ಸಿಟ್ಟಿಟ್ಟುಕೊಂಡೆ ಕುಳಿತಿದ್ದ. ಬಂದವಳೇ ಸೀದಾ ಅವನ ಹಿಂದೆ ಕುಳಿತುಕೊಂಡು ಅವನ ಬೆನ್ನಿಗೆ ಒಂದು ಗುದ್ದು ಕೊಟ್ಟು, “ನಡಿ ಎಲ್ಲಿಗೆ ಕರಕೊಂಡು ಹೋಗ್ತೀಯೋ ಹೋಗು” ಎಂದಳು.

ಬೈಕನ್ನು ಸ್ಟಾರ್ಟ್ ಮಾಡಿದ ಅವನು “ಅಮ್ಮೌವ್ರೆನೋ ಹೊಟ್ಟೆನೋವು ಅಂತಿದ್ರಿ, ಲೇಮನ್ ಸೋಡಾ ಕುಡಿಯುನೇನು?” ಎಂದ.

ಅವಳು ಅವನ ತಲೆಗೊಂದು ಏಟು ಹಾಕಿ, “ಅದು ಆ ತರಾ ಹೊಟ್ಟೆನೋವಲ್ವೋ ಕೋತಿ, ಪೀರಿಯಡ್ಸು. ಇವತ್ತೇ ಕೊನೇ ದಿನ” ಎಂದಳು. ಅವನು ಅವಳನ್ನೊಮ್ಮೆ ಬೈಕನ ಕನ್ನಡಿಯಲ್ಲಿ ಅವಳನ್ನು ನೋಡಿ, ನಾಚಿ ಮುಗುಳ್ನಗೆ ಬೀರಿದ. ಅವಳು ಅವನನ್ನು ಗಟ್ಟಿಯಾಗಿ ತಬ್ಬಿ, “ದೋರೆ ಇಗ್ಲೇ ಹೀಗಾದ್ರೆ, ಮದುವೆಯಾದ ಮೇಲೆ ಈ ಮೂರು ದಿನ ಹೇಗೋ?” ಎಂದಳು. ಅವನು ಬೈಕಿನ ಕಿವಿ ಜೋರಾಗಿ ತಿರುವಿ ವೇಗವನ್ನು ಹೆಚ್ಚಿಸಿದ. 😉

ಹೀಗೂ ಒಂದು (ಆತ್ಮ)ಕಥೆ..

ಇದು ಕಥಾ ಕಾಲಕ್ಷೇಪ

“ಮಾಮಾ ಸುಮ್ಮಿ ಹಿಂಗ್ಯಾಕ್ ಮಾಡಿದ್ಲು, ಹೇಳೊ ಮಾಮಾ” ಎಂದನ್ನುತ್ತಾ ಗ್ಲಾಸಿನಲ್ಲಿ ಇಗಷ್ಟೆ ಹಾಕಿದ್ದ ಹಸಿ ಕಹಿ ದ್ರವವನ್ನು ಹಾಗೆಯೇ ಪೂರ್ತಿಯಾಗಿ ಎತ್ತಿದ ವಸಂತ ಮತ್ತೆ ಬಿಕ್ಕಲಾರಂಭಿಸಿದ. ಆಗಷ್ಟೆ ನಿಲ್ಲಿಸಿದ್ದ ಅಳು ಮತ್ತೆ ತಾರಕಕ್ಕೆರಿಸಿದ. ಇವನ ಇವತ್ತಿನ ಈ ಪರಿಸ್ಥಿತಿಗೆ ನಾನೇ ಅಲ್ಲವೇ ಕಾರಣ ಎಂದೆನಿಸಿತು.

ನಾನು ಮತ್ತು ವಸಂತ ಚೆಡ್ಡಿ ಗೆಳೆಯರೇನು ಅಲ್ಲ. ನಾವಿಬ್ಬರು ಬೆಟ್ಟಿಯಾಗಿದ್ದು ಡಿಗ್ರಿ ಮೊದಲ ವರ್ಷದಲ್ಲಿ. ಕಂತು-ಕಂತುಗಳಲ್ಲಿ ಪಾಸಾಗಿ ಬಿ.ಎಸ್ಸಿ.ಗೆ ಬಂದಿದ್ದ ನನಗೆ ಅರ್ಜೆಂಟಾಗಿ ಯಾರಾದರೂ ಹೋಸ ಗೆಳೆಯರು, ಅದರಲ್ಲೂ ನನಗೆ ಪ್ರ್ಯಾಕ್ಟಿಕಲ್ಲು-ಅಸ್ಸೈನುಮೆಂಟುಗಳಲ್ಲಿ ಹೇಲ್ಪ ಮಾಡುವವರು, ಬೇಕಿತ್ತು. ರಾಯಚೂರಿನಿಂದ ಬಂದಿದ್ದ ವಸಂತನಿಗೂ ಯಾರು ಗೆಳೆಯರಿದ್ದಿಲ್ಲ ಹೀಗಾಗಿ ನಾನು ಕೈ ಚಾಚಿದ ಗೆಳೆತನವನ್ನು ಕೈ ಹಿಡಿದ.

