ಪ್ರೇಮ – ಹೀಗೊಂದು ಫಿಲಾಸಫಿ

Advertisements

ಅಪ್ಪ ಮತ್ತು ನನ್ನ ಪಿ.ಯು.ಸಿ. ರೀಜಲ್ಟ್

ಅಪ್ಪ ಮತ್ತು ನನ್ನ ಪಿ.ಯು.ಸಿ. ರೀಜಲ್ಟ್

ಆವತ್ತು ರಾತ್ರಿ ಪೂರ ನಿದ್ರೆಯಿಲ್ಲ, ಒಮ್ಮೆಲೆ ಹಲವಾರು ಭಾವಗಳು ಮನದಲ್ಲಿ ಹುಟ್ಟುತ್ತಿದ್ದವು, ಒಮ್ಮೆ ದುಃಖ, ಇನ್ನೊಮ್ಮೆ ಸಂತೋಷ, ಒಮ್ಮೆ ಸಡಗರ, ಮತ್ತೊಮ್ಮೆ ಅಳು. ಎನಾಗಿದೆ ಅಪ್ಪನಿಗೆ, ಹಿಂದೆಂದೂ ಹೀಗೆ ಮಾತನಾಡಿಯೇ ಇರಲಿಲ್ಲ. ಇಷ್ಟು ವರ್ಷಗಳಾದರೂ ಅಪ್ಪನ ಈ ಮುಖ ನನಗೆ ಕಂಡಿರಲೆ ಇಲ್ಲ, ನಾನೇ ಸರಿಯಾಗಿ ಗಮನಿಸಿರಲಿಲ್ಲವೇ ಅಥವಾ ಅವರೇ ಬದಲಾಗಿದ್ದಾರೋ?

ನಿನ್ನೆ ಬೆಳಿಗ್ಗೆ ಎದ್ದಾಗ ಮನೆಯಲ್ಲಿ ಎಂಥದೋ ಸಡಗರ, ಮಾಳಿಗೆ ಮೇಲೆ ಮಲಗಿದ್ದವನನ್ನು ಎಬ್ಬಿಸಲು ಬಂದ ಅವ್ವ, ಎಂದಿನಂತೆ ಬೈಯುವ ಸಹಸ್ರನಾಮ ಕಾರ್ಯಕ್ರಮದೊಡನೆ ಎಬ್ಬಿಸದೆ, “ಅಪ್ಪಾ, ರಾಜಾ, ಎಳೋ ತಮ್ಮಾ ಹೋತ್ತಾತು, ಎದ್ದು ಜಳಕಾ ಮಾಡಿ, ದೇವರಿಗೆ ಹೋಗಬೇಕು, ಜಲ್ದಿ ಎಳಪಾ” ಎಂದಾಗ. ಇನ್ನೂ ರಜೆಯ ಗುಂಗಿನಲ್ಲಿದ್ದ ನನಗೆ ಇವತ್ತು ಮಂಗಳವಾರವೂ ಇಲ್ಲಾ ಶನಿವಾರವೋ ಇರಬೇಕು, ಇನ್ನು ಮಡಿ ಉಟ್ಟುಕೊಂಡು ದೇವರಿಗೆ ಎಡಿ (ನೈವೆದ್ಯ) ಒಯ್ಯಬೇಕಲ್ಲ ಎಂದುಕೊಳ್ಳುತ್ತಾ ಕಣ್ಣುಗಳನ್ನು ಉಜ್ಜುತ್ತಾ ಎದ್ದವನ ಎದುರಿಗೆ, ಒಮ್ಮಿಂದೊಮ್ಮಲೆ ಕಣ್ಣ ಮುಂದೆ ಧುತ್ತನೆ ಬಂದಂಗಾಯ್ತು, ಬೆಚ್ಚಿ ಹಿಂದೆ ಸರಿದು ಕುಳಿತವನಿಗೆ, ಅವ್ವ “ಎದ್ದ ಕೂಡಲೇ ದೇವರ ಫೋಟೊ ನೋಡಿದರ ಎಲ್ಲಾ ಒಳ್ಳೆಯದಾಕ್ಕೈತಿ” ಅಂದಳು. ಇವತ್ತೆನೈತಿ ಉಗಾದಿ ಹಬ್ಬ ಅಥವಾ ನನ್ನ ಹುಟ್ಟಿದ ಹಬ್ಬ?.. ಛೇ ಎರಡೂ ಈಗರ ಮುಗಿದಾವು ಅನಿಸಿದರು, ಸುಮ್ಮನೆ ಕೈ ಮುಗಿದು ಎದ್ದೆ.

