ನೀಲಿ ಛತ್ರಿಯ ಹುಡುಗಿ

ಇದು ಕಥಾ ಕಾಲಕ್ಷೇಪ

ನೀಲಿ ಛತ್ರಿಯ ಹುಡುಗಿ,

ಹೇಗಿರುವೆ? ಧಾರವಾಡದ ಆ ಯುನಿವರ್ಸಿಟಿ ಕ್ಯಾಂಪಸ್ಸು ನೀನಿಲ್ಲದೇ ಹೇಗಿರುವುದು ಗೆಳತಿ? ಇಂದಿಗೂ ನಾನಲ್ಲಿಗೆ ಹೋದರೆ ನನಗರಿವಿಲ್ಲದೆ ನನ್ನ ಕಣ್ಣುಗಳು ಹುಡುಕುವುದು ನಿನ್ನನ್ನೆ, ಎಲ್ಲಿರುವೇ ಗೆಳತಿ?

ಊರಿಂದ ದೂರವಿದ್ದ ನಮಗೆಲ್ಲ ನೀನು ತಾನೆ ನಮ್ಮಲ್ಲಿ ಕಾನ್ಫಡೇನ್ಸ ಹುಟ್ಟಿಸಿದ್ದು, ನಾವೆಲ್ಲ ಗೆಳೆಯರು ನಿನ್ನನ್ನು ನೋಡಲೆಂದೆ ಅಲ್ಲವೇ ಬೆಳಿಗ್ಗೆ ಬೇಗ ಎದ್ದು ಕ್ಯೂನಲ್ಲಿ ನಿಂತು ಸ್ನಾನ ಮಾಡ್ತಿದ್ದುದು, ಪೈಪೋಟಿಯಲ್ಲಿ ಪೈ ಕ್ಯಾಂಟಿನಿನ ಕಟ್ಟೆಗೆ ಕುಡುತ್ತಿದ್ದುದು. ನೀನು ಬರುವುದು ೮ ಗಂಟೆಗೆ ಅಂತ ಗೋತ್ತಿದ್ದರೂ ೭ ಗಂಟೆಗೇನೆ ಕ್ಯಾಂಟಿನ ಕಟ್ಟೆಯಲ್ಲಿ ಸೀಟಗಾಗಿ ಬಡಿದಾಟವಾಗುತ್ತಿದ್ದುದು.

ಕಲ್ಯಾಣನಗರದ ಇಳಿಜಾರಿನಿಂದ ನೀನು ಬರುತ್ತಿದ್ದರೆ ನೀಲಿ ಬಣ್ಣದ ಮತ್ತೊಬ್ಬ ಸೂರ್ಯ ಉದಯಿಸಿದಂತಾಗುತ್ತಿತ್ತು, ಇವತ್ತಿಗೂ ಅಷ್ಟೆ ನೀನು ನೆನಪಿಗೆ ಬಂದರೆ ಮೊದಲು ಛತ್ರಿ, ಅದರ ಕೆಳಗೆ ನೀನು ಕಣ್ಮುಂದೆ ಬರುತ್ತಿ. ನೀನು ಬರುವುದು ಗೋತ್ತಾದ ಕೂಡಲೆ ನಾವೇಷ್ಟು ಡಿಸೆಂಟಾಗುತ್ತಿದ್ದೆವು ಗೋತ್ತಾ? ಕೈಯಲ್ಲಿದ್ದ ಸೀಗರೇಟನ್ನು ಕೊಡವಿ, ಮತ್ತೊಮ್ಮೆ ತಲೆ ಬಾಚಿಕೊಂಡು, ಅಲ್ಲಿಯವರೆಗೂ ಓದುತ್ತಿದ್ದ “ಕನ್ನಡ ಪ್ರಭ” ಕೆಳಗಿಟ್ಟು “ಇಂಗ್ಲೀಷ” ಪೇಪರಿಗೆ ಮತ್ತೊಂದು ಸುತ್ತಿನ ಪೈಪೋಟಿ ನೆಡೆಸುತ್ತಿದ್ದೆವು. ಆವತ್ತು ಕಟ್ಟೆಯಲ್ಲಿ ಜಾಗ ಸಿಗದಿದ್ದರೆ ನಿನಗೆದುರಾಗಿ ಬರುತ್ತಿದ್ದೆವು, ನಿನ್ನನ್ನು ಹಿಂಬಾಲಿಸುವ ಧೈರ್ಯವಿಲ್ಲದೆ :(. ಆದರೆ ನೀನು ಈ ನಮ್ಮ ಸರ್ಕಸ್ಸುಗಳನ್ನು ಮತ್ತು ನಮ್ಮನ್ನು ಕಣ್ಣೆತ್ತಿಯೂ ಮೂಸುತ್ತಿರಲಿಲ್ಲ. ಆದರೆ ನೀನು ನಮ್ಮ ಕಣ್ಮುಂದೆ ಬಳಕುತ್ತಾ ನಡೆದಿದ್ದರೆ ನಮಗೆ ಪಕ್ಕದಲ್ಲಿ ಬಾಂಬ ಬಿದ್ದರೂ ಗೋತ್ತಾಗುತ್ತಿರಲಿಲ್ಲ, ನಿನ್ನ ಮುಖದ ಮೇಲಿನ ಮಂದಹಾಸ ಆಗಷ್ಟೆ ಅರಳಿದ ಹೂವಿನ ಮೇಲಿನ ತೆಳು ಮಂಜಿನಂತೆ ನಮ್ಮ ಕಣ್ಣು ಕುಕ್ಕುತ್ತಿರುತ್ತಿತ್ತು.