ನಮ್ಮಿಬ್ಬರ ಗುಣಗಳು ಒಂದಕ್ಕೊಂದು ಹೊಂದುತ್ತಲೇ ಇರಲಿಲ್ಲ, ಅವನು ಕಲಿಯಲು ದಿನಾ ಕ್ಲಾಸಿಗೆ ಹೋದರೆ ನಾನು ದಿನಾಲೂ ಅಲೆಯಲು ಬೇಜಾರಾಗಿ ಯಾವಾಗಲೊ ಒಂದು ಸಾರಿ ಕ್ಲಾಸಿಗೆ ಹೋಗುತ್ತಿದ್ದೆ. ಅವನು ಹುಡುಗಿಯರನ್ನು ಕಂಡರೆ ಮೂರು ಮಾರು ದೂರ, ನನ್ನನ್ನು ಕಂಡರೆ ಹುಡುಗಿಯರೆ ಮೂರು ಮಾರು ದೂರ. ಆದರೂ ಆ ವಿಶ್ವಾಮಿತ್ರನ ಖಾಸಮ್-ಖಾಸ ತಮ್ಮನಂತಿದ್ದ ವಸಂತನ ಅಸ್ಸೈನಮೆಂಟು, ಪ್ರ್ಯಾಕ್ಟಿಕಲ್ಲ ನೋಟ್ಸಗಳಿಗಾಗಿ ಹುಡುಗಿಯರು ನನಗೆ ಹತ್ತಿರವಾಗಬೇಕಾಯ್ತು. ಅವನಿಗೆ ತಿಳಿಯದಂತೆ ಅವನ ನೋಟ್ಸುಗಳನ್ನು ಹುಡುಗಿಯರಿಗೆ ಕೊಡುತ್ತ ಅವರೊಡನೆ ಸಿನೇಮಾ, ಹೋಟೆಲು, ಆಯಸ್ಕ್ರೀಮ್ ಪಾರ್ಲರ್ ಎಂದೆಲ್ಲ ಹೋಗತೊಡಗಿದೆ.

ಹಾಗೂ-ಹೀಗೂ ಡಿಗ್ರಿ ಮುಗಿಸಿ, ಯುನೀವರ್ಸಿಟಿ ಮೆಟ್ಟಿಲು ಹತ್ತಿದೆ. ಪ್ರತಿಭೆಯಿಂದಾಗಿ ವಸಂತನಿಗೂ, ನಮ್ಮಜ್ಜ ಯಾವಾಗಲೋ ಪಟ್ಟ ಕಷ್ಟಕ್ಕಾಗಿ ಇವತ್ತು ನನಗೆ ಕೊಟ್ಟ ಕೋಟಾದಲ್ಲಿ ಇಬ್ಬರಿಗೂ ಒಂದೇ ಸಬ್ಜೆಕ್ಟಿನಲ್ಲಿ ಪಿ.ಜಿ. ದೊರೆಯಿತು. ಹಾಸ್ಟೆಲಿನಲ್ಲಿ ರೂಮ್ ಕೂಡಾ ಒಂದೇ ಸಿಕ್ಕಿತು. ಹಾಗೆಯೇ ಹೋಸ ಊರು, ಹೋಸ ಕಾಲೇಜು, ಹೋಸ ಗೆಳೆಯರು, ಹೋಸ ಹುಡುಗಿಯರು ಎಂದೆಲ್ಲಾ ನಾನು ನನ್ನದೆ ಹಾದಿಯಲ್ಲಿ ಸಾಗುತ್ತಿದ್ದಾಗ. ಒಂದು ದಿನ ಒಮ್ಮಿಂದೊಮ್ಮಲೆ ವಸಂತ, “ನಾನು ಸುಮ್ಮಿನ್ನ ಲವ್ ಮಾಡಾಕತ್ತಿನಿ” ಎಂದು ಘೋಷಿಸಿದ.

ನಮ್ಮೂರಿನ ಕಾಲೇಜಿನಲ್ಲಿ ಹಾಳೂರಿಗೆ ಉಳಿದವನೇ ಗೌಡ ಎಂಬತ್ತಿದ್ದ ವಸಂತ, ಇಲ್ಲಿ ಅವನಿಗಿಂತ ಬುದ್ದಿವಂತರನ್ನು ಎದುರಿಸಬೇಕಿತ್ತು. ಅದಕ್ಕೆ ತಕ್ಕಂತೆ ಪ್ರಯತ್ನ ಪಡುತ್ತ ಮೊದಲ ಸೆಮೇಸ್ಟರನಲ್ಲಿ ಎಲ್ಲರನ್ನೂ ಹಿಂದೆ ಹಾಕಿದ, ಆದರೆ ಒಂದು ಹುಡುಗಿಯನ್ನು ಬಿಟ್ಟು ಅವಳೆ ಈ “ಸುಮತಿ”. ಅವತ್ತಿನಿಂದ ಅವಳನ್ನು ಇನ್ನಿಲ್ಲದಂತೆ ದ್ವೇಷಿಸತೋಡಗಿದ. ಇವರಿಬ್ಬರ ಪೈಪೋಟಿ ಎಲ್ಲಿಯವರೆಗೂ ಮುಂದುವರೆಯಿತಂದರೆ ಕೆಲವೊಮ್ಮೆ ಕ್ಲಾಸಿನ ಪಿರೀಯಡನಲ್ಲಿ ಪ್ರಾರಂಭವಾಗುವ ಚರ್ಚೆಗಳು ಕೇವಲ ಇವರಿಬ್ಬರ ಅಹಂಕಾರಕ್ಕೆ, ಕೋಪಕ್ಕೆ, ಜಾಣ್ಮೆ ಪ್ರದರ್ಶನಕ್ಕೆ ವೇದಿಕೆಗಳಾಗತೊಡಗಿದವು, ಲೈಬ್ರರಿಯಲ್ಲಿ ಪುಸ್ತಕಕ್ಕಾಗಿ ಪೈಪೋಟಿ, ಸಾಯಂಕಾಲ ಕ್ಲಾಸುಗಳೆಲ್ಲ ಮುಗಿದ್ ಮೇಲೆ ತುಂಬಾ ಹೊತ್ತಿನವರೆಗೂ ಪ್ರ್ಯಾಕ್ಟಿಕಲ್ ಮಾಡುವುದಕ್ಕೆ ಪೈಪೋಟಿ. ಇವರ ಸಂಘರ್ಷಗಳು ಹೀಗೆ ನೆಡೆಯುತ್ತಿರಬೇಕಾದರೆ ಒಂದು ದಿನ ರಾತ್ರಿ ಎಂಟುವರೆಯಾದರೂ ಲ್ಯಾಬಿನಲ್ಲೆ ಇದ್ದಾರೆ, ಆಗ ಕರೆಂಟ್ ಹೋಗಿದೆ. ಕತ್ತಲಲ್ಲಿ ಹೆದರಿದವಳನ್ನು ವಸಂತ ಹಾಸ್ಟೇಲಿನವರೆಗೂ ಬಿಟ್ಟು ಬಂದ ವಸಂತ ಮತ್ತೆ ತನಗೆ ತಾ ಸಿಗದಂತೆ ಕಳೆದು ಹೋದ.

