ಉತ್ತರ ಕರ್ನಾಟಕ ಅಭಿವೃದ್ದಿ ಕುಂಠಿತ: ಕಾರಣ ನಾನು ಮತ್ತು…

ಉತ್ತರ ಕರ್ನಾಟಕ

ಮುಂಬಯಿಯಿಂದ ಊರಿಗೆ ಹೋರಟಾಗ, ಬಸ್ಸಿನಲ್ಲಿ ಎಂಥಹ ಘಾಡ ನಿದ್ರೆಯಲ್ಲೂ, ಭರೊ ಅನ್ನುವ ಘಾಡ ಅಂಧಕಾರದಲ್ಲು ಬಸ್ಸು ಕರ್ನಾಟಕ ಪ್ರವೇಶಿಸಿದ್ದು ಗೋತ್ತಾಗುತ್ತದೆ, ಅದು ಹೇಗೆ ಅಂತಿರೇನು? ಅದೇನೋ ಅಂತಾರಲ್ಲ ಮಣ್ಣಿನ ವಾಸನೆ, ಆ ಗಾಳಿ … ಉಂಹೂ… ಹಾಗೇನು ಇಲ್ಲ, ಮತ್ತೆ ಅದು ಹೇಗೆ ಘಾಡ ನಿದ್ರೆಯಲ್ಲೂ ಬಸ್ಸು ಕರ್ನಾಟಕ ಪ್ರವೇಶಿಸಿದ್ದು ತಿಳಿಯುವುದು?

ಘಾಡ ನಿದ್ರೆಯಲ್ಲಿ “ಕಾಡ ರಸ್ತೆ”ಗೆ ಇಳಿದು ಬಸ್ಸಿನೊಳಗೆ ನಾವು ಪುಟಿಪುಟಿದು ಬಿಳುತ್ತಿದ್ದರೆ ಅದೇ ಕರ್ನಾಟಕ.

ಕರ್ನಾಟಕದ ಹೋರಗೆ ನಾರ್ಥಿಗೆ ಹೋಗುತ್ತಿದ್ದರೆ “ಕರ್ನಾಟಕ”ವೆಂದರೆ ಬರಿ “ಬ್ಯಾಂಗಲೋರ್”, ಅವರಿಗೆ ಬೆಳಗಾವಿ ಗೋತ್ತಿಲ್ಲ, ಹುಬ್ಬಳ್ಳಿ ಗೋತ್ತಿಲ್ಲ, ಮಂಗಳೂರು ಗೋತ್ತಿಲ್ಲ, ಬಳ್ಳಾರಿ ಗೋತ್ತಿಲ್ಲ, ಬದಾಮಿ ಗೋತ್ತಿಲ್ಲ, ಜೋಗ ಗೋತ್ತಿಲ್ಲ, ಮಡಿಕೇರಿ ಕೊಡಗು ಜಿಲ್ಲಾ ಕೆಂದ್ರ ಎಂಬುದು ಗೋತ್ತಿಲ್ಲ, ಶೋಲೆಯ ರಾಮಘಡ ಇದೇ ರಾಮನಗರ ಎಂಬುದು ಗೋತ್ತಿಲ್ಲ, ಅವರಿಗೆ ಗೋತ್ತಿರೋದು ಬರೀ ಬ್ಯಾಂಗಲೋರ್, ಅದಕ್ಕೆ ಸ್ವಲ್ಪ ಸಮೀಪದಲ್ಲಿರುವುದರಿಂದ ಮತ್ತು ಒಳ್ಳೆಯ ಮಾರ್ಕೆಟಿಂಗ ಇರುವುದರಿಂದ ಮೈಸೂರು ಸ್ವಲ್ಪ ಮಟ್ಟಿಗೆ ಗೋತ್ತಿದೆ, ಹೀಗಾಗಿ ಹೋರರಾಜ್ಯದವರಿಗೆ “ಕರ್ನಾಟಕ”ವೆಂದರೆ ಬರಿ “ಬ್ಯಾಂಗಲೋರ್”, ಸೋ ಬ್ಯಾಂಗಲೋರಲ್ಲಿ ಕರ್ನಾಟಕವಿದೆ ಎಂದರೂ ನಂಬುತ್ತಾರೆ, ಎಷ್ಟೋ ಜನರಿಗೆ ಹಾಗನಿಸಿದ್ದು ಇದೆ.

