ನಿಮಗಿದು ಗೋತ್ತೆ, ಭಾರತದ ರಾಷ್ಟ್ರ ದ್ವಜದ ಬಟ್ಟೆ ನಮ್ಮೂರಿಂದು, ಬಾಗಲಕೋಟೆದು

ಭಾರತದ ರಾಷ್ಟ್ರ ದ್ವಜದ ಬಟ್ಟೆ ನಮ್ಮೂರಿಂದು, ಬಾಗಲಕೋಟೆದು

ಹೌದ್ರಿ, ಭಾರತದಲ್ಲಿ ಎಲ್ಲೆಲ್ಲಿ ಖಾದಿ ರಾಷ್ಟ್ರ ದ್ವಜ ಹಾರಾಡ್ತೈತಿ ಅವು ನಮ್ಮೂರಾಗ ತಯಾರಾಗಿರ್ತಾವು.

ಹುಬ್ಬಳ್ಳಿ-ಧಾರವಾಡದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (Karnataka Khadi Gramodyoga Samyukta Sangha (KKGSS)) ಭಾರತದ ಎಕೈಕ ಸರ್ಕಾರದ ಮಾನ್ಯತೆ ಪಡೆದ ರಾಷ್ಟ್ರ ದ್ವಜ ತಯಾರಿಕಾ ಸಂಸ್ಥೆ. ಅಲ್ಲಿ ತಯಾರಾದ ರಾಷ್ಟ್ರ ದ್ವಜಗಳೆ ಭಾರತದ ಎಲ್ಲಡೆ ಬಾನೆತ್ತರಕ್ಕೆ ಹಾರಾಡುತ್ತವೆ.

ಈ ಹುಬ್ಬಳ್ಳಿಯ ರಾಷ್ಟ್ರ ದ್ವಜ ತಯಾರಿಕಾ ಕೆಂದ್ರಕ್ಕೆ ಸರಬರಾಜಾಗುವ ಬಟ್ಟೆ ತಯಾರಾಗುವುದು ಇದೆ “ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ”ದ ಬಾಗಲಕೋಟೆ ಶಾಖೆಯಲ್ಲಿ. ಅಲ್ಲಿ ಖಾದಿಯ ನೂಲು ತೆಗೆದು, ಅದನ್ನು ಸರಿಯಾಗಿ ನೇಯಲಾಗುತ್ತದೆ. ಮೂಲತವಾಗಿ ಕೇವಲ ಬಿಳಿ ಬಣ್ಣದಲ್ಲಿರುವ ಖಾದಿಯನ್ನು ಸರಿಯಾಗಿ ಮೂರು ಪ್ರಮಾಣದಲ್ಲಿ ವಿಂಗಡಿಸಿ, ಅವುಗಳಲ್ಲಿ ಎರಡು ಲಾಟಗಳನ್ನು ಭಾರತಿಯ ಗುಣಮಾಪನ ಸಂಸ್ಥೆ (Bureau of Indian Standards) ನಿಗದಿಪಡಿಸಿದ ಕರಾರುವಾಕ್ಕಾದ ಕೇಸರಿ ಮತ್ತು ಹಸಿರು ಬಣ್ಣ ಹಾಕಲಾಗುತ್ತದೆ.

ಹಾಗೆ ಮೂರು ಬಣ್ಣಗಳ ಬಟ್ಟೆಗಳನ್ನು ಹುಬ್ಬಳ್ಳಿಗೆ ತಂದು, ನಿಗದಿ ಪಡಿಸಲಾದ ಪ್ರಮಾಣದಲ್ಲಿ ಬಟ್ಟೆ ಕತ್ತರಿಸಿಕೊಳ್ಳುತ್ತಾರೆ, ನಂತರ ಬಿಳಿ ಬಟ್ಟೆಯ ಎರಡೂ ಬದಿಗಳಲ್ಲಿ ಅಶೋಕ ಚಕ್ರವನ್ನು ಮುದ್ರಿಸಿ (ಚಕ್ರವು ಎರಡೂ ಬದಿಗಳಲ್ಲಿ ಸರಿಯಾಗಿ ಒಂದೆ ಜಾಗದಲ್ಲಿ ಮೇಳೈಸಬೇಕು), ಮೂರು ಬಣ್ಣದ ಬಟ್ಟೆಗಳನ್ನು ಸೇರಿಸಿ ಹೋಲೆಯಲಾಗುತ್ತದೆ (ರಾಷ್ಟ್ರದ್ವಜದ ಉದ್ದ ಮತ್ತು ಅಗಲದ ಪರಿಮಾಣ ೨:೩ ಅನುಪಾತದಲ್ಲಿರುತ್ತದೆ). ಇವುಗಳಲ್ಲಿ ಯಾವುದಾದರೂ ತಪ್ಪಾದಲ್ಲಿ ಅದು ಭಾರತದ ರಾಷ್ಟ್ರ ದ್ವಜ ಸಂಹೀತೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ(ಇಂತಹ ನೂರಕ್ಕೂ ಹೆಚ್ಚು ನಿಯಮಗಳು/ಗುಣಮಾಪನಗಳು ರಾಷ್ಟ್ರ ದ್ವಜ ಸಂಹೀತೆಯಲ್ಲಿದೆ).