ಅವರಿಬ್ಬರ ಒಡನಾಟ ಹೆಚ್ಚಿತು, ಹಾಗೆಯೇ ಅವರಿಬ್ಬರೆ ಲೈಬ್ರರಿ, ಡೆಪಾರ್ಟಮೆಂಟ, ಕ್ಯಾಂಟಿನು ಎಂದೆಲ್ಲಾ ಹೋಗತೊಡಗಿದರು, ಎಲ್ಲರೂ ಅದನ್ನು ಕ್ಯಾಂಪಸ್ಸಲ್ಲಿ ಕಾಮನ್ ಅಂದುಕೊಂಡು ಹೆಚ್ಚು ಗಮನ ನೀಡಲಿಲ್ಲ. ಆದರೆ ಅದರಿಂದ ನಿಜವಾಗಿಯೂ ಕಂಗಾಲಾದವನು ನಾನು!!!.ನನಗೆ ಅಸ್ಸೈನಮೆಂಟ ಬರೆಯಲು ಹೆಲ್ಪ ಮಾಡುವುದಿರಲಿ, ನೋಟ್ಸ್ ಕೊಡುವುದಿರಲಿ ಅವನು ರೂಮಿನಲ್ಲಿ ನನಗೆ ಸಿಗುವುದೆ ಅಪರೂಪವಾಯಿತು. ಅಷ್ಟರಲ್ಲೆ ಎರಡನೆಯ ಸೆಮೇಸ್ಟರನ ಪರೀಕ್ಷೆಗಳು ಎದುರಾದವು. ಯಥಾಪ್ರಕಾರ ಅವರಿಬ್ಬರೂ ಮೊದಲೆರಡು ಸ್ಥಾನ ಗಳಿಸಿದ್ದರೆ, ನಾನು ಡಿಸ್ಟಿಂಕ್ಷನ್ನೊಂದಿಗೆ ವಾಷೌಟ್ ಆದೆ. ಮನಸ್ಸು ನಾನು ಫೇಲಾಗೊದಿಕ್ಕೆ ‘ಅವಳೇ’ ಕಾರಣ ಎಂದಿತು.

ಕ್ಯಾರಿ ಓವರ್ ಸಿಸ್ಟಮ್ ಇದ್ದುದರಿಂದ ೩ನೇ ಸೆಮೇಸ್ಟರಿಗೆ ಅಡ್ಮಿಷನ್ನೇನೊ ಸಿಕ್ಕಿತು, ಫೇಲಾಗಿದ್ದರಿಂದ ಹಾಸ್ಟೇಲಿನಲ್ಲಿ ರೂಮ್ ದೊರಕಲಿಲ್ಲ; ಹೋರಗೆ ರೂಮ್ ಮಾಡಬೇಕಾಯ್ತು. ಹೋರಗೆ ರೂಮ್ ಮಾಡಿದ ನಂತರವೂ ದಿನಾ ಗೆಳೆಯರೊಂದಿಗೆ ಪಾರ್ಟಿ-ಕುಡಿತ ಎಂದೆಲ್ಲಾ ರಾತ್ರಿ ಹಾಸ್ಟೇಲಿನ ಗೆಳೆಯರ ರೊಮ್ ಗಳಲ್ಲಿ ಇರತೊಡಗಿದ್ದೆ. ಇದೆಲ್ಲ ಗೋತ್ತಾಗಿ ವಸಂತ ಒಂದೆರಡು ಬಾರಿ ಸಿಕ್ಕು ಬುದ್ದಿ ಹೇಳುತ್ತಿದ್ದ, ನಾನೂ ಪ್ರತಿ ಹುಂ ಗುಟ್ಟುತ್ತಿದ್ದೆ, ಮತ್ತೆ ಅದೆ ದಿನ ರಾತ್ರಿ ಕುಡಿದಾಗೆ ಅವನಿಗೆ ಸಿಕ್ಕು ಕಣ್ಣು ತಪ್ಪಿಸುತ್ತಿದ್ದೆ. ಹೀಗೆ ಒಂದು ದಿನ ಅವನಿಗೆನನ್ನಿಸಿತೋ ತನ್ನೆಲ್ಲ ಸಾಮಾನುಗಳನ್ನು ಎತ್ತಿಕೊಂಡು ನನ್ನ ರೂಮಿಗೆ ಬಂದು ವಾಸಿಸತೊಡಗಿದ. ನಾನೂ ದುಡ್ಡಿಲ್ಲವೆಂದೊ, ಅವನ ಹೇದರಿಕೆಗೋ ದಿನಾ ಸಂಜೆ ಡಿಪಾರ್ಟಮೆಂಟಿನಿಂದ ರೂಮಿಗೆ ಬರತೊಡಗಿದೆ. ಅವನು ಮತ್ತೆ ಹಿಂದಿನ ಹಾಗೆ ನನಗೆ ಅಸೈನುಮೆಂತುಗಳಲ್ಲಿ ಹೇಲ್ಪ ಮಾಡತೊಡಗಿದ. ಆದರೆ ಡಿಪಾರ್ಟಮೆಂಟಿನಲ್ಲಿ, ಲೈಬ್ರರಿಯಲ್ಲಿ ನನಗೆ ಸಿಗುತ್ತಿರಲಿಲ್ಲ ಯಾವಾಗಲೂ ಸುಮತಿಯೊಂದಿಗೆ ಇರುತ್ತಿದ್ದ. ಅವಳನ್ನು ನೋಡಲು, ಮಾತನಾಡಿಸಲು ನನಗಾಗುತ್ತಿರಲಿಲ್ಲ.