ಆಗ ನಿನ್ನ ಹೆಸರೆನೆಂಬುದೆ ನಮಗೆ ಗೋತ್ತಿರಲಿಲ್ಲ, ಈಗದು ಗೋತ್ತಿದ್ದರೂ ಬೇಕಿಲ್ಲ, ಹೀಗಾಗಿ ನಾವೆಲ್ಲ ನಿನ್ನನ್ನು ಕರೆಯುತ್ತಿದ್ದುದೆ ‘ನೀಲಿ’ ಎಂದು. ಇವತ್ತಿಗೂ ಗೆಳೆಯರೆಲ್ಲ ಸೇರಿದಾಗ ನೀಲಿ ಹೇಗಿದ್ದಾಳೆ? ಎನು ಮಾಡ್ತಿದಾಳೆ? ಎಲ್ಲಿದ್ದಾಳೆ? ಎಂದು ಯಾರಾದರೊಬ್ಬರಾದರೂ ಕೇಳುತ್ತಿರುತ್ತಾರೆ. So ಹೇಗಿದ್ದಿಯಾ ಹುಡುಗಿ?… ಮಿಸ್ಸಾ? ಮಿಸ್ಸಸ್ಸಾ? ಬೇಡ ಬಿಡು ಹೇಳ್ಲೆಬೇಡ, ನಮ್ಮ ನೆನಪಲ್ಲಿ ಹೇಗಿದಿಯಾ ಹಾಗೆ ಇರು.

ಗೆಳತಿ ನಿನ್ನ ಉಪಕಾರ ದೊಡ್ಡದು, ಸೂರ್ಯವಂಶಿಗಳಾಗಿದ್ದ ನಮಗೆಲ್ಲ ಬೇಗನೆ ಎಳಲು ಸ್ಪೂರ್ತಿಯಾದೆ, ಸ್ನಾನ ಮಾಡಿ ನೀಟಾಗಿರಲೂ ನೀನೇ ಕಾರಣವಾದೆ. ನಿನ್ನ ಕಾರಣದಿಂದಾದರೂ ಪುಸ್ತಕಗಳು ನಮ್ಮ ಮುಖ ದಿನಾಲೂ ನೋಡುವಂತಾಯ್ತು, ನಿನಗಾಗಿ ಕಾಯುತ್ತ ನಮ್ಮ ಜನರಲ್ ನಾಲೆಡ್ಜ ಇಂಪ್ರೂವ ಆಯಿತು.., ನ್ಯೂಜ್ ಪೇಪರಗಳನ್ನೊದುತ್ತಾ 🙂 .