ಕೋನೆಯ ಹನಿ: ನಮ್ಮಲ್ಲಿ ಎಷ್ಟು ಜನಕ್ಕೆ ಗೋತ್ತು ಕೇವಲ ಕೈಯಿಂದ ನೂಲಿದ ಮತ್ತು ಕೈಯಿಂದ ನೇಯ್ದ ಬಟ್ಟೆಯನ್ನು ಮಾತ್ರ ರಾಷ್ಟ್ರದ್ವಜಕ್ಕಾಗಿ ಬಳಸಲಾಗುತ್ತದೆ.

ಪ್ಲ್ಯಾಸ್ಟೀಕ ದ್ವಜವನ್ನು ಅವತ್ತೊಂದು(?) ದಿನ ಹಿಡಿದು “ಬೋಲೋ ಭಾರತಮಾತಾ ಕೀ ಜೈ” ಎಂದು ಕೂಗುವ ನಮಗೆ ರಾಷ್ಟ್ರದ್ವಜಕ್ಕೂ ಒಂದು ನೀತಿ/ನಿಯಮಾವಳಿ ಇರುವುದು ಗೋತ್ತಿರಲಾರದ್ದು ಅಮೇರಿಕದ ರಾಷ್ಟ್ರಾದ್ಯಕ್ಷರು ನೋಣ ಕೊಂದ ವಿಷಯಕ್ಕಿಂತ ದೊಡ್ಡದಲ್ಲ ಬಿಡಿ.

ಮಾಹೀತಿ ಕೃಪೆ: ದಿ ಹಿಂದೂ

Advertisements

ಗುಲ್ ಮೊಹರ್ ಮತ್ತೆ ಅರಳಿದೆ…

 ಗುಲ್ ಮೋಹರ್ ಮತ್ತೆ ಅರಳಿದೆ
ಗೆಳತಿ, ಗುಲ್ ಮೊಹರ್ ಹೂವಿನ
ಹಂದರದ ಕೆಳಗೆ ನೀ ಕೊಟ್ಟು ಹೋದ ಮುಗುಳ್ನಗೆ
ನನ್ನನ್ನು ಇನ್ನೂ ಕಾಡುತ್ತಿದೆ, ನಾನಲ್ಲೆ ಕಾಯುತ್ತಿದ್ದೆನೆ
ನೀ ಮತ್ತೆ ಬರುವ ದಾರಿ ಕಾಯುತ್ತಾ.
ಗುಲ್ ಮೊಹರ್ ಮತ್ತೆ ಅರಳಿದೆ ನಿನಗೆ ಗೋತ್ತಾ?

*

ಕಣ್ಣಂಚಲಿ ನೀ ನಗುವ ಚಿತ್ರವಿದೆ
ತುಟಿಯಂಚಲಿ ನಿನ್ನದೆ ಹೆಸರಿದೆ,
ಒಟ್ಟಿನಲ್ಲಿ ಮನದ ಬಯಲೊಳೆಗೆಲ್ಲ
ಬರಿ ನಿನ್ನದೆ ಒಲವ ಜಾತ್ರೆಯಿದೆ.

ನನ್ನದಲ್ಲದ ನನ್ನ ಕಥೆ

ಯಾಕೋ ಮೊನ್ನೆಯಿಂದ ಒಂದೇ ಸಮನೆ ಊರಿಗೆ ಹೋಗಿಬರುವ ಹಂಬಲ ಹೆಚ್ಚಾಗುತ್ತಿತ್ತು. ಅವ್ವ ಊರಿಂದ ಫೋನ ಮಾಡಿದಾಗ ಹೇಳಿದ ವಿಷಯ ಕೇಳಿದಾಗಿಂದ ಯಾವುದರ ಮೇಲು ಮನಸು ನಿಲ್ಲವಲ್ಲದು.