ಹೋಗಲಿ ಬಿಡಿ, ಹೋರ ರಾಜ್ಯದವರು ಎನು ಬೇಕಾದರೂ ಅಂದುಕೊಳ್ಳಲಿ, ಆದರೇ ನಮ್ಮನ್ನು ಆಳುವವರು, ನಮ್ಮ ರಾಜಕಾರಣಿಗಳು, ಅಧಿಕಾರಶಾಹಿಗಳು ಹಾಗೆ ಅಂದು ಕೊಂಡರೆ ಹೇಗೆ? ಸಾಮಿ ನಮ್ಮೂರುಗಳು ಕರ್ನಾಟಕದಾಲ್ಲಿಲ್ಲವೇ ಹೇಗೆ ಎಂಬುದೆ ತಿಳಿಯುತ್ತಿಲ್ಲ, ಅದರಲ್ಲು ಉತ್ತರ ಕರ್ನಾಟಕವೆಂದರೆ ನಮ್ಮ ಸರ್ಕಾರಗಳಿಗೆ ಮೊದಲಿನಿಂದಲು ಒಂದು ತರಹದ ಉದಾಸಿನ, ಅದಕ್ಕೆ ಸರ್ಕಾರಕ್ಕೆ ಸಮವಾಗಿ ನಮ್ಮ ಪ್ರತಿನಿಧಿಗಳೂ ಕಾರಣ, ಅವರೆಲ್ಲರಿಗಿಂಥ ಹೆಚ್ಚಾಗಿ ಅವರನ್ನು ಐದು-ಹತ್ತು ಸಾರಿ ಆರಿಸಿ ಕಳುಹಿಸಿದ ನಾವೂ ಮತ್ತು ನಮ್ಮ ಅಪ್ಪ-ಅಜ್ಜಂದಿರೆಲ್ಲಾ ಕಾರಣ. ಉತ್ತರಕರ್ನಾಟಕ ಮೊದಲಿನಿಂದಲೂ “ಉತ್ತರ”ನಂತಹ ನಾಯಕರನ್ನೆ ಪಡೆಯಿತು, ಎಲ್ಲೊ ಒಬ್ಬ ಕೆ.ಎಚ್. ಪಾಟೀಲರು, ಎಸ್.ಅರ್. ಕಂಠಿ, ಪಿ.ಎಮ್.ನಾಡಗೌಡ, ವಿರೆಂದ್ರ ಪಾಟೀಲ್, ಬೊಮ್ಮಾಯಿಯಂಥಹ ನಾಯಕರನ್ನು ಪಡೆದರೂ, ಇವರಿಗೆ ಉತ್ತಮ ಬೆಂಬಲದ ಕೋರತೆಯಿಂದಾಗಿ, ದಯವಿಟ್ಟು ಕ್ಷಮಿಸಿ, “ನಾಯಿ ಮೊಲೆಯ ಹಾಲಾದರು”. ಇನ್ನು ನಮ್ಮ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಹೇಳುವುದಕ್ಕೆ ಶಬ್ದಗಳೆ ಬೇಕಿಲ್ಲ. ಇನ್ನ್ನು ಕಾವೇರಿ ನೀರಿಗಾಗಿ ತಮ್ಮ ಜೀವವನ್ನೆ ಕೊಡುವ ಹಾಗೆ ಮಾಡುವ ಈ ನಮ್ಮ ರಾಜಕಾರಣಿಗಳು ಕೃಷ್ಣೆ, ಡೋಣಿ, ಮಲಪ್ರಭಾ, ಘಟಪ್ರಭಾ ನದಿಗಳು ಕರ್ನಾಟಕದಲ್ಲಿ ಹರಿಯುತ್ತಾರೆ ಎಂಬುದು ನೆನಪಿಲ್ಲ, ಕಾವೇರಿಯಷ್ಟು ಜನರನ್ನು ಶ್ರೀಮಂತಗೋಳಿಸದಿದ್ದರು ಇವೇ ನದಿಗಳೇ ಬಿಸಿಲಿನಲ್ಲಿ ಬೆಂದು ಬರಡಾಗಿರುವ ನೆಲದಲ್ಲಿ ಬೇವರು ಸುರಿಸಿ ಬೆಂದ ರೈತನ ಭೂಮಿಗೆ ನೀರು ಹರಿಸುವುದು, ಆ ರೈತನ ಹೊಟ್ಟೆಗೆ ಹಿಟ್ಟು ನಿಡುವುದು, ಬರಿ ಹೋಟ್ಟೆಗೆ, ಜೇಬಿಗೇನಾದರು ನೀಡಲು ಈ ನದಿಗಳಿಗೂ ಸಾಧ್ಯವಾಗಿಲ್ಲ. ಕೃಷ್ಣೆ, ಮಲಪ್ರಭೆ ಯೋಜನೆಗಳಿಗಾಗಿ ಇವತ್ತು ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳಿಂದ ವಿರೋಧವಿದೆ, ಆದರೆ ಅದಕ್ಕೆ ನಮ್ಮ ಭಾಗದ ಸಚಿವರೆ ಮಾತನಾಡಬೇಕು, ಮುಖ್ಯಮಂತ್ರಿಗಳಿಂದ ಒಂದು ಪತ್ರಿಕಾ ಹೇಳಿಕೆಯು ನಸಿಬಿಲ್ಲ, ನಮ್ಮ ವಿರೋಧ ಪಕ್ಷದ ನಾಯಕರಿಗೂ ಪ್ರತಿಯೊಂದರಲ್ಲು ರಾಜಕಿಯ ಲಾಭವಿರಬೇಕು ಮತ್ತು ಸರಕಾರವನ್ನು ವಿರೋಧಿಸುವ ಸಲುವಾಗಿಯಾದರು ಅವರು ಸರಕಾರದ ಪ್ರತಿ ಹೆಜ್ಜೆಯನ್ನು ವಿರೋಧಿಸಲೇಬೇಕು, ಜನರಿಗೆ ಲಾಭವಾದರೇನು, ಬಿಟ್ಟರೇನು.