“ಇವತ್ತು ಪಿ.ಯು.ಸಿ. ರೀಜಲ್ಟ ಬಿಡ್ತಾರಂತ, ಪೇಪರನ್ಯಾಗ ಸುದ್ದಿ ಬಂದೈತಿ” ಅಂದಾಗ ಪಕ್ಕದಲ್ಲಿಯೇ ಬಾಂಬ್ ಬಿದ್ದಂತಾಗಿ ಬೆಚ್ಚಿ ಬಿದ್ದೆ, ಆದರೂ ಸಾವರಿಸಿಕೊಂಡು, “ಬಂದ್ರ ಬರತೈತಿ ತೊಗೊ, ಅದಕ್ಯಾಕ ಮುಂಜಾನೆದ್ದು ಇಷ್ಟೆಲ್ಲಾ ಮಾಡಬೇಕು” ಎಂದೆ, “ಹುಚ್ಚಾ, ಮುಂಜಾನೆದ್ದು ದೇವರ ಫೋಟೋ ನೋಡಿದ್ರ ಚಲೋ ಮಾರ್ಕಾಸ್ ಬರ್ತಾವು” ಅನ್ನುತ್ತಾ ತಲೆ ಮೊಟಕಿದಳು.

ತಯಾರಾಗಿ ಕಾಲೇಜಿಗೆ ಹೋರಟವನಿಗೆ ಎನೋ ಸಡಗರ, ಗೆಳೆಯರೊಂದಿಗೆ ಇಂಜಿನೀಯರಿಂಗ್ ಚಲೋನ ಇಲ್ಲಾ ಮೇಡಿಕಲ್ ಚಲೋನಾ ಎಂದೆನ್ನುತ್ತಾ ಹೋರಟವನಿಗೆ ಮನದಲ್ಲಿ ಎಂಥದೋ ಭಯ, ಆದರೂ ಅದನ್ನು ತೋರಗೊಡದೆ, ಗೆಳೆಯರಂತೆ ನಾನೂ ಫಸ್ಟಕ್ಲಾಸಗೆ ಮೋಸವಿಲ್ಲ ಅನ್ನತೊಡಗಿದೆ, ಮನಸ್ಸಿನಲ್ಲಿ ಹಾಗೆಯೇ ನಂಬಲುತೋಡಗಿದೆ. ಕಾಲೇಜಿಗೆ ಹೋದರೆ ಸಂಜೆಗೆ ರೀಜಲ್ಟ ಪ್ರಕಟಿಸುತ್ತಾರೆಂದು ತಿಳಿಯಿತು. ಮನೆಗೆ ಬಂದು, ಊಟ ಮಾಡಿ, ಒಂಚೂರು ಟಿ.ವಿ. ನೋಡಿ ಹೋರಟವನಿಗೆ ಯಾಕೋ ಎದೆ ಒಂದೆ ಸವನೆ ಹೋಡೆದುಕೊಳ್ಳುತ್ತಿರುವುದು ಕೇಳಿಸಿತು.