ಪ್ರತಿ ಸಾರಿ ಊರಿಗೆ ಫೋನ ಮಾಡಿದಾಗಲೂ ಅವ್ವ ಹೇಳುವ ಊರ ವಿಷಯಗಳನ್ನು ಅವಳ ಮನಸು ನೂಯಿಸಲಾರದಕ್ಕ್ ಕೇಳಿದಂತೆ ಮಾಡಿ ಈ ಕಡೆ ಕಿವಿಯಿಂದ ಹೋರಬಿಡುವ ನಾನು ಈ ಸಲ ಅದೆಕೋ ಈ ವಿಷಯವಾಗಿ ಎರಡು ದಿನಗಳಿಂದ ತಲೆಕೆಡೆಸಿಕೊಂದಿದ್ದೆನೆ ಎಂಬುದು ನನಗೂ ತಿಳಿಯುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಊರ ಕಡೆಗೆ ತಲೆ ಹಾಕದ ನನಗೆ ಯಾಕೋ ಊರ ನೆನಪು ಜಗ್ಗುತ್ತಿದೆ, ಆಫಿಸಿನಿಂದ ಬರುವಾಗಲೇ ಒಂದು ವಾರದ ರಜೆ ಪಡೆದುಕೊಂಡು ಬಂದು, ಒಂದೆರಡು ಜೊತೆ ಬಟ್ಟೆ ಬ್ಯಾಗಿಗೆ ತುರಿಕಿಕೊಂಡು, ಊರಿಗೆ ಹೋರಡುವ ಬಸ್ಸು ಹತ್ತಿಕುಳಿತಾಗಲೇ ಸಮಾಧಾನವದದ್ದು. ಯಾವುದೆ ಹಬ್ಬ ಅಥವಾ ರಜೆ ಇರದಿದ್ದರಿಂದ ಜನಂಗುಳಿ ಅಷ್ಟೊಂದು ಇರದೆ ಕಿಟಕಿಯ ಬಳಿ ಸೀಟು ಸಿಕ್ಕಿತು, ನಾಳೆ ಬೆಳಗಿನ ಜಾವಕ್ಕೆ ಕೋಳಿ ಕೂಗುವ ವ್ಯಾಳಾಕ್ಕ ಊರಿಗೆ ಮುಟ್ಟಬಹುದು ಅನ್ನೊ ಲೆಕ್ಕ ಹಾಕೋತ ಕಣ್ಣು ಮುಚ್ಚಿ ಮಕ್ಕೊಳುದಕ್ಕ ಪ್ರಯತ್ನಿಸಿದೆ, ಕಣ್ಣು ಮುಚ್ಚಿದ್ದರೂ ಮನಸ್ಸಿನ ಮೂಲೆಯಲ್ಲಿ ಅವ್ವ ಆಡಿದ ಮಾತುಗಳೇ ಗುಂಯಗುಟ್ಟುತ್ತಿದ್ದವು.

“ಮೊನ್ನೆ ಚಿದಂಬರ ಮನೆಗೆ ಬಂದಿದ್ದ, ಮನಿ ಓಪನಿಂಗ ಕಾರ್ಡ ಕೊಡಾಕ, ಎರಡಂತಸ್ತಿನ ಮನಿ ಕಟ್ಟಿಸ್ಯಾನಂತ. ಅಷ್ಟ ಅಲ್ಲ ಕಾರ್ ಬ್ಯಾರೆ ತೊಗೊಂಡಾನ, ಅದನ್ನ ತೊಗೊಂಡು ಬಂದಿದ್ದ ಮನಿಗೆ. ಯಾಡ್ ವರ್ಷದ ಹಿಂದ ನೀ ಊರಿಗೆ ಬಂದಾಗ ಹೆಂಗಿದ್ದ, ಹಳೆ ಸೈಕಲ್ ತುಳುಕೊಂಡು, ಮಾಸಿದ ಹಳೆ ಅರಬಿ ಹಾಕ್ಕೊಂಡು ನಿನ್ನ ಬೆಟ್ಟಿಯಾಗಾಕ ಬಂದಿದ್ದ, ಎರಡ ವರ್ಷದಾಗ ಈಗ ಹ್ಯಾಂಗ ಆಗ್ಯಾನ ನೀ ನೋಡಬೇಕ್, ಅಂತೂ ಇಂತೂ ಅಂವಾ ಮನಷ್ಯಾ ಆದ್ ನೋಡು”