ಇನ್ನು ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳು ವಿರೋಧಪಕ್ಷದ ನಾಯಕರಿದ್ದಾಗ, ಚುನಾವಣೆಗೆ ಮುನ್ನ ನೆಡೆಸಿದ ಹೋರಾಟಗಳು, ಮಾಡಿದ ಆಶ್ವಾಸನೆಗಳು ಯಾವುದು ನೇನಪಿಲ್ಲ, ಪಾಪ ಅವರಾದರು ಎನು ಮಾಡಿಯಾರು ಅವರ ತಳವೇ ಗಟ್ಟಿಯಿಲ್ಲ, ಅವರಿಗೆ ನೇನಪಿರುವುದು “ಆಪರೇಷನ್ ಕಮಲ”ವೊಂದೆ.

ಇವತ್ತು ಬಾಗಲಕೋಟೆ, ಸರಕಾರಿ ಯೋಜನೆಗಳಿಗಾಗಿ ಸ್ಥಳಾಂತರ ಹೊಂದಿದ ಎಶಿಯಾದ ದೊಡ್ಡ ನಗರ, ಅಲ್ಲಿಗ ನಗರ ಅರ್ಧರ್ಧ ಹಂಚಿಹೋಗಿದೆ, ಅರ್ಧ ನಗರ ಆಲಮಟ್ಟಿ ಹಿನ್ನಿರಿನಲ್ಲಿ ಮುಳುಗಿ ಮೊದಲೆರಡು ಹಂತಗಳ ಬಹುತೇಕ ಜನಗಳು ನವನಗರಕ್ಕೆ ಸ್ಥಳಾಂತರಗೊಂಡಿದ್ದಾರೆ, ನಿಮ್ಮ ಮನೆಗಳಿಗೆ ಹಿನ್ನೀರು ಬಂದು ಮುಟ್ಟದೆ ಇರುವುದರಿಂದ ಮೂರನೆ ಮತ್ತು ಕೋನೆಯ ಹಂತದವರಿಗೆ ನವನಗರದಲ್ಲಿ ಜಾಗವಿಲ್ಲ, ಪರಿಹಾರವಿಲ್ಲ, ಹೀಗಾಗಿ ನಿಂತ ಹೀನ್ನಿರಿನಿಂದ ಕೇವಲ ೧೦೦ ಮೀಟರಗಳ ಅಂತರದಲ್ಲಿ ಇವತ್ತು ಜನ ವಾಸಿಸುತ್ತಿದ್ದಾರೆ, ಅವರ ಮೂರು ವರ್ಷದ ಮಗು ಆ ನಿಂತ ಹೀನ್ನಿರಿನಿಂದ ಹೋರಬರುವ ಹಾವು, ಚೇಳು ಮತ್ತು ಸಿಹಿ ನೀರ ಮೋಸಳೆಗಳ ಜೊತೆಗೆ ತನ್ನ ಪ್ರಾಣದ ಬೆಲೆಯೇ ಗೊತ್ತಿಲ್ಲದೆ ಆಟವಾಡುತ್ತಿದೆ. ಹಾಗೂ ಹೀಗು ನೀರಿನಲ್ಲಿ ಮುಳುಗುವ ಪ್ರದೇಶಗಳೆಂದು ಕಳೆದ ೫ ವರ್ಷಗಳಿಂದ ಈ ಪ್ರದೇಶಗಳಲ್ಲಿ (ಅಷ್ಟೆ ಯಾಕೆ ಪೂರ್ತಿ ಹಳೆಯ ನಗರದಲ್ಲಿ) ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಸುಧಾರಿಕರಣವಾಗಿಲ್ಲ ಹೀಗಾಗಿ ತಗ್ಗುಗಳ ನಡುವೆ ಅಲ್ಲಲ್ಲಿ ಕಾಣಸಿಗುವ ಕುರುಹುಗಳಿಂದಾಗಿ ನಾವು ನಂಬುವ ರಸ್ತೆಯೆಂಬ ನಮ್ಮ ಮೂಲಭೂತ ಸೌಕರ್ಯ, ನಮ್ಮ ಮನೆಯ ಬಚ್ಚಲುಗಳಿಂದ ಯಾವಾಗಲೊ ಹಿಂದೆ ನೀರು ಹರಿದಿತ್ತು ಎಂಬ ನಮ್ಮ ಹೀರಿಯರು ಹೇಳುವ ದೃಷ್ಟಾಂತಗಳಿಂದ ನಾವು ನಂಬುವ ಚರಂಡಿಯೆಂಬ ಇನ್ನೊಂದು ನಮ್ಮ ಮೂಲಭೂತ ಸೌಕರ್ಯ, ಇವಷ್ಟೆ ಈ ಹಳೆಯ ನಗರದಲ್ಲಿ ಕಾಣಸಿಗುವುದು. ಆದರೂ ಈಂಥಹ ಮೂಲಸೌಕರ್ಯಗಳೊಂದಿಗೆ ನಮ್ಮೂರ ಮುಖ್ಯಪೇಟೆ ಇನ್ನು ಹಳೆಯ ಊರಲ್ಲೆ ಊಳಿದಿದೆ, ಎಲ್ಲ ಒಳ್ಳೆಯ (ಹಳೆಯ ಊರಲ್ಲಿರುವುದಕ್ಕಿಂತಲೂ) ಮೂಲಭೂತ ಸೌಕರ್ಯ ಹೊಂದಿದ ನವನಗರದಲ್ಲಿ ಪ್ರತಿಯೊಂದು ಪೇಟೆಯ ಸಾಮಾನುಗಳಿಗಾಗಿ ಇನ್ನು ಹಳೆಯ ನಗರಕ್ಕೆ ಬರಬೇಕು. ಇನ್ನು ಹಳೆಯ ನಗರದ ಮತ್ತೊಂದು ವಿಶೇಷವೆಂದರೆ ಇಲ್ಲ ದ್ವಿಚಕ್ರ ವಾಹನ ಚಾಲಕರು ರಸ್ತೆಯೆಂಬ ತಮ್ಮ ನಂಬಿಕೆಯ ಮೇಲೆ ವಾಹನ ಚಲಾಯಿಸುವಾಗ ಮಂದಿಗಿಂತ “ಹಂದಿ”ಗೆ ಹೆದರಬೇಕಾಗಿದೆ, ಯಾಕೆಂದರೆ ಯಾವಾಗ, ಯಾವ ದಿಕ್ಕಿನಲ್ಲಿ, ಹೇಗೆ ಈ ಹಂದಿಗಳು ಬರುತ್ತಾವೆಯೋ ಗೋತ್ತಿಲ್ಲ.

ಅರೆ ಇಷ್ಟೆಲ್ಲಾ ಪಿಠೀಕೆ ಯಾಕೆಂದರೆ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ವಿರೋಧಪಕ್ಷದ ನಾಯಕರಾಗಿದ್ದಾಗ ಬಾಗಲಕೋಟೆಯ ಪೂರ್ಣ ಸ್ಥಳಾಂತರಕ್ಕಾಗಿ ಜಿಲ್ಲಾಧಿಕಾರಿಗಳ ಆಫಿಸಿನ ಎದುರಿಗೆ ಅಹೋ ರಾತ್ರಿ ಉಪವಾಸ ಸತ್ಯಾಗ್ರಹ ಮಾಡಿದ್ದರು, ಉಪಮುಖ್ಯಮಂತ್ರಿಗಳಾಗುವ ಮುಂಚೆ ಇವರ ನೇತೃತ್ವದಲ್ಲೆ ಎಲ್ಲ ಬಿ.ಜೆ.ಪಿ. ಶಾಸಕರು ಬಾಗಲಕೋಟೆಯಲ್ಲಿ ಸಾಮೂಹಿಕ ಧರಣಿ ಮಾಡಿದ್ದರು.