ರೀಜಲ್ಟ್ ನೋಡಿದವನಿಗೆ ಮುಗಿಲೆ ಹರಿದು ತಲೆಯ ಮೇಲೆ ಬಿದ್ದಂತಾಯಿತು, ಎಷ್ಟು ಸಲ ಮೇಲಿಂದ ಕೆಳಗೆ ಹುಡುಕಾಡಿದರೂ ನನ್ನ ನಂಬರ್ ಕಾಣಿಸುತ್ತಿಲ್ಲ, ಗೆಳೆಯರನ್ನು ತಪ್ಪಿಸಿ ಗುಂಪಿನಿಂದ ಹೋರಬಂದವನಿಗೆ ಪಾಸಾದವರ ಕೇಕೆ ಕೇಳಿಸುತ್ತಿತ್ತು, ಎದುರಿಗೆ ಬಂದ ಕೆಲವರು ರೀಜಲ್ಟ ಬಗ್ಗೆ ಕೇಳಿದಾಗ ಎನೂ ಕೇಳದಂತೆ ಮುಂದೆ ನೆಡೆದೆ.

ಮನದಲ್ಲಿ ಎನೇನೋ ಹುಚ್ಚು ಆಲೋಚನೆಗಳು, ಮನೆಗೆ ಹೋಗಲೋ? ಬೇಡವೋ? ಮನೆಗೆ ಹೋದರೇ ಎಲ್ಲರನ್ನು ಎದುರಿಸುವುದು ಹೇಗೆ? ಎನೆಂದು ಉತ್ತರಿಸುವುದು? ಹಾಗೆಯೇ ಎಲ್ಲಿಯಾದರೂ, ಯಾರಿಗೂ ಹೇಳದಂತೆ ಹೋಗಿಬಿಡಲೆ? ಎಲ್ಲಿಗೆಂದು ಹೋಗುವುದು? ಸುಮ್ಮನೆ ಕಾಲೇಜಿನ ಹಿಂದೆಯೇ ಇರುವ ರೈಲು ಹಳಿಗಳ ಮೇಲೆ ಹೋಗಿ ಮಲಗಿಬಿಡಲಾ? ಹೀಗೆ ನೋರೆಂಟು ಯೋಚನೆಗಳು ಮೂಡಿದವು. ಎನೊಂದು ತಿಳಿಯದೇ ಕಣ್ಣಿಗೆ ಕಂಡ ಪಾರ್ಕಿನ ಕತ್ತಲ ಮೂಲೆಯ ಬೆಂಚೊಂದರ ಮೇಲೆ ಕುಳಿತೆ. ‘ಮುಂದೆ ಎನು?’ ಎಂಬ ಬೃಹತ್ ಪ್ರಶ್ನೆ ಮನದಲ್ಲಿ ಬಿಟ್ಟು ಬಿಡದೆ ಬೆನ್ನು ಹತ್ತಿತ್ತು. ಪಾರ್ಕಿನ ಗೇಟ್ ಹಾಕುವ ಸೂಚನೆಯೆಂದು ವಾಚ್‍ಮನ್ ಜೋರಾಗಿ ಶಿಟಿ (ವೀಷಲ್) ಉದಿದ. ಸಮಯ ಒಂಬತ್ತಾಯಿತು ಎಂದು ತಿಳಿದು ಮೇಲೆ ಎದ್ದೆ. ಆದದ್ದಾಗಲಿ ಮನೆಗೆ ಹೋಗುವೆನೆಂದುಕೊಂಡು ಕಾಲೇಳೆಯುತ್ತಾ ಮನೆಯ ಕಡೆ ನಡೆದೆ.