ಆದರೂ ಗೆಳತಿ, ನಿನ್ನನ್ನು ಒಂದು ಸಲವಾದರೂ ಮಾತನಾಡಿಸುವ ದೈರ್ಯವೇ ನನ್ನಲ್ಲಿ ಹುಟ್ಟಲಿಲ್ಲ, ಆ ದೈರ್ಯ ಹುಟ್ಟದಿದ್ದುದೆ ಒಳ್ಳೆಯದಾಯಿತೇನೊ, ಎಕೆಂದರೆ ನಿನ್ನನ್ನು ಮಾತನಾಡಿಸಿ, ಗುಲಾಬಿ ಕೊಡುವ ಧೈರ್ಯ ಮಾಡಿದ ಕುಮಾರ ಇವತ್ತಿಗೂ ಒಂದು ಕಾಲನ್ನೆಳೆಯುತ್ತಾ ನಡೆಯುತ್ತಿದ್ದರೆ, ಆವತ್ತು ಹುಟ್ಟದೇ ಹೋದ ಧೈರ್ಯದ ಬಗ್ಗೆ ಹೆಮ್ಮೆಯಾಗುತ್ತದೆ.

ರಾಕ್ಷಸರ ಕುಲದಲ್ಲಿ ಬರಿ ಶೂರ್ಪನಖಿಯರೇ ಹುಟ್ಟುತ್ತಾರೆಂದುಕೊಂಡಿದ್ದೆ, ಆದರೆ ಆ ೩ ಜನ ರೌಡಿ ರಾಕ್ಷಸರ ಬೆನ್ನಲ್ಲಿ ನೀನೊಬ್ಬ “ಅಪ್ಸರೆ” ಹೇಗೆ ಹುಟ್ಟಿದೇಯೋ ಆ ದೇವರೆ ಬಲ್ಲ?

{ಧಾರವಾಡದ ಆ ದಿನಗಳನ್ನು ಸಹನೀಯಗೊಳಿಸಿದ “ಗೆಳೆಯ”ರನ್ನು ಮತ್ತು “ಅವಳ”ನ್ನು ನೇನೆಯುತ್ತಾ.. ಪ್ರೀತಿಯಿಂದ…}

Advertisements

ಚೆಲ್ಲಿದ ಹನಿಗಳು

ದಿನಾ ಟ್ರಾಫಿಕ್ಕಿನ ಗೋಳು
ಉಸಿರಾಡಲು ಹೋಗೆಯುಗುಳುವ ಧೂಳು
ಹೇಗೆ ಮೈಗಂಟಿದೆ ನೋಡಿ,
ಊರಿಗೆ ಹೋದರೇ ತಿಳಿಗಾಳಿಗೆ ದಮ್ಮು
ಸಿಹಿ ನೀರಿಗೆ ಶೀತ-ತಲೆನೂವು-ಕೆಮ್ಮು.

 
ಎಂಥ ಎಡಬಿಡಂಗಿ ಬದುಕು ನೋಡಿ
ನಮಗೆ ಪಟ್ಟಣದ ಸವಲತ್ತು ಬೇಕು
ಮೇಲೆ ಹಳ್ಳಿಯ ಸುಖ ಬೇಕು, ಕೋನೆಗೆ
ಸಿಗದ ಸಿಟಿಬಸ್ಸಿನ ಹಿಂದೆ ಓಡತಿರಬೇಕು.

ನೀನಿಲ್ಲದ ಬದುಕು ಬದುಕಲ್ಲ
ನೀನಿಲ್ಲದ ಸಾವು ಸಾವಲ್ಲ.
ನನ್ನ ಬದುಕು-ಸಾವು ನೀನೆಲ್ಲ,
ನೀನಲ್ಲದೇ ನನ್ನಲಿ ನಾನಿಲ್ಲ
“ಕನಸು”ಗಳಿಗೆ ಇನ್ನು ಜೋತೆಯಿಲ್ಲ.