ಮುಖ್ಯಮಂತ್ರಿಗಳಾಗುತ್ತಲೆ ಮತ್ತದೆ ಹಿಂದಿನ ಮುಖ್ಯಮಂತ್ರಿಗಳ ರೀತಿ ಉತ್ತರಕರ್ನಾಟಕದತ್ತ ಉದಾಸಿನ ಧೋರಣೆ, ಯೋಜನೆಗಳೆಲ್ಲ ಬೆಂಗಳೂರು ಮತ್ತು ಶಿವಮೊಗ್ಗಕ್ಕೆ ಹಂಚಿಕೆ, ಅತಿ ಹೆಚ್ಚು ಬಿ.ಜೆ.ಪಿ. ಶಾಸಕರನ್ನು ಆರಿಸಿ ಕಳುಹಿಸಿದ್ದಕ್ಕೆ ಉತ್ತರ ಕರ್ನಾಟಕಕ್ಕೆ ಆವಾಗವಾಗ ಮೂಗಿಗೆ ತುಪ್ಪ, ಬಾಯಿಗೆ ಮೊಸರು ಮೆತ್ತಿದ್ದು ಬಿಟ್ಟರೆ ಬೇರೆ ಎನೂ ಲಾಭವಿಲ್ಲ, ನಮ್ಮ ಶಾಸಕರು ಸುಮ್ಮನಿರುವುದೆ ತಮ್ಮ ಹೆರಿಯರಿಂದ ಬಂದ ಬಳುವಳಿ ಎನ್ನುವಂತೆ ಸುಮ್ಮನುಳಿದು ಬಿಟ್ಟಿದ್ದಾರೆ, ನಮ್ಮ ಜನರು “ಯಥಾ ರಾಜಾ, ತಥಾ ಪ್ರಜಾ” ಎನ್ನುವಂತೆ ಅವರು ಸುಮ್ಮನೆ ಉಳಿದಿದ್ದಾರೆ. ಯಾಕೆಂದರೆ ಇವರು ಅವರನ್ನು, ಅವರು ಇವರನ್ನು ಬೆರಳು ಮಾಡಿ ತೋರಿಸಿ ಇಲ್ಲಿ ಇಂಡಸ್ಟ್ರಿಗಳಿಲ್ಲ, ಅವರು ಬರುತ್ತಿಲ್ಲ ಎನ್ನುತ್ತಾರೆಯೆ ಹೋರತು, ಔದ್ಯೋಗಿಕರಣಕ್ಕೆ ಬೇಕಾಗು ಮೂಲಸೌಕರ್ಯಗಳಾದ ಉತ್ತಮ ರಸ್ತೆ, ವಿದ್ಯುತ್, ಜಲ ಸೌಲಭ್ಯಗಳನ್ನು ಸುಧಾರಿಸುವ ಬಗ್ಗೆ ಯಾರು ಯೋಚಿಸುತ್ತಿಲ್ಲ, ನೆಲ ಮತ್ತು ಕೆಲಸಗಾರರಿಗೆ ಯಾವುದೆ ಕಮ್ಮಿ ಅಲ್ಲಿಲ್ಲ. ಸಾಕಷ್ಟು ಬರಡು ನೆಲ, ಕೆಲಸವಿಲ್ಲದೆ ಮುಂಬೈ-ಪುಣೆ-ಗೋವಾಗಳಿಗೆ ಗುಳೆ ಹೋಗುವ ಜನವಿರುವ ಭಾಗದಲ್ಲಿ, ಕೇವಲ ಮೂಲಸೌಕರ್ಯದ್ದೆ ಕೋರತೆ ಮತ್ತು ಅದನ್ನು ಸರ್ಕಾರದಿಂದ ಕೇಳಲಾಗದ ನಮ್ಮ ಹೋಣಗೇಡಿತನವೇ ಕಾರಣ.

ನಾನು ಮತ್ತು ನನ್ನಂಥವರು ಪ್ರತಿ ಸಲವೂ ನಮ್ಮೂರ ಬಸ್ಸು ಕರ್ನಾಟಕ ಪ್ರವೇಶಿಸಿದಾಗ ಪುಟಿಪುಟಿದು ಸಂಭ್ರಮಿಸುತ್ತೆವೆ, ನಿದ್ರೆಗಣ್ಣಲ್ಲೆ.