ಮನೆ ಹತ್ತಿರ ಬಂದಂತೆ, ಊಟ ಮಾಡಿ ಎಲೆ-ಅಡಿಕೆ ಮೆಲ್ಲುತ್ತ ಕೂತಿದ್ದ ಓಣಿಯ ಜನರೆಲ್ಲಾ ನನ್ನನ್ನೆ ನೋಡಿ ನಗುತ್ತಿದ್ದಾರೆ ಎಂದೆನಿಸುತ್ತಿತ್ತು. ಅನ್ಯಮನಸ್ಕನಾಗಿ ಕಾಲಿಗಡ್ಡವಾಗಿ ಬರುತ್ತಿದ್ದ ಕಲ್ಲುಗಳೆನ್ನೆಲ್ಲ ಜೋರಾಗಿ ಒದೆಯುತ್ತಾ ಹೋಗುತ್ತಿದ್ದಾಗ, ಕಲ್ಲು ಬಡಿದ ನಾಯಿಯೊಂದು ಜೋರಾಗಿ ಬೋಗಳಿತು, ನಾನು ಫೇಲಾಗಿರುವುದರಿಂದಲೇ ಇದಿಷ್ಟು ಜೋರಾಗಿ ಬೋಗಳುತ್ತಿದೆ ಎಂದೆನೆಸಿ, ಒತ್ತರಿಸಿಕೊಂಡು ಬಂದ ಸಿಟ್ಟಿನಲ್ಲಿ ನೆಲಕ್ಕೆ ಬಗ್ಗಿ ಕೈಗೆ ಸಿಕ್ಕಿದ ಸ್ವಲ್ಪ ದೊಡ್ಡದೆ ಕಲ್ಲನ್ನು ತೆಗೆದುಕೊಂದು ರೋಯ್ಯನೇ ಬಿಸಿದೆ, ಕಲ್ಲು ಹೊಡೆಸಿಕೊಂಡ ನಾಯಿ ‘ಕುಂಯ್ಯ್’ ಎನ್ನುತ್ತಾ ಓಡಿಹೋಯಿತು, ಮನಸ್ಸಿಗೆ ಸ್ವಲ್ಪ ಹಾಯೆನಿಸಿತು.

ಮನೆ ಹತ್ತಿರ ಬಂದಂತೆ ಎದೆ ಮತ್ತಷ್ಟು ಜೋರಾಗಿ ಹೊಡೆದುಕೊಳ್ಳಲಾರಂಭಿಸಿತು. ಮನೆಯಲ್ಲಿ ರೀಜಲ್ಟ್ ಎನಾಗಿದೆ ಎಂದು ಕೇಳಿದರೆ ಎನು ಹೇಳುವುದು, ಎಂದು ಯೋಚಿಸುತ್ತಾ ಹೋರಟವನಿಗೆ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತ ಅಪ್ಪ ಕಾಣಿಸಿದರು, ಜೋರಾಗಿ ‘ಒಂದಕ್ಕ’ ಒತ್ತರಿಸಿ ಬಂದವು. ದಿನಾಲೂ ಒಂಬತ್ತನ್ನುವಷ್ಟರಲ್ಲಿ ಮಲಗಿರುತ್ತಿದ್ದ ತಮ್ಮ ಓದುತ್ತಾ ಕುಳಿತಿರುವುದು ಕಾಣಿಸಿತು. ಹಾಗೆಯೇ ಹಿಂದಕ್ಕೆ ಓಡಿಬಿಡಲೇ ಅನಿಸಿತು. ಅಷ್ಟರಲ್ಲಿ ಗಮನಿಸಿದ ಅಪ್ಪ, “ರಾತ್ರಿ ಇಷ್ಟು ಹೋತ್ತಾದರೂ ಎಲ್ಲಿ ಅಲಿಯಾಕ್ ಹೋಗಿದ್ದಿ, ನಿಮ್ಮವ್ವ ಊಟಾ ಮಾಡಬೇಕಾ ಬ್ಯಾಡಾ” ಎಂದರು.