ಬನ್ನಿ ತಗೊಂಡು ಬಂಗಾರದಂಗ ಇರೂಣು: ದಸರೆಯಲ್ಲಿ ಊರ ನೆನಪು

ಮತ್ತೊಂದು ವಿಜಯದಶಮಿ ಊರಿಂದ ದೂರ ಅಚರಿಸಬೇಕಾಗಿದೆ, ಸುಮಾರು ೩-೪ ವರ್ಷಗಳಾಯಿತು ದಸರೆಗೆ ಊರಿಗೆ ಹೋಗದೆ. ದಸರಾ ಹಬ್ಬ ಕರ್ನಾಟಕದ ನಾಡಹಬ್ಬವಾಗಿದ್ದರೂ ಆಚರಣೆಯಲ್ಲಿ ಪ್ರದೇಶ ವ್ಯತ್ಯಾಸ ಕಾಣಬಹುದು.

ಉತ್ತರ ಕರ್ನಾಟಕದ ದಸರೆಯ ಆಚರಣೆಯಲ್ಲಿ “ಬನ್ನಿ”ಗೆ ತನ್ನದೆ ಹಿರಿದಾದ ಅರ್ಥವಿದೆ, ದಸರೆಯಲ್ಲಿ “ಬನ್ನಿ” ಕೆವಲ ಪತ್ರೆಯಲ್ಲ, ಅದು “ಬಂಗಾರ” ಹೀಗಾಗಿ ದಸರೆಯ ಹಬ್ಬ ನಮಗಲ್ಲಿ “ಬನ್ನಿ ಹಬ್ಬ”.

“ಬನ್ನಿ ತಗೊಂಡು ಬಂಗಾರದಂಗ ಇರೂಣು”, “ಬಂಗಾರ ತಗೊಂಡು ಬಂಗಾರದಂಗ ಇರೂಣು” ಬರಿ ಮಾತುಗಳಲ್ಲ, ಶತ್ರುಗಳು ಎದುರಾದರೂ ಆವತ್ತು ನಕ್ಕೊತ “ಬನ್ನಿ ತಗೊಂಡು ಬಂಗಾರದಂಗ ಇರೂಣು”, ಇದರಿಂದಾಗಿ ಅನೇಕ ಒಡೆದ, ಮುರುಟಿದ ಮನಸ್ಸುಗಳು ಒಂದಾದ ಸಾಕ್ಷ್ಯಗಳು ಅನೇಕ, ಒಡೆದ ಮನಸ್ಸುಗಳನ್ನು ಒಂದಾಗಿಸುವ, ಮುರಿದ ಸಂಭಂದಗಳನ್ನು ಬೇರೆಸುವ ಈ ಹಬ್ಬ ಒಂದು ರೀತಿಯಲ್ಲಿ “ವಿಜಯದಶಮಿ”ಯೇ ಸರಿ, ಎಕೆಂದರೆ ಕ್ಷಮೆ ಕೇಳಿದವನು ಮತ್ತು ಕ್ಷಮಿಸಿದವನು ಇಬ್ಬರೂ ಗೆದ್ದ ದಿನ, ಹಾಗೆಯೇ ಹೋಸ ಗೆಳೆತನ ಮತ್ತು ಸಂಭಂದಕ್ಕೆ ಮೊದಲದಿನ.