ಅವಳು ಆಗಾಗ ರೂಮಿಗೆ ಬರಹತ್ತಿದಳು, ಅವಳು ಬರುತ್ತಿದ್ದಂತೆಯೇ ನಾನು ಎದ್ದು ಹೋರನೆಡೆಯುತ್ತಿದ್ದೆ, ಕೆಲವೊಮ್ಮೆ ಇಲ್ಲೆ ಕೆಲಸವಿದೆ ಎಂದು ಕಾರಣ ಕೊಟ್ಟು ಹೋರನೆಡೆಯುತ್ತಿದ್ದೆ. ಅವಳು ಮರಳಿ ಹೋದ ಸುಳಿವು ಸಿಕ್ಕೊಡನೆ ರೂಮಿಗೆ ವಾಪಾಸು ಬರುತ್ತಿದ್ದೆ, ನಾನು ಹೀಗೆ ಬಂದಾಗಲೆಲ್ಲ ವಸಂತ “ಅವಳೆಷ್ಟು ನೊಂದಳು ಗೊತ್ತಾ ನೀನು ಹಾಗೆ ಎದ್ದು ಹೋದಾಗ” ಎನ್ನುತ್ತಿದ್ದ ಆವಾಗೆಲ್ಲ ನಾನು ಪ್ಯಾಲಿ ನಗೆ ನಗುತ್ತಿದ್ದೆ.

ಆಮೇಲಾಮೇಲೆ ಅವಳು ಬರುವುದು, ನಾನು ಎದ್ದು ಹೋಗುವುದು ಪದ್ಧತಿಯಾಯ್ತು. ಅವರಿಬ್ಬರು ಕೆಲವೊಮ್ಮೆ ಚರ್ಚೆಗಿಳಿದರೆ ಸಮಯದ ಪರಿವೆ ಅವರಿಗಿರುತ್ತಿರಲಿಲ್ಲ, ಆವಾಗೆಲ್ಲ ನಾನು ಪಕ್ಕದ ರೂಮುಗಳಿಗೆ ಹೋಗಿ ಕುಳಿತುಕೊಳ್ಳುತ್ತಿದ್ದೆ, ಅವರು ಸಮಯ ನೋಡಿ ಯಾಕೆಂದು ಕೇಳಿದಾಗಲೆಲ್ಲ, “ಸುಮತಿ ಬಂದಾಳ” ಎಂದು ಹೇಳಿ ಕಣ್ಣು ಹೋಡೆದು ಹುಸಿ ನಗೆ ನಗುತ್ತಿದ್ದೆ. ಅದು ಅವರಿಂದ ಇನ್ನೊಬ್ಬರಿಗೆ, ಇನ್ನೊಬ್ಬರಿಂದ ಮತ್ತೊಬ್ಬರಿಗೆ ತಿಳಿದು ಹೋಗಿ, ಡಿಪಾರ್ಟಮೆಂಟಿನಲ್ಲಿ ಎಲ್ಲ ಹುಡುಗರು ‘ಹಿಂಗಿಂಗ ಅಂತಲ್ಲಾ?’ ಎಂದು ಕೇಳಿದಾಗೆಲ್ಲ ಮತ್ತೊಂದು ಹುಸಿ ನಗೆ ನಗುತ್ತಿದ್ದೆ. ಹುಡುಗರಿಂದ ಹುಡುಗಿಯರಿಗೂ, ಅವರಿಂದ ಇಡಿ ಹುಡುಗಿಯರ ಹಾಸ್ಟೇಲಿಗೂ ಸುದ್ದಿ ತಿಳಿಯಲು ಹೆಚ್ಚು ಹೋತ್ತು ಹಿಡಿಯಲಿಲ್ಲ. ಮೊದಲೆ ಸುಮತಿಯ ಸೌಂದರ್ಯ ಮತ್ತು ಬುದ್ದಿವಂತಿಕೆಯ ರೇರ್ ಕಾಂಬಿನೇಷನಗೆ ಕುರುಬುತ್ತಿದ್ದ ಕೇಲವು ಹುಡುಗಿಯರು ಅದಕ್ಕೆ ರೆಕ್ಕೆ, ಪುಕ್ಕ ಕಟ್ಟಿ ದಿನಕ್ಕೊಂದು ಕಥೆ ಹುಟ್ಟಿಸಲಾರಂಭಿಸಿದರು. ಅವರಿಬ್ಬರಿಗೂ ತಿಳಿಯದಂಥೆ ನಾನೂ ಬೆಂಕಿಗೆ ತುಪ್ಪ ಸುರಿದು, ಗಾಳಿ ಬೀಸಲಾರಂಭಿಸಿದೆ. ಅವನ್ನೆಲ್ಲ ವಸಂತನೇ ನನಗೆ ಹೇಳಿದ್ದಾಗಿ ಎಲ್ಲರ ಕಿವಿಯಲ್ಲೂ ಉದಿದೆ.