ನಮ್ಮವ್ವನ ಮಾತು, ವಿಚಾರಾ ಯಾವಾಗ್ಲೂ ಹಂಗ, ಯಾರರ ಮನಿ ಕಟ್ಟಿಸಿದ್ರು, ಇಲ್ಲಾ ಕಾರ್ ತೊಗೊಂಡ್ರು ಅಂದ್ರ ಅಂವ ಮನಶ್ಯಾ ಇಲ್ಲಾ ಅಂದರ ಅಂವ ಮನಶ್ಯಾನ ಅಲ್ಲ. ನನಗೂ ಹಂಗ ಅನಸ್ತದ. ಇದ ಕಾರು, ಮನಿ, ರೊಕ್ಕ, ರೂಪಾಯಿ ಮಾಡು ಆಸೆಕ ಊರಿಂದ ಇಷ್ಟು ದೂರ ಮುಂಬಯಿಗೆ ನೌಕರಿ ಹುಡ್ಕೊಂಡು ಬಂದದ್ದು. ಒಳ್ಳೆಯ, ಕಾಯಮ್ ನೌಕರಿಯಿದ್ದ ನಾನೇ ಕಾರಿಗೆಯಂತ ತೊಗೊಂಡ ಸಾಲ ತಿಂಗಳು ತಿಂಗಳು ಸ್ಯಾಲರಿಯಿಂದ ಕಡಿತ ಮಾಡಿಸಿಕೊಂಡು ಎರಡೂ ಹೊತ್ತಿನ ಕೂಳಿಗೆ ಕೆಲವೊಮ್ಮೆ ತಾತ್ಸಾರ ಬಂದಿರ್ತೈತಿ, ಹಂತಾದ್ರಾಗ ನಮ್ಮೂರಿನ ಕಾಲೇಜಿನ್ಯಾಗ ಪಾರ್ಟಟೈಮ ನೌಕರಿ ಮಾಡುವ ಚಿದಂಬರ ಅದು ಹ್ಯಾಂಗ ಕಾರ್ ತೊಗೊಂಡಾ, ಮನಿ ಕಟ್ಟಿಸಿದಾ ಎಂಬ “ಚಿದಂಬರ ರಹಸ್ಯ”ದ ಬಗ್ಗೆ ಯೋಚಿಸುತ್ತಾ ನಿದ್ರೆಗೆ ಜಾರಿದ್ದೆ.

“ಸರ್.. ಬಾಗಲಕೋಟ ಬಂದೈತ್ರಿ” ಎಂದು ಬಸ್ಸಿನ ಕ್ಲೀನರ್ ಎಬ್ಬಿಸಿದಾಗಲೇ ಎಚ್ಚರವಾಗಿದ್ದು. ಆಟೋ ಹಿಡಿದು ಮನೆಗೆ ಬಂದಾಗ ಅವ್ವ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದಳು. ಮನೆಯ ಮುಂದೆ ನಿಂತ ಆಟೋ ನೋಡಿ ಅವ್ವ ಗೇಟಿನತ್ತ ಬಂದಳು, ಆಟೋದಿಂದ ಇಳಿದ ನನ್ನ ನೋಡಿ ಅವಳ ಕಣ್ಣುಗಳು ಅರಳಿ, “ಒಂದು ಫೋನ ಇಲ್ಲಾ, ಎನಿಲ್ಲಾ ಹಂಗೊಮ್ಮಿಂದೊಮ್ಮಲೆ ಮಳಿ ಬಂದಂಗ ಬಂದಿಯಲ್ಲಾ” ಅಂದಳು, ಅವಳಿಗೆ ಹಾರಿಕೆಯ ಉತ್ತರ ಹೇಳುತ್ತಾ ಅವಳೊಂದಿಗೆ ಮನೆಯೊಳಗೆ ಹೆಜ್ಜೆ ಹಾಕಿದೆ.

ಸ್ನಾನ ಮಾಡಿದ ಮೇಲೆ ನಾಷ್ಟಾ ಮಡುತ್ತಾ, “ಎನಂತಬೇ ಚಿದಂಬರನ ವಿಷಯಾ” ಅಂತ ಕೇಳಿದೆ, ಅವ್ವ “ಹಾಂ, ಇಲ್ಲೆ ಟಿ.ವಿ. ಮ್ಯಾಲೆ ಅವನ ಮನಿ ಒಪನಿಂಗ್ ಕಾರ್ಡ ಐತಿ ನೋಡು, ನಾನು ಇಲ್ಲೆ ಕಾಯಿಪಲ್ಲೆ ತಗೊಂದು ಜಲ್ದಿ ಬರ್ತಿನಿ” ಅಂದು ಹೋರಗೆ ನೆಡೆದಳು. ಕೈ ತೋಳೆದು ಕಾರ್ಡ ನೋಡುತ್ತಾ, ಅದರೊಳಗಿದ್ದ ಮನೆಯ ಫೋಟೋ ನೋಡುತ್ತಾ ಅದರ ಬೆಲೆ ಕೋಟಿಗಿಂತ ಕಮ್ಮಿಯಿಲ್ಲ ಅಂದುಕೊಳ್ಳುತ್ತಿರುವಾಗಲೇ, ವಿಳಾಸ ನೋಡಿ ನಮ್ಮೂರಿನ ಎಲ್ಲ ಶ್ರೀಮಂತರ ಬಡಾವಣೆ ಎಂದುಕೊಳ್ಳುತ್ತಿರುವಾಗಲೇ ವಾಕಿಂಗಗೆ ಹೋಗಿದ್ದ ಅಪ್ಪ ಬಂದರು. ನನ್ನೊಂದಿಗೆ ನನ್ನ ಆರೋಗ್ಯ, ಕೆಲಸದ ಬಗ್ಗೆ ಕೇಳಿದರು ಅವರಿಗೆ ಒಲ್ಲದ ಮನಸ್ಸಿನೊಂದಿಗೆ ಉತ್ತರಿಸಿ, ಹೋರಗೆ ಹೋಗಿ ಬರುವುದಾಗಿ ತಿಳಿಸಿ ಹೋರ ಬಂದೆ.