ಇದನ್ನು ಓದಿ ಗೆಳೆಯರು “ಮಗನ ಅಷ್ಟ ತ್ರಾಸಾಗುದಿದ್ದರ ಊರಿಗೇನ ಬರಬ್ಯಾಡ, ಅಲ್ಲೆ ಮುಂಬಯಿದಾಗ ಇರು. ಬರುವಂಗಿದ್ದರ ಸುಮ್ಮನ ಬಂದು ಸುಮ್ಮನ ಮುಚ್ಕೊಂಡು ಊರಿಗೆ ಹೋಗು, ನಿನಗ್ಯಾಕ ಬೇಕೊ ಮಗನ ಊರ ಊಸಾಬರಿ” ಅನ್ನದಿದ್ರ ಅಷ್ಟ ಸಾಕು.

ಜೈ ಕರ್ನಾಟಕ…

Advertisements

ಮತ್ತಷ್ಟು ಹನಿಗಳು

ಪ್ರೀತಿಯಿಂದ

ನಿನ್ನ ಕಣ್ಣಿನಾಳದಲ್ಲಿ ಇಳಿದು
ನೋಡುವಾಸೆ ನನಗೂ ಇದೆ ಗೆಳತಿ,
ಆದರೆ ಪ್ರೀತಿಯ ಸುಳಿಗೆ
ಸಿಕ್ಕು ಮುಳುಗುವ ಭಯ ನನ್ನದು. 

ಗಾಳಿಯೊಡನೆ ಗುದ್ದಾಡುವ
ಬಯಕೆಯಿಂದ, ಬೈಕಿನ
ಕಿವಿ ಹಿಂಡಿದರೆ,
ಹಿಂದೆ ನೀನು ತಬ್ಬಿ ಕುಳಿತ
ಸ್ಥಿತಿಗೆ ಆ ಗಾಳಿ ಉಸಿರುಗಟ್ಟಿ ಸತ್ತಿತು.

ಗೆಳತಿ ನೀನಗೆ ಕೇವಲ
ಕಳೆದುಕೊಂಡ ಹತಾಶೆಯಿದೆ,
ಆದರೆ ನನಗೆ ಹತಾಶೆಯೊಂದಿಗೆ
ಬಿಟ್ಟು ಬಂದ ನೋವು ಜೊತೆಗಿದೆ.

ನನ್ನೆದೆಗೆ ಒರಗಿ
ನಿನ್ನೆದೆಯ ಮೆದು ತಾಕಿಸಿದಾಗಲೂ
ಹರಿಯದ ನನ್ನ ಕಾಮ, ಇವತ್ತಿನ
-ತನಕ ನಿನ್ನಲ್ಲಿ ಅಸಡ್ಡೆ ಮೂಡಿಸಿದ್ದರೆ?
ಅದು ನನ್ನ ತಪ್ಪಲ್ಲ ಗೆಳತಿ. ಯಾಕೆಂದರೆ,
ಅದೇ ಕಾರಣಕ್ಕೆ ನಾನಿನ್ನು ಕನ್ನಡಿಯೊಳಗೆ
ಕಣ್ಣಿಟ್ಟು ನೋಡಿಕೊಳ್ಳುತ್ತೆನೆ, ದಿನಾಲೂ
ಹೆಮ್ಮೆಯಿಂದ, ಅಷ್ಟೆ ಪ್ರೀತಿಯಿಂದ.

ಸ್ವಲ್ಪ ಹಳೆಯದು “ಹೀಗೊಂದು ಸಂಜೆ…”