ಜೋರಾಗಿ ಕಾಲೇಳಿಯುತ್ತಾ ತಲೆ ತಗ್ಗಿಸಿ ಮನೆಯೊಳಗೆ ಹೊಕ್ಕವನೆ, ಚಪ್ಪಲಿ ಬಿಟ್ಟು, ಬಟ್ಟೆ ಬದಲಾಯಿಸಿ, ಕೈ ಕಾಲು ತೊಳೆದು, ಅಡಿಗೆ ಮನೆಯಲ್ಲಿ ತಲೆ ತಗ್ಗಿಸಿ ಕುಳಿತುಕೊಂಡೆ, ಅವ್ವ ಜೋರಾಗಿ ಸಪ್ಪಳ ಮಾಡುತ್ತಾ ತಾಟು ಹಚ್ಚಿದಳು. ತಲೆ ತಗ್ಗಿಸಿ ಉಣ್ಣುತ್ತಿರುವಾಗ ನನ್ನೊಳಗಿನ ಯಾತನೆಗಳ ಯುದ್ದಕ್ಕಿಂತ, ಹೋರಗಿನ ಈ ಮೌನವೇ ಹೆಚ್ಚು ಹೆದರಿಸುತ್ತಿದೆ ಅನಿಸಿತು.

‘ಯಾಕೆ ಯಾರೂ ಎನೂ ಕೇಳುತ್ತಿಲ್ಲ, ಇವರಿಗೇನಾದರೂ ನಾನು ಫೇಲಾಗಿರುವುದು ಗೋತ್ತಾಗಿದೆಯೋ ಹೇಗೆ? ಎಸ್.ಎಸ್.ಎಲ್.ಸಿಯಲ್ಲಿ ಬರಿ ಅರವತ್ತೊಂದು ಪರ್ಸೆಂಟ್ ಮಾರ್ಕ್ಸ ಬಂದಿದ್ದಕ್ಕೆ ಅಷ್ಟು ಸಿಟ್ಟಿಗೆದ್ದು ಕೂಗಾಡಿದ್ದ ಅಪ್ಪ ಯಾಕೆ ಹೀಗೆ ಮೌನವಾಗಿದ್ದಾರೆ, ದಿನವೂ ಎನಾದರೂ ಸುದ್ದಿ ಹೇಳುತ್ತಲೆ ಊಟ ನೀಡುತ್ತಿದ್ದ ಅವ್ವನಿಗೆ ಎನಾಗಿದೆ?’

ಉಂಡ ತಾಟನ್ನು ಬಚ್ಚಲಿಗಿಟ್ಟು ಹೋರಗೆ ಬರುತ್ತಿರುವವನಿಗೆ ಅವ್ವ ತನ್ನ ಕಣ್ಣಂಚಿನ ಹನಿಗಳನ್ನು ಒರೆಸಿಕೊಳ್ಳುತ್ತಿರುವುದು ಕಾಣಿಸಿತು, ಎದೆ ಬಡಿತ ಒಮ್ಮಿದೊಮ್ಮಲೆ ಜೋರಾಯಿತು. ‘ಇವರಿಗೆ ಆಗಲೇ ನಾನು ಫೇಲಾಗಿರೋದು ಗೋತ್ತಾಗಿದೆ’ ಎನ್ನುವುದು ಸ್ಪಷ್ಟವಾಯಿತು. ಎನು ಮಾತನಾಡುವುದು ಎಂದು ತಿಳಿಯದೆ ಹಾಸಿಗೆಯನ್ನೆತ್ತಿಕೊಂಡು ಮಾಳಗಿ ಏರಿದೆ, ಏರಿದ ತಕ್ಷಣ ಒಮ್ಮಲೇ ಎದೆಗೂಡಿನಿಂದ ಅಳು ಒತ್ತರಿಸಿ ಬಂದು ಬಿಕ್ಕುತ್ತಾ ಅಳಲಾರಂಭಿಸಿದೆ.