ಹೋರಗೆ ಬಂದ ಮೇಲೆ ಎಲ್ಲಿಗೆ ಹೋಗುವುದೆಂದು ಕಾಲುಗಳು ಕೇಳುತ್ತಿರುವಾಗಾಲೇ, ಮನಸ್ಸು ನೇರವಾಗಿ ಚಿದಂಬರನ ಮನೆಗೆ ಎಂದು ಹೇಳಿತು. ಚಿದಂಬರನ ಮನೆಯಲ್ಲಿ ಎದುರಾದ ಅವನ ಹೆಂಡತಿ ಅವನ  ಶ್ರೀಮಂತಿಕೆಯನ್ನು ಯಥೆಚ್ಚವಾಗಿ ಪ್ರದರ್ಶಿಸುತ್ತಿದ್ದಳು, ಉಭಯಕುಶಲೋಪರಿಯ ನಂತರ ಚಿದಾನಂದನ ಬಗ್ಗೆ ವಿಚಾರಿಸಿದಾಗ, ‘ಅವರು ಟ್ಯೂಷನ್ ಹೇಳಾಕ ಹೋಗ್ಯಾರ್ರಿ, ಅಲ್ಲೆ ಕ್ಲಾಸ್ಸಿನ್ಯಾಗ ಸಿಗ್ತಾರ’ ಎಂದಾಗ ನನಗೆ ಒಮ್ಮಿಂದೊಮ್ಮಲೆ ಆಶ್ಚರ್ಯ, ಮನೆ ಪಾಠವೆಂದರೇ ವಿದ್ಯಾರ್ಥಿ ಜೀವನದಿಂದಲೇ ಉರಿದುಬಿಳುತ್ತಿದ್ದ ಚಿದಂಬರ ಮನೆಪಾಠ ಹೇಳುತ್ತಿದ್ದಾನೆ ಎನ್ನುವುದು ನನಗೆ ಜಗತ್ತಿನ ಎಂಟನೆಯ ಅದ್ಭುತದಂತೆ ತೋರಿ, ಅವನಿಗೆ ನಾನು ಬಂದಿರುವ ವಿಷಯ ತಿಳಿಸುವಂತೆ ಹೇಳಿ ಮರಳಿ ಮನೆಯ ಕಡೆ ನೆಡೆದೆ.

ಆಗ ತಾನೆ ಹೈಸ್ಕೂಲು ಮುಗಿಸಿದ್ದೆ, ಪ್ರತಿಯೊಬ್ಬರು ನನಗೆ ಕಾಮರ್ಸ್ ಮಾಡು, ಸಾಯಿನ್ಸ್ ಮಾಡು, ಆರ್ಟ್ಸ್ ಮಾದು, ಆ ಸಬ್ಜೆಕ್ಟ ತೊಗೊ, ಈ ಸಬ್ಜೆಕ್ಟ ತೊಗೊ ಎಂದು ತಮ್ಮ ಆಯ್ಕೆಗಳನ್ನು ನನ್ನ ಮೇಲೆ ಹೇರುವವರೆ, ಕೋನೆಗೆ ಮನೆಯವರ ಆಸೆಯಂತೆ ಸಾಯಿನ್ಸಗೆ ಆಡ್ಮಿಷನ್ ತೆಗೆದುಕೊಂಡೆ. ಕಾಳೇಜಿನ ಮೊದಲ ದಿನ ಬಾಗಿಲ ಬಳಿ ಎನೋ ಕರಪತ್ರ ಹಂಚುತ್ತಿದ್ದರು, ಎಲ್ಲರಂತೆ ನಾನು ತೆಗೆದುಕೊಂಡೆ, ಕ್ಲಾಸಿನಲ್ಲಿ ಹಲವು ಹಳೆಯ ಸಹಪಾಠಿಗಳನ್ನು ಕಂಡು ಎಲ್ಲರೂ ಒಟ್ಟಿಗೆ ಕುಳೀತುಕೊಂಡೆವು, ವಿರಾಮದಲ್ಲಿ ಟ್ಯೂಷನ್ನಿಗೆ ಯಾರ ಬಳಿ ಹೋಗುವುದೆಂದು ಎಲ್ಲರೂ ಚರ್ಚಿಸತೊಡಗಿದರು, ಅವರ ಬಳಿ- ಇವರ ಬಳಿ ಎಂದು ನಾವು ಚರ್ಚಿಸುತ್ತಿದ್ದಾಗ ಗೆಳೆಯ ಶಂಕರ, “ಈ ಕಾಲೇಜಿನ ಕೆಲವು ಲೇಕ್ಚರರುಗಳು ಟ್ಯೂಷನ್ ಹೇಳುತ್ತಾರೆ, ಅವರ ಬಳಿ ಹೋಗದವರನ್ನು ಪ್ರ್ಯಾಕ್ಟಿಕಲ್ ಪರೀಕ್ಷೆಗಳಲ್ಲಿ ತೊಂದರೆ ನೀಡುತ್ತಾರೆ” ಅಂದ. ಅಷ್ಟರಲ್ಲಿ ಕ್ಲಾಸಿನ ಬೆಲ್ ಹೋಡೆಯಿತು.