ಪಾರ್ಕಿನ ಗೇಟಿಗೆ ಸಮೀಪದಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತಿದ್ದ ಅವಳ ತೊಡೆಯ ಮೇಲೆ ಅವನ ಕೈ, ಅವನ ಕೈ ಮೇಲೆ ಅವಳ ಕೈ. ಅವಳ ಬೆರಳುಗಳು ಅವನ ಬೆರಳುಗಳೊಡನೆ ಆಟವಾಡುತ್ತಿದ್ದವು. ಕಳೆದ ಅರ್ಧ ಗಂಟೆಯಿಂದ ಅವರಿಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ. ಬರಿ ಬೆರಳುಗಳೊಂದಿಗೆ ಬೆರಳಾಟ, ಮನದಲ್ಲಿ ಭಾವನೆಗಳ ಹೊಯ್ದಾಟ, ಮನದಲ್ಲಿ ಮೂಡಿದ ಭಾವನೆಗಳು ಮಾತುಗಳಾಗುತಿಲ್ಲ. ಇಬ್ಬರ ಕಣ್ಣು-ಕಣ್ಣುಗಳು ಸಂಧಿಸಿದವು. ಇಬ್ಬರಿಗೂ ಭಾವನೆಗಳ ಪ್ರಾವಾಹದಲ್ಲಿ ತೆಲಿ ಹೋದಂತಾಯಿತು. ಮೊದಲು ಹತೋಟಿಗೆ ಬಂದವಳು ಅವಳೇ, ಅವನ ಕೈಯನೊಮ್ಮೆ ಅದುಮಿ, ಸಮಾಧಾನ ಮಾಡಿಕೊಳ್ಳೆಂದು ಕಣ್ಣಲ್ಲೇ ಹೇಳಿದಳು. ಅವನಿಗಿನ್ನೂ ಕಣ್ಣೀರು ತಡೆದಿಟ್ಟುಕೊಳ್ಳಲಾಗಲಿಲ್ಲ. ಕಣ್ಣೀರ ಹನಿ ಕೆನ್ನೆಯಿಂದಿಳಿದು ಕೈ ಮೇಲೆ ಬಿದ್ದಾಗಲೆ ಅವನಿಗೆ ಗೊತ್ತಾಗಿದ್ದು ತಟ್ಟನೆ ಕಣ್ಣೀರನ್ಣೊರೆಸಿಕೊಂಡು, “ತುಂಬಾ ಕಣ್ಣುನೋವೂ, ಇತ್ತಿಚಿಗೆ ಕಣ್ಣಿಂದ ನೀರು ತನ್ನಿಂದ ತಾನೇ ಹಾಗೆ ಬರುತ್ತವೆ” ಅಂದ ಅವರಿಬ್ಬರ ನಡುವೆ ಸಂಭಾಷಣೆ ಹೀಗೆ ಶುರುವಾಗಿತ್ತು.

ಅವಳು ತನ್ನ ಕಣ್ಣಂಚಿಗೆ ಬಂದು ನಿಂತಿದ್ದ ಕಣ್ಣೀರ ಹನಿಗಳನ್ನು ತನ್ನ ಪುಟ್ಟ ಹಂಸಬಿಳುಪಿನ ಕೈವಸ್ತ್ರದಿಂದ ಹತ್ತಿಕ್ಕಿಕೊಂಡು, ಕಣ್ಣಲ್ಲಿ ಕಸ ಬಿದ್ದಿದೆಯೇನೋ ಎಂಬಂತೆ ಒರೆಸಿಕೊಂಡಳು, “ರಾಕ್ಷಸ ಕಣೋ ನೀನು, ಕೆಲಸಕ್ಕೆ ಅಂತ ಕುಳಿತರೆ ಏಳೋದೇ ಇಲ್ಲ, ಯಾವುದಾದರೂ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಮುಗಿಸಿ ಎಳೋವರೆಗೂ ಕಣ್ಣಿನ ರೆಪ್ಪೆಗಳನ್ನು ಬಡಿಯೋದಿಲ್ಲ. ಇವಾಗಲಾದ್ರೂ ಸರಿಯಾಗಿ ನಿದ್ರೆ ಮಾಡ್ತೀಯೋ ಇಲ್ವೋ, ಗೂಬೆ ಜಾತಿಯೋನೇ”, ಎನ್ನುತ್ತಾ ಎದೆಯಾಳದಿಂದ ಬಾರದ ನಗೆಯನ್ನು ತುಟಿಗೆ ತರುವ ಯತ್ನ ಮಾಡಿದಳು. ಅವನು ಕೂಡ ಅದೇ ಪ್ರಯತ್ನದಲ್ಲಿ, “ನನ್ನ ಕಣ್ಣಿಗೆ ನಂಬರ ಬರದಿದ್ದರು, ನನ್ನ ಸುತ್ತಳತೆ ಸಾಕಷ್ಟು ಬೆಳದಿದೆ, ಅದಕ್ಕೆ ತಕ್ಕಂತೆ ನಿನ್ನ ಕನ್ನಡಕದ ನಂಬರ್ ಏರಿದೆ” ಎಂದ.