ಯಾರೋ ಬೆನ್ನ ಮೇಲೆ ಕೈಯಿಟ್ಟಂತಾಗಿ, ತಲೆ ಎತ್ತಿ ನೋಡಿದಾಗ ‘ಅಪ್ಪ’ ಕಂಡರು. ಅವರ ಮುಖ ಎಂದಿಗಿಂತಲೂ ಪ್ರಶಾಂತವಾಗಿತ್ತು, ಮೊದಲೆಂದು ಅವರ ಪ್ರಶಾಂತವಾದಿದ್ದ ಮುಖ ನೋಡಿದ ನೆನಪೂ ನನಗಿರಲಿಲ್ಲ, ಅಪ್ಪ ಎಂದರೇ ದೂರ್ವಾಸ ಮುನಿಯ ಸಿಟ್ಟು, ಅಪ್ಪ ಎಂದರೇ ತುಂಬಾ ಕಟ್ಟುನಿಟ್ಟು, ಅಪ್ಪ ಎಂದರೇ ಎನೋ ಭಯ. ಆದರೇ ಇವತ್ತು ಯಾಕೋ ಅಪ್ಪ ಅಪ್ತರೆನ್ನಿಸಿದರು.

ಬೆನ್ನ ಮೇಲೆ ಕೈಯಾಡಿಸುತ್ತಾ ಅಪ್ಪ, “ಇಂಥ ಪರೀಕ್ಷೆಗಳಲ್ಲಿ ಫೇಲಾದವನು ನೀನೇ ಮೊದಲಿನವನಲ್ಲ, ಎಷ್ಟೊ ಜನ ಜೀವನದಲ್ಲಿ ಫೇಲಾಗಿರುತ್ತಾರೆ, ಮೊದಲು ಕಣ್ಣೀರು ಒರೆಸಿಕೊ” ಎಂದು ಅವರೇ ಕಣ್ಣಿರು ಒರೆಸಲು ಮುಂದಾದರು, “ನೋಡು, ನೀನು ಬರಿ ಕಣ್ಣೀರು ಸುರಿಸುವುದರಿಂದ ನಿನ್ನ ರೀಜಲ್ಟ ಬದಲಾಗುವುದಿಲ್ಲ. ಸತ್ಯವನ್ನು ಒಪ್ಪಿಕೋ, ಅದರಿಂದ ನಿನ್ನ ಮನಸ್ಸು ಸ್ವಲ್ಪ ಹಗುರಾಗುತ್ತದೆ. ನೀನು ಯಾಕೆ ಫೇಲಾದೆ ಎಂದು ಕೇಳುವುದಿಲ್ಲ, ಕೇಳಿದರೆ ಬರಿ ಕಾರಣ ಹೇಳುವಷ್ಟರಲ್ಲಿ ಮತ್ತೊಂದು ಪರೀಕ್ಷೆ ಬಂದೆ ಬಿಡುತ್ತದೆ. ನೀನು ಫೇಲ್ ಆಗಿರೋದು ನಿಜ, ಅದನ್ನು ಒಪ್ಪಿಕೊಳ್ಳೊಣ, ಮನಸ್ಸು ಅದಕ್ಕೆ ನೂರಾರು ಕಾರಣಗಳನ್ನು ಕೊಡಬಹುದು ಆದರೆ ಅವುಗಳಿಗಿಂತ ದೊಡ್ಡ ಕಾರಣ ಅದು ‘ನೀನೇ’, ಹೌದು ನೀನು ಫೇಲಾಗೋಕೆ ನೀನೇ ಕಾರಣ. ನೀನೇ ಎಲ್ಲೋ ತಪ್ಪಿದಿಯಾ, ಅದು ನಮಗಿಂತ ಹೆಚ್ಚಾಗಿ ನೀನಗೆ ಗೋತ್ತು. ಮೊದಲು ಅದನ್ನು ಗುರುತಿಸಿ ಸರಿ ಪಡಿಸಿಕೊ. ಯಾರು ಎನೇ ಅಂದರೂ, ಎನೇ ಹೇಳಿದರೂ ನಿನ್ನದೊಂದು ವರ್ಷ ವೇಸ್ಟಾಯಿತು