ಅದೊಂದು ದಿನ ಬೆಳಿಗ್ಗೆಯೇ ಸುಮತಿ ರೂಮಿಗೆ ಬಂದಳು, ಯಥಾಪ್ರಕಾರ ನಾನು ಎದ್ದು ಹೋರಟೆ. ನಾನು ಮರಳಿ ರೂಮಿಗೆ ಬಂದಾಗ ವಸಂತ ರೂಮಿನ ತುಂಬೆಲ್ಲಾ ತನ್ನ ನೋಟ್ಸು-ಪುಸ್ತಕಗಳನ್ನು ಹರಿದು ಬೀಸಾಡಿ ಅಳುತ್ತ ಮೂಲೆಯಲ್ಲಿ ಕುಳಿತಿದ್ದ. ನನ್ನನ್ನು ನೋಡಿದವನೆ “ಮಾಮಾ ಸುಮ್ಮಿ ಹಿಂಗ್ಯಾಕ್ ಮಾಡಿದ್ಲು” ಎನ್ನುತ್ತಾ ಅವಳು ಹರಿದು ಹಿಂದಿರುಗಿಸಿ ಹೋಗಿದ್ದ ಗ್ರೀಟಿಂಗ್ಸ ಕಾರ್ಡಿನ ಚೂರುಗಳನ್ನು ಜೋಡಿಸಲಾರಂಭಿಸಿದ.

ಅವನ ಆ ಪರಿಸ್ಥಿತಿ ಕಂಡು ಮನಸ್ಸಿಗೆ ನೊವಾಯಿತು, ನಾನು ಮಾಡಿದ್ದು ತಪ್ಪು, ಅವನಿಗೆ ನನ್ನ ತಪ್ಪುಗಳನ್ನೆಲ್ಲ ಹೇಳಬಯಸಿದ್ದೆ ಆದರೆ ಹೇಳಲಿಲ್ಲ, ಇವತ್ತಿಗೂ ಹೇಳಿಲ್ಲ.

ಅವನ ಪ್ರಶ್ನೆಗಿನ್ನೂ ಉತ್ತರವೇ ಸಿಕ್ಕಿಲ್ಲ, ಮತ್ತೊಮ್ಮೆ ಗ್ಲಾಸಿನಲ್ಲಿ ಇಗಷ್ಟೆ ಹಾಕಿದ್ದ ಹಸಿ ಕಹಿ ದ್ರವವನ್ನು ಹಾಗೆಯೇ ಪೂರ್ತಿಯಾಗಿ ಎತ್ತಿದ ವಸಂತ ಮತ್ತೆ “ಮಾಮಾ ಸುಮ್ಮಿ ಹಿಂಗ್ಯಾಕ್ ಮಾಡಿದ್ಲು, ಹೇಳೊ ಮಾಮಾ” ಎಂದು ಕೇಳತೋಡಗಿದ. ಅವನಿಗೇನು ಹೇಳಬೇಕೆಂದು ತಿಳಿಯದೆ ಖಾಲಿಯಾದ ಅವನ ಗ್ಲಾಸನ್ನು ಮತ್ತೆ ತುಂಬಿಸಿದೆ.

ಗೆಳತಿಯಂಥ ಅವ್ವನಿಗೆ, ಅವ್ವನಂತ ಗೆಳತಿಯರಿಗೆ

05-flower.jpg

ಗೆಳತಿಯಂಥ ಅವ್ವನಿಗೆ,
ಅವ್ವನಂತ ಗೆಳತಿಯರಿಗೆ..ಮಹೀಳಾ ದಿನದ ಶುಭಾಷಯ…ಹೇಳ್ಲೆಬೇಕಾ?