ನವರಾತ್ರಿಯ ಮೊದಲ ದಿನದಿನದಿಂದಲೆ ಪ್ರತಿದಿನ ಬೆಳೆಗ್ಗೆ ಬನ್ನಿ ಮಂಟಪ(ಬನ್ನಿ ಗಿಡ)ಕ್ಕೆ ಹೋಗಿ ಪೂಜಿಸಿ, ಮಂಟಪ ಸುತ್ತು ಹಾಕಿ ಬರುತ್ತಾರೆ, ಮನೆಗಳಲ್ಲಿ ನವಧಾನ್ಯಗಳ ಸಸಿ ನೆಟ್ಟು, ಬಿಂದಿಗೆಯಲ್ಲಿ ನೀರು ತುಂಬಿ ಪೂಜಿಸುತ್ತಾರೆ, ಇದಕ್ಕೆ ಘಟ್ಟ ಹಾಕುವುದು ಎನ್ನುತ್ತಾರೆ, ಈ ಒಂಬತ್ತು ದಿನಗಳು ಪ್ರತಿದಿನವೂ ದೇವಿ ಪಾರಾಯಣ.

ಆಯುಧ ಪೂಜೆ ನನಗೆ ಮೊದಲಿನಿಂದಲೂ ಇಷ್ಟದ ದಿನ ಎಕೆಂದರೆ, ಆವತ್ತು ರೈತರು ತಮ್ಮ ನೇಗಿಲು, ಎತ್ತು, ಚಕ್ಕಡಿ, ಹಾರಿ, ಗುದ್ದಲಿ, ಕುಡುಗೋಲು ಪೂಜಿಸಿದರೆ, ವ್ಯಾಪಾರಸ್ಥರು ತಮ್ಮ ತಕ್ಕಡಿ, ತೂಕದಕಲ್ಲು ಪೂಜಿಸುತ್ತಾರೆ, ಹಾಗೆಯೇ ಮಹಿಳೆಯರು ಮನೆಯಲ್ಲಿರುವ ಕೈ ಹಾರಿ, ಒಳ್ಳು, ಒನಕೆ, ಕುಡುಗೋಲು, ಈಳಿಗೆ ಮನೆ ಪೂಜಿಸುತ್ತಾರೆ, ತಾಯಂದಿರು ಅವುಗಳ ಜೊತೆಗೆಲ್ಲ ನಮ್ಮ ಪಾಟಿ-ಪುಸ್ತಕಗಳನ್ನು ಇಡುತ್ತಿದ್ದರು, (ನನಗೇಕೆ ಖುಶಿಯೆಂದರೆ ಅವಗಳನ್ನೊದುವುದರಿಂದ ಒಂದು ದಿನ ಮುಕ್ತಿ ಸಿಗುತ್ತಿತ್ತಲ್ಲ ಅದಕ್ಕೆ). ನಮ್ಮ ಕಡೆ ಇದಕ್ಕೆ ‘ಖಂಡೆ ಪೂಜೆ’ ಎಂತಲೂ ಕರೆಯುತ್ತಾರೆ, ಇದರೊಂದಿಗೆ ನಂಟಿರುವ ಇನ್ನೊಂದು ನೆನಪೆಂದರೆ ತುಂಬಾ ಸಣ್ಣವರಿದ್ದಾಗ ಬಹುಶ: ಬಾಲವಾಡಿ ಅಥವಾ ೧ನೇ ಅಥವಾ ೨ನೇಯತ್ತಾ ಇದ್ದಾಗ ಪಾಟಿಯ ಮೇಲೆ ಸರಸ್ವತಿಯ ಚಿತ್ರ ಬರೆಯಿಸಿಕೊಂಡು ಶಾಲೆಗೆ ಒಯ್ದು ಅಲ್ಲಿ ಸರಸ್ವತಿ ಪೂಜೆಗೆ ನಮ್ಮ ಪಾಟಿಗಳನ್ನು ಸಾಲಾಗಿ ಗೋಡೆಗೆ ಒರಗಿಸಿ ಪೂಜಿಸುತ್ತಿದ್ದುದು, ನಂತರದ ದಿನಗಳಲ್ಲಿ ಪ್ರೈಮರಿಯಲ್ಲಿದ್ದಾಗ ಸರಸ್ವತಿ ಪೂಜೆಗೆ ಶಾಲೆಯಲ್ಲಿ ಹೆಂಗೆಳೆಯರು ತಂದುಕೊಟ್ಟ ಸೀರೆಗಳಿಂದ ಮಂಟಪ ಕಟ್ಟಿದ್ದು, ಊರ ಹೋರಗಿನ ತೋಟಗಳಿಂದ ಪೂಜೆಗೆ ಹೂವು, ಹಣ್ಣು, ಬಾಳೆಗಿಡ, ಕಬ್ಬಿನ ಗಿಡಗಳನ್ನು ತೋಟದ ಮಾಲಿಕರನ್ನು ಕೇಳಿ, ಕೊಡದಿದ್ದಾಗ ಕದ್ದು ತಂದದ್ದು ಹೀಗೆ ಆಯುಧ ಪೂಜೆಯ ಅನೇಕ ನೆನಪುಗಳು ನನ್ನ ಪ್ರೈಮರಿ ದಿನಗಳದ್ದು, ಹಾಯಸ್ಕೂಲಿಗೆ ಬಂದ ಮೇಲಿಂದ ಆಯುಧಪೂಜೆ ಕೆವಲ ಮನೆಗೆ ಸಿಮಿತವಾಯ್ತು.