ಇಬ್ಬರು ಬಾರದ ನಗೆಯನ್ನು ತುಟಿಗೆ ತರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ, ಕಾಲೇಜಿನಿಂದ ನೇರವಾಗಿ ಪಾರ್ಕಿಗೆ ಬಂದ ಒಂದು ಜೋಡಿ ಅವರ ಪಕ್ಕದಲ್ಲಿಯೇ ಬೈಕ ನಿಲ್ಲಿಸಿ. ಕೈ-ಕೈ ಹಿಡಿದು ಪಾರ್ಕಿನ ಗಿಡ-ಮರಗಳ ನಡುವೆ ಮರೆಯಾದರು. ಅದನ್ನು ಕಂಡ ಅವರಿಬ್ಬರ ಕಣ್ಣುಗಳಲ್ಲಿ ಹೇಳಲಾಗದ ಮಂದಹಾಸವೊಂದು ಮೀನುಗಿ, ಮೂಡಿದಷ್ಟೇ ವೇಗವಾಗಿ ಕರಗಿಹೋಯಿತು. ಇಲ್ಲಿಯವರೆಗೂ ಕೂತಿದ್ದ ಕಲ್ಲು ಬೆಂಚಿನ ಮೇಲೆ ಈಗ ಕುಳಿತುಕೊಳ್ಳಲಾಗದೇ ಚಡಪಡಿಸಿದರು. ಅದು ಇಬ್ಬರಿಗೂ ಅರ್ಥವಾಗಿ ಅಲ್ಲಿಂದೆದ್ದು ಪಾರ್ಕಿನ ಗೆಟನ್ನು ದಾಟಿ ರಸ್ತೆಗೆ ಬಂದರು. ಕಣ್ಣಲ್ಲೇ ನೂರಾರು ಮಾತು ಮಾತನಾಡಿ, ಕಣ್ಣಲ್ಲೇ ವಿದಾಯ ಹೇಳಿ ಅವನು ಎಡಕ್ಕೂ ಮತ್ತು ಅವಳು ಬಲಕ್ಕೂ ತಿರುಗಿ ಹೋರಟರು.

ಹತ್ತು ಹೆಜ್ಜೆ ನೆಡದ ಅವಳು ಅಲ್ಲಿಯೇ ಹಿಂದೆ ತಿರುಗಿ ನಿಂತಳು. ಅವನು ಹಿಂತಿರುಗಿ ನೋಡುವನೇನೋ ಎಂದು ಕಾದಳು. ಅವನು ತನ್ನಷ್ಟಕ್ಕೆ ತಾನೇ ಏನೋ ಮಾತನಾಡುತ್ತಾ ಹಾಗೆ ಹೊರಟಿದ್ದ. ಅವಳು ಸ್ವಲ್ಪ ಹೊತ್ತು ಕಾಯ್ದು, “ಇವತ್ತಿಗೂ ಇವನು ಏನು ಬದಲಾಗೆ ಇಲ್ಲ” ಎಂದುಕೊಳ್ಳುತ್ತಾ ನಿಟ್ಟುಸಿರು ಬಿಟ್ಟಳು.

ಅವನಿಗೆ ಹೋಗುತ್ತಾ ಒಮ್ಮೆ ಹಿಂತಿರುಗಿ ನೋಡಬೇಕೆನಿಸಿತು……ಮತ್ತೊಮ್ಮೆ ಅವಳ ಶಾಂತ ಸರೋವರಕ್ಕೆ ಕಲ್ಲೇಸೆದು ಕದಡುವ ಪ್ರಯತ್ನ ಬೇಡವೆಂದು ತನ್ನ ಮನಸ್ಸಿಗೆ ಬುದ್ಡಿ ಹೇಳುತ್ತಾ, ಒಮ್ಮೆ ಬೈಯುತ್ತಾ, ಮತ್ತೊಮ್ಮೆ ರಮಿಸುತ್ತಾ ಆ ಅಜ್ಜನು ಹಾಗೆಯೇ ಕಾಲೇಳೆಯುತ್ತಾ ಮುನ್ನೇಡದ. ಅಲ್ಲಿಯೇ ನಿಂತಿದ್ದ ಅಜ್ಜಿ ಮತ್ತೊಮ್ಮೆ ತನ್ನ ಹಂಸಬಿಳುಪಿನ ಕೈವಸ್ತ್ರವನ್ನು ಮುಖಕ್ಕೆ ಹತ್ತಿರ ತಂದಳು.

——–
೫೦ರ ಸಂಭ್ರಮಕ್ಕೆ ಹಳೆಯದೆ ಉಡುಗೊರೆ, ಇದು ನನ್ನ ೫೧ನೆಯ ಪೋಸ್ಟ. ಇಲ್ಲಿಯವರೆಗೂ ನನ್ನನ್ನು ಸಹಿಸಿದ್ದಕ್ಕೆ ಎಲ್ಲರಿಗೂ ಅಭಿನಂದನೆಗಳು ಮತ್ತು ಮುಂದೆಯೂ ಹೀಗೆ ಸಹಿಸಿಕೊಳ್ಳುವಿರೆಂದು ನಂಬಿ ನಿಮಗೆಲ್ಲರಿಗೂ ಧನ್ಯವಾದಗಳು.

ಪ್ರೀತಿಯಿರಲಿ

ಶೆಟ್ಟರು