ನಾನು ಥ್ಯಾಂಕ್ಸ್ ಹೇಳಲ್ಲಾ… ನೀವು ಕಣ್ಣಿರ ಕಲೆ ಒರೆಸಿ ನನ್ನ ನಗಿಸಿದ್ದಕ್ಕೆ, ನಿಮಗೆ ಕಿಟಲೆ ಮಾಡಿದಾಗ ನಕ್ಕಿದ್ದಕ್ಕೆ, ನಿಮ್ಮ ಬುತ್ತಿಯಲ್ಲಿ ನನಗೊಂದು ತುತ್ತು ಇಟ್ಟಿದ್ದಕ್ಕೆ, ನಾನು ಒಡೆದ ಹೋದಾಗ ನನ್ನಲ್ಲಿ ಜೀವನೋತ್ಸಾಹ ತುಂಬಿದ್ದಕ್ಕೆ, ನಿಮ್ಮನ್ನು ಬೇಜಾರು ಮಾಡಿದಾಗೆಲ್ಲ ನನ್ನನ್ನು ಕ್ಷಮಿಸಿದ್ದಕ್ಕೆ, ನಾನು ತಪ್ಪು ಮಾಡಿದಾಗೆಲ್ಲ ತಿದ್ದಿದ್ದಕ್ಕೆ, ನನ್ನ ಇವತ್ತಿನ ಸಂತೋಷಗಳಿಗೆ overall ನನ್ನನ್ನ “ನಾನು..” ಅಂಥೆಲ್ಲಾ ಹೇಳೊದಕ್ಕೆ ಕಾರಣವಾಗಿದ್ದಕ್ಕೆ ನಿಮಗೆ ನಾನು ಥ್ಯಾಂಕ್ಸ್ ಹೇಳೊದಿಲ್ಲ.

ಕೈ ಮುಗಿತೇನೆ ಅಷ್ಟೆ…

ಸಂಭ್ರಮದ ನಡುವೆ ಬಿಕ್ಕಳಿಕೆಯೇಕೇ?

 

ಮದುವೆಯ ದಿಬ್ಬಣ ಮುಗಿದಿರಬೇಕು,
ನಿನ್ನ ಮೇಕಪ್ಪಿನ ಬಣ್ಣ ಕರಗಿರಬೇಕು.
ಆ ಗಲ್ಲದ ಮೇಲೇ ಕಣ್ಣೀರ ಕಲೆಗಳ ಹಂಗೇಕೆ?
ಅಳಿಸಿಬಿಡು, ನನ್ನನ್ನು ಒರೇಸಿ ಬಿಟ್ಟಂತೆ.

ಊರೇಲ್ಲಾ ಮದುವೇಯೂಟವುಂಡು ತೇಗಿರಬೇಕು,
ಊರ ತಿಪ್ಪಿಯಲ್ಲಿ ಉಂಡೇಲೆಗಳು ಹಾರಾಡಿರಬೇಕು.
ಈ ಸಂತಸದ ನಡುವೇ ನನ್ನನ್ನು ಹುಡುಕುವ ಹಠವೇಕೆ?
ಬಿಟ್ಟುಬಿಡು, ನನ್ನನ್ನು ಬಿಟ್ಟು ಬಿಟ್ಟಂತೆ.

ಮದುವೇಯ ಚಪ್ಪರ ಬಾಡಿರಬೇಕು,
ಎಲ್ಲರೂ ಮನೇಗೆ ಮರಳಿರಬೇಕು.
ಅವನಲ್ಲಿ ನನ್ನನು ಕಾಣುವ ತವಕವೇಕೆ?
ಮರೇತು ಬಿಡು, ನನ್ನನ್ನು ಮರೆತುಬಿಟ್ಟಂತೆ.

ಮಂಚದ ಮೇಲೆ ಹೂಗಳು ನಲುಗಿರಬೇಕು,
ಹೂಗಳ ಮೇಲೆ ನೀನು ನರಳಿರಬೇಕು.
ಈ ಸಂಭ್ರಮದ ನಡುವೆ ಬಿಕ್ಕಳಿಕೆಯೇಕೇ?
ಆಗ ಅವನು ವಿಜಯದ ನಗೆ ನಕ್ಕನಂತೆ.