ಬನ್ನಿ

ಬನ್ನಿ

 

ಮರುದಿನ ವಿಜಯದಶಮಿ, ಬೆಳಿಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ, ಬನ್ನಿ ಮಂಟಪಕ್ಕೆ ಹೋಗಿ ಪೂಜಿಸಿ “ಬಂಗಾರ” ಮನೆಗೊಯ್ಯುವುದು, ಆ ದಿನ ಮನೆಯಲ್ಲಿ ಹಬ್ಬದೂಟ ಗೋದಿ ಹುಗ್ಗಿ, ಹೋಳಿಗೆ, ಕರಗಡಬು ಇತ್ಯಾದಿ… (ಅssssss…ಬ್), ಸಂಜೆಗೆ ಮೊದಲು ಊರದೇವರಿಗೆ ಬನ್ನಿ ಮುಡಿಸಿ, ಮನೆಯಲ್ಲಿ ತಂದೆ-ತಾಯಿ-ಹಿರಿಯರಿಗೆಲ್ಲ ಬನ್ನಿ-ಬಂಗಾರ ಕೊಟ್ಟು “ಬಂಗಾರ ತಗೊಂಡು ಬಂಗಾರದಂಗ ಇರೂಣು” ಅನ್ನುವ ಗಿಳಿವಿಂಡು ಕಾರ್ಯಕ್ರಮ ಶುರು. ಗುಂಪುಗಳಲ್ಲಿ ಗೆಳೆಯರೆಲ್ಲ ಮನೆ-ಮನೆಗೆ ಭೇಟಿ ನಿಡುತ್ತಾ  ಬಂಗಾರ ತಗೊ ಕಾಕಾ, ಚಿಗವ್ವ, ದೊಡ್ಡಪ್ಪ, ಮಾಮಾ, ಅಕ್ಕಾ, ತಂಗಿ, ತಮ್ಮಣ್ಣಾ, ಅಜ್ಜಾ, ಅನ್ನುತ್ತಾ, ‘ಜಲ್ದಿ ಹಿಡಿಬೇ ಯಮ್ಮಾ ಗಟ್ಟಿ ಬಂಗಾರ’ ಎನ್ನುತ್ತಾ ಹಿರಿಯರಿಗೆಲ್ಲ ಅಡ್ಡ ಬಿಳುತ್ತಾ, ಆಶಿರ್ವಾದ ಕೇಳಿದ್ದೆ ಕೇಳಿದ್ದು.

ಆ ಹಿರಿಯರ ಆಶಿರ್ವಾದವೇ ಇರಬೇಕು ನಮ್ಮನ್ನೆಲ್ಲ ಇಷ್ಟು ತಣ್ಣಗಿಟ್ಟಿದ್ದು. ಅಂದ ಹಾಗೆ ತಗೋರಿ “ಬನ್ನಿ-ಬಂಗಾರ ತಗೊಂಡು ಬಂಗಾರದಂಗ ಇರೂಣು”