ಆವತ್ತಿನಿಂದ ಒಂದು ವಾರ ಪೂರ್ತಿ ಕ್ಲಾಸಿನಲ್ಲಿ ಲೇಕ್ಚರರುಗಳು ತಮ್ಮ ಕಡೆಗೆ ಟ್ಯೂಷನ್ನಿಗೆ ಬಂದ ಸ್ಟೂಡೆಂಟ್ಸ ತೆಗೆದುಕೊಂಡಿರುವ ಮಾರ್ಕ್ಸಗಳ ಬಗ್ಗೆ, ಅವರು BE, MBBSಗೆ ಯಾವ್ಯಾವ ಉತ್ತಮ ಕಾಲೇಜುಗಳಲ್ಲಿ ಸೇರಿರುವ ಬಗ್ಗೆ ಡಂಗುರ ಹೋಡೆಯುವುದೆ ಆಯಿತು. ಮೇಲಾಗಿ ಸಿನಿಯರ್ಸುಗಳು ಕೂಡಾ ಈಂಥವರ ಬಳಿಗೆ ನೀನು ಟ್ಯೂಷನ್ನಿಗೆ ಹೋದರೆ ಒಳ್ಳೆಯದು ಎಂದು ಬುದ್ದಿಮಾತಿನ ಬೆದರಿಕೆಯನ್ನು ಹಾಕತೊಡಗಿದರು. ಪ್ರತಿ ಪಿರಿಯಡ್ಡಿನಲ್ಲಿ ತಮ್ಮದೇ ಗುಣಗಾನ ಮಾಡಿಕೊಳ್ಳುತ್ತಿದ್ದ ಲೇಕ್ಚರರುಗಳು, ಸಿಲ್ಯಾಬಸ್ಸಿನಲ್ಲಿರುವ ವಿಷಯಗಳನ್ನು ಮುಟ್ಟಲೆ ಇಲ್ಲ. ನಾವೂ ಹೆದರಿಕೊಂಡು, ಮನೆಯಲ್ಲಿ ಟ್ಯೂಷನ್ನಿಗೆ ಹೋಗುತ್ತೆವೆ ಎಂದಾಗ, ಸಿಟ್ಟಿಗೆದ್ದ ಅಪ್ಪ “ಕ್ಲಾಸಿನ್ಯಾಗ ಎನೂ ಎಮ್ಮಿ ಮೇಯಿಸತಿಯೇನು? ಅಲ್ಲೆ ಕ್ಲಾಸಿನ್ಯಾಗ ಲಕ್ಷ್ಯ ಕೊಟ್ಟು ಕೇಳಿದರ ಯಾವ ಟ್ಯೂಷನ್ನು ಬ್ಯಾಡಾ” ಅಂದರು. ಮಾಸ್ತರುಗಳ ಬೆದರಿಕೆ ಒಂದಡೆಯಾದರೆ, ಮನೆಯಲ್ಲಿ ಅಪ್ಪನ ಬೈಗುಳ ತಿನ್ನಬೇಕಾದ ಪರಿಸ್ಥಿತಿ ನನ್ನದು.