ಎಂದುಕೊಳ್ಳಬೇಡ, ನೀನಗೆ ಓದಲು, ಅರ್ಥ ಮಾಡಿಕೊಳ್ಳಲು ಒಂದು ವರ್ಷ ಹೆಚ್ಚಿಗೆ ಸಿಕ್ಕಿದೆ ಎಂದಿಕೋ. ಚೆನ್ನಾಗಿ ಓದಿಯಲ್ಲ, ಚೆನ್ನಾಗಿ ಅರ್ಥ ಮಾಡಿಕೊಂಡು ಪಾಸಾಗುತ್ತೆನೆ ಎಂದುಕೋ. ಮೇಲಾಗಿ ಬದುಕಿನಲ್ಲಿ ಓದಿಕೊಳ್ಳುವುದಕ್ಕೂ, ತಿಳಿದುಕೊಳ್ಳುವುದಕ್ಕೂ ಮತ್ತು ಅರ್ಥ ಮಾಡಿಕೊಳ್ಳುವುದಕ್ಕೂ ನಿನ್ನ ಸಿಲ್ಯಾಬಸ್ಸಿಗಿಂತ ಇನ್ನೂ ಹೆಚ್ಚು ಪುಸ್ತಕಗಳಿವೆ ಅವುಗಳನ್ನೊದು. ಬರಿ ಕಣ್ಣಿರು ಹಾಕಿ ಈಗ ಎಡವಿ ಬಿದ್ದ ಅನುಭವಕ್ಕೆ ಅವಮಾನಿಸಬೇಡ, ಈ ಅನುಭವ ನಿನ್ನ ಗೆಲುವಿನ ಹಾದಿಗೆ ಇನ್ನಷ್ಟು ವೇಗ ನೀಡುತ್ತದೆ. ಬದುಕಿನ ಹಠಕ್ಕಿಂತ ಗೆಲುವಿನ ಹಠ ದೊಡ್ಡದಲ್ಲ. ಬದುಕು ಬರಿ ಪಿ.ಯು.ಸಿ.ಯಲ್ಲ, ಬದುಕು ಬರಿ ಇಂಜಿನೀಯರಿಂಗ್ ಮತ್ತು ಮೇಡಿಕಲ್ ಅಲ್ಲ, ಬದುಕು ಬರಿ ಪಾಸ್ ಮತ್ತು ಫೇಲ್ ಅಲ್ಲ. ಬದುಕು ಇವುಗಳೆಲ್ಲಕ್ಕಿಂತ ದೊಡ್ಡದು. ಬದುಕಿನಲ್ಲಿ ಬರಿ ಗೆಲವುಗಳೇ ತುಂಬಿದರೆ ಗೆಲುವಿನ ಬೆಲೆ ಗೋತ್ತಾಗುವುದಿಲ್ಲ. ಸೋಲಿನ ನಂತರ ಬರುವ ಗೆಲವು ನಿನ್ನನ್ನು ಬದುಕಲು ಕಲಿಸುತ್ತದೆ. ನಿನ್ನ ಈ ಸೋಲನ್ನೇ ನಿನ್ನ ಗೆಲುವಿನ ಮೆಟ್ಟಿಲಾಗಿಸು. ಮನೆಯಲ್ಲಿ ಎಲ್ಲರಿಗೂ ಮನಸ್ಸಿಗೆ ನೋವಾಗಿದೆ, ಅವರು ಎನೇ ಅಂದರೂ ಅದು ನಿನ್ನ ಒಳ್ಳೆಯದಕ್ಕೆ…” ಹೀಗೆಲ್ಲಾ ಹೇಳುತ್ತಿದ್ದಾಗ, ಅಪ್ಪ ನನ್ನ ಕಣ್ಣಿಗೆ ಎಷ್ಟು ಪ್ರೀತಿಯ ಗೆಳೆಯರಾದರು, ಎಷ್ಟು ಒಳ್ಳೆಯ ಗುರುಗಳಾದರು. ನಮ್ಮಿಬ್ಬರ ನಡುವೆ ನಮಗರಿವಿಲ್ಲದಂತೆ ಮೂಡಿದ್ದ ಯಾವುದೋ ತೆರೆ ತಂತಾನೆ ಕಳಚಿ ಬಿದ್ದಿತ್ತು.