ಹೀಗೆ ಒಂದು ದಿನ ಕ್ಲಾಸಿನಲ್ಲಿ ಮಾಸ್ತರರು ತಮ್ಮ ಗುಣಗಾಣ ಮಾಡಿಕೊಳ್ಳುತ್ತಾ, ಒಂದು ತಿಂಗಳಿಂದ ಹೇಳಿದ್ದನ್ನೆ ಹೇಳುತ್ತಾ ತಮ್ಮ ಬಹುಪರಾಕ್ ತಾವೇ ಹಾಡುತ್ತಿರುವಾಗ, ಆ ಎಂದಿನ ಜೋಗುಳಕ್ಕೆ ನಮಗೂ ಕೂಡಾ ಸಣ್ಣಗೆ ಜೊಂಪು ಎಳೆಯತೊಡಗಿತ್ತು. ಒಮ್ಮ್ಜಿಂದೊಮ್ಮಲೆ ಎದ್ದು ನಿಂತ ಒಬ್ಬ ನರಪೇತಲ “ಅಲ್ಲಿ ಹೇಳುವಂಗ ಇಲ್ಲಿ ಹೇಳಿ ನೋಡ್ರಿ, ನಾವು ಎಲ್ಲಾರೂ ಅದಕ್ಕಿಂತ ಹೆಚ್ಚಿಗೆ ಮಾರ್ಕ್ಸ ತೆಗಿತಿವಿ” ಎಂದು ಬಿಟ್ಟ, ಒಮ್ಮಂದೊಮ್ಮಲೆ ಕ್ಲಾಸಿಗೆ ಕ್ಲಾಸೆ ಸ್ಥಬ್ದವಾಗಿತ್ತು, ನಮ್ಮ ಹತ್ತಿರ ಸುಳಿಯುತ್ತಿದ್ದ ನಿದ್ದೆ ಮುರಿದುಕೊಂಡು ಮಾರುದೂರ ಹೋಗೆ ಬಿದ್ದಿತ್ತು, ಹಿಂದಿನ ಬೆಂಚಲ್ಲಿ ಕುಳಿತು ಚಿಕ್ಕಿ ಆಟ ಆಡುತ್ತಿದ್ದ ಶೋಭಾ ಮತ್ತು ಗೀತಾರ ಕೈಯಿಂದ ಬಿದ್ದ ಪೆನ್ನುಗಳ ಸದ್ದು ಇಡಿ ಕ್ಲಾಸಿಗೆ ಕೇಳಿತ್ತು.

ಆ ನಿಮಿಷದಲ್ಲಿ ಯಾರಿಗೆ ಎನು ಮಾಡಬೇಕೆಂದೆ ತಿಳಿಯಲಿಲ್ಲ, ಸಿಟ್ಟಿನಿಂದ ಮುಖವೆಲ್ಲ ಕೆಂಪಗಾಗಿದ್ದ ಮಾಸ್ತರರು ಹಾಜರಿ ಪುಸ್ತಕ ಸಹಿತ ಅಲ್ಲೆ ಬಿಟ್ಟು, “Come to my Chamber” ಎಂದು ಹೇಳಿ ದುರ್ದಾನ ತೊಗೊಂಡಂತೆ ಎದ್ದು ಹೋದರು. ಈ ನರಪೇತಲ ನಾವು ಅವನನ್ನು ಸರಿಯಾಗಿ ಗಮನಿಸುವ ಸಮಯವನ್ನು ನೀಡದೆ ಅವರ ಹಿಂದೆಯೇ ಹೋರಟುಬಿಟ್ಟ. ಯಾರೂ ಕುಳಿತಲ್ಲಿಂದ ಎಳುವ ಪ್ರಯತ್ನವನ್ನೆ ಮಾಡಲಿಲ್ಲ, ನಾವು ಕೆಲವು ಜನ ಧೈರ್ಯ ಮಾಡಿ ಸ್ಟಾಫರೂಮನ ಬಾಗಿಲ ಬಳಿ ಕಿವಿಗೊಟ್ಟು ನಿಂತೆವು, ಎನೂ ಸರಿಯಾಗಿ ಕೇಳಿಸಲಿಲ್ಲ. ಆದರೆ ಒಮ್ಮಲೆ “Get last” ಗುಡುಗು ಮತ್ತು ಅದರ ಹಿಂದೆಯೇ ಮುಗುಳ್ನಗೆ ಹೊತ್ತ ಈ ನರಪೇತಲ ಬಂದನು, ಅವನ ಧೈರ್ಯ ಕಂಡ ನಮಗೆ ‘ಅಬ್ಬಬ್ಬಾ’ ಅನಿಸಿದ್ದು ಮಾತ್ರ ನಿಜ.

ಮರುದಿನ ಬೆಳಿಗ್ಗೆ Notice Boardನ ಮೇಲೆ “ಚಿದಂಬರ” ಎಂಬುವನನ್ನು ಒಂದು ವಾರ ಕಾಲೇಜಿನ ತರಗತಿಗಳಿಂದ ಸಸ್ಪೆಂಡ ಮಾಡಲಾಗಿದೆಯೆಂದು ನೋಟಿಸ್ ಅಂಟಿಸಲಾಗಿತ್ತು, ಆವಾಗಲೆ ಎಲ್ಲರಿಗೂ ಗೋತ್ತಾಗಿದ್ದು ಆ ನರಪೇತಲನ ಹೆಸರು ಚಿದಂಬರ ಎಂದು. ಅದೆ ಚಿದಂಬರ ಮುಂದೆ ಒಂದೆ ತಿಂಗಳಲ್ಲಿ ವಿಧ್ಯಾರ್ಥಿ ನಾಯಕನಾಗಿ ಮನೆಪಾಠ ಮಾಡುವ ಲೇಕ್ಚರರಗಳ ಮನೆ ಮುಂದೆ ಧರಣಿ, ಸತ್ಯಾಗ್ರಹ ಹೂಡಿ, ಅವರು ಟ್ಯೂಷನ ಹೇಳದಂತೆ ಮಾಡಿದ, ಅತ್ಯುತ್ತಮ ಸಂಘ್ಹಟನಾ ಶಕ್ತಿಯುಳ್ಳ ಅವನು, ಜಾಣನೂ ಆಗಿದ್ದ. ಹೀಗಾಗಿ ಫಸ್ಟಕ್ಲಾಸಿನಲ್ಲಿ ಪಾಸಾಗಿ ಎಲ್ಲರಂತೆ BE, MBBS ಎನ್ನದೆ ನಮ್ಮೊಂದಿಗೆ(?) ಬಿ.ಎಸ್ಸಿ. ಸೇರಿದ, ಮುಂದೆ ಅವನು ಗಣಿತ ವಿಷಯದಲ್ಲಿ ಸ್ನಾತಕೊತ್ತರ ಪದವಿ ಪಡೆದರೆ ನಾನು ಎಂ.ಸಿ.ಎ.ಗೆ ಸೇರಿದೆ. ಮುಂದೆ ಹೋಟ್ಟೆ ಪಾಡಿಗಾಗಿ ನಾನು ಮುಂಬಯಿ ಸೇರಿದರೆ, ಅವನು ಎಲ್ಲಿಯೂ ಕೆಲಸ ಸಿಗದೆ ಊರಿಗೆ ಮರಳಿ ಅದೇ ಕಾಲೇಜಿನಲ್ಲಿ ಪಾರ್ಟ್ ಟೈಮ್ ಉಪನ್ಯಾಸಕನಾದ.

ಎರಡು ವರ್ಷಗಳ ಹಿಂದೆ ನಾನು ಊರಿಗೆ ಬಂದಿದ್ದಾಗ ಕುರುಚಲ ಗಡ್ಡ ಬಿಟ್ಟುಕೊಂಡು, ಮಾಸಿದ ಬಟ್ಟೆ ಹಾಕಿಕೊಂಡು ನಮ್ಮ ಕಾಲೇಜಿನ ಜವಾನ ಮಾರುತಿಗಿಂತ ಕಡೆಯಾಗಿ ಕಾಣುತ್ತಿದ್ದ, ನಾನು ಕಾರಣ ಕೇಳಿದಾಗ ‘ನನಗೆ ಸಿಗುವ ಪಗಾರ ಆ ಮಾರುತಿಗಿಂತ ಮೂರು ಪಟ್ಟು ಕಡಿಮೆ, ಹೀಗಿರದೆ ಹೇಗಿರಲಿ’ ನನ್ನನ್ನೆ ಪ್ರಶ್ನಿಸಿದ್ದ, ಅವನ ಪ್ರಶ್ನೆಗೆ ಉತ್ತರಿಸಲಾಗದೆ ನಾನು ಅವನಿಗೆ ಮುಂಬಯಿಗೆ ಬರುವಂತೆ ಹೇಳಿದೆ, ಮನೆಯಲ್ಲಿ ವಯ್ಯಸ್ಸಾದ ತಾಯಿಯನ್ನು ಬಿಟ್ಟು, ಹಸಿ ಬಾಣಂತಿ ಮತ್ತು ತನ್ನ ಮೂರು ತಿಂಗಳ ಕೂಸನ್ನು ಕರೆದುಕೊಂಡು ತನಗೆ ಬರಲಾಗುವುದಿಲ್ಲವೆಂದು, ಮುಂದೆ ಬರಬೇಕೆನಿಸಿದರೆ ಖಂಡಿತವಾಗಿಯೂ ನನಗೆ ತಿಳೀಸುತ್ತೆನೆ ಎಂದು ಹೇಳಿದ್ದ. ಆಗಿನ ಅವನ ಪರಿಸ್ಥಿತಿಗೂ ಮತ್ತು ಈಗಿನ ಅವನ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿತ್ತು, ಅದಕ್ಕೆ ಕಾರಣವೂ ನನಗೆ ತಿಳಿದಿತ್ತು. ಅಂತೂ ಚಿದಂಬರ ಮನುಷ್ಯನಾದ ಎಂದು ಸಂತೋಷ ಪಡುವುದೊ, ಇಲ್ಲ ಮತ್ತೊಂದು ಆದರ್ಶದ ಕಗ್ಗೋಲೆಗೆ ವಿಷಾದ ಪಡುವುದೊ ಎಂಬ ಮನದ ಗೊಂದಲಗಳ ನಡುವೆ ಮನೆಗೆ ಬಂದು ಮುಟ್ಟಿದ್ದೆ.

ಯಾಕೋ ಊರಿಗೆ ಬರಬಾರದಿತ್ತು ಎಂದನಿಸಿದ್ದು ಸುಳ್ಳಲ್